ಬೆಂಗಳೂರು: ಕಾನೂನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದೀಗ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಈ ಮೂಲಕ ವಿದ್ಯಾರ್ಥಿಗಳು ಕಾಲೇಜು ಪ್ರವೇಶ ಸಂದರ್ಭದಲ್ಲಿ ಎದುರಿಸುತ್ತಿದ್ದ ಸಮಸ್ಯೆಗೆ ತಾರ್ಕಿಕ ಪರಿಹಾರ ಸೂಚಿಸಿದೆ.

ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮ 5ರ ಪ್ರಕಾರ ಮೂರು ವರ್ಷದ ಕಾನೂನು ಪದವಿಗೆ (ಎಲ್‌ಎಲ್‌ಬಿ) ನೋಂದಣಿಯಾಗಲು ಮೂರು ವರ್ಷದ ಯಾವುದೇ ಪದವಿ ಪ್ರಮಾಣ ಪತ್ರ ಹೊಂದಿದ್ದಲ್ಲಿ, ಪಿಯುಸಿ ಉತ್ತೀರ್ಣರಾದ ಪ್ರಮಾಣಪತ್ರದ ಅಗತ್ಯತೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಉದ್ಯೋಗ ಆಧಾರಿತ ಪದವಿಪೂರ್ವ ಶಿಕ್ಷಣ (ಜೆಒಸಿ) ಪಡೆದಿದ್ದ ಕಾರಣದಿಂದ ಕಾನೂನು ಪದವಿ ಅಧ್ಯಯನಕ್ಕೆ ಅವಕಾಶ ನೀಡದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕ್ರಮ ಪ್ರಶ್ನಿಸಿ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ರಾಕೇಶ್ ಶೆಟ್ಟಿ ಎಂಬವರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಾರ್ ಕೌನ್ಸಿಲ್ ನಿಯಮ 5(ಎ) ಪ್ರಕಾರ 3 ವರ್ಷದ ಕಾನೂನು ಪದವಿಗೆ ನೋಂದಣಿ ಆಗಬೇಕಾದರೆ ಪದವಿ ಪ್ರಮಾಣಪತ್ರವನ್ನು ನೀಡಿದ್ದರೆ, ಪಿಯುಸಿ (ತತ್ಸಮಾನ) ಪ್ರಮಾಣದ ಅಗತ್ಯತೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೂ, ಐದು ವರ್ಷದ ಕಾನೂನು ಪದವಿಗೆ ಅರ್ಜಿ ಸಲ್ಲಿಸಿದಾಗ ಎಸ್​ಎಸ್​ಎಲ್​ಸಿ ಪಾಸಾದ ಬಳಿಕ ಎರಡು ವರ್ಷ (ಸಿಬಿಎಸ್​ಸಿ ಅಥವಾ ಐಸಿಎಸ್‌ಇ ಅಥವಾ ದ್ವಿತೀಯ ಪಿಯುಸಿ) ಅಧ್ಯಯನ ಅವಶ್ಯವಾಗಿರಲಿದೆ ಎಂದು ಪೀಠ ಹೇಳಿದೆ.

ಅರ್ಜಿದಾರ ರಾಕೇಶ್ ಶೆಟ್ಟಿ 1999 ರಲ್ಲಿ ಕಂಪ್ಯೂಟರ್ ತಂತ್ರಾಶಗಳಲ್ಲಿ ಉದ್ಯೋಗ ಆಧಾರಿತ ಪದವಿ ಪೂರ್ವ ಶಿಕ್ಷಣ (ಜೆಒಸಿ) ಅಧ್ಯಯನ ಮಾಡಿದ್ದರು. 2008 ರಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ (ಬಿಕಾಂ) ಪೂರ್ಣಗೊಳಿಸಿದ್ದರು.

ಹಲವು ವರ್ಷಗಳ ಕಾಲ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿದ ಬಳಿಕ 2024 ರಲ್ಲಿ ಕಾನೂನು ಪದವಿ ಪಡೆಯಲು ಬೆಂಗಳೂರಿನ ಸೌಂದರ್ಯ ಕಾನೂನು ಕಾಲೇಜಿನಲ್ಲಿ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. 2024-25 ರ ಸಾಲಿಗೆ ಶುಲ್ಕ ಪಾವತಿ ಮಾಡಿದ್ದರು.

2021ರ ಆಗಸ್ಟ್ 6 ರ ಸರ್ಕಾರದ ಆದೇಶದಂತೆ ಜೆಒಸಿಯನ್ನು ಪಿಯುಸಿಗೆ ಸಮಾನವಾದ್ದು ಎಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ, ಅರ್ಜಿದಾರರು ನೋಂದಣಿಗೆ ಅರ್ಹತೆ ಹೊಂದಿರುವುದಿಲ್ಲ ಎಂದು ತಿಳಿಸಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅವರ ನೋಂದಣಿಯನ್ನು ನಿರಾಕರಿಸಿತ್ತು. ಈ ಕುರಿತು ಇ-ಮೇಲ್ ಸಂದೇಶವನ್ನು ರವಾನಿಸಿತ್ತು. ಇದನ್ನು ಪ್ರಶ್ನಿಸಿ ರಾಕೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಕಾನೂನು ಪದವಿಗೆ ಎಸ್​ಎಸ್​ಎಲ್​ಸಿ, ಪಿಯುಸಿ ಹಾಗೂ ಪದವಿ ಅಗತ್ಯವಿದೆ ಎಂದು ಹೇಳಲಾಗಿದೆ. ಆದರೆ, ಅರ್ಜಿದಾರರು ಎಲ್ಲ ಅರ್ಹತೆ ಪಡೆದಿದ್ದಾರೆ” ಎಂದು ಪೀಠಕ್ಕೆ ವಿವರಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಶ್ವವಿದ್ಯಾಲಯದ ಪರ ವಕೀಲರು, ‘ಜೆಒಸಿಯಲ್ಲಿ ಭಾಷಾ ಅಧ್ಯಯನ ಇರುವುದಿಲ್ಲ. ಇದಕ್ಕಾಗಿ ಅದನ್ನು ಪಿಯುಸಿ ಎಂದು ಪರಿಗಣಿಸದಂತೆ ಸರ್ಕಾರ ಆದೇಶಿಸಿದೆ. ಆದ್ದರಿಂದ ಅರ್ಜಿದಾರರು ಕಾನೂನು ಪದವಿ ನೋಂದಣಿಗೆ ಅರ್ಹರಾಗುವುದಿಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.