ಬೆಂಗಳೂರು: ಅಪರಾಧಿಗಳಿಗೆ ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಕರೆ ನೀಡಿದರು.

ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಚಾಮರಾಜಪೇಟೆ, ಕಬ್ಬನ್ ಪಾರ್ಕ್ ಮತ್ತು ಹೈಗ್ರೌಂಡ್ಸ್ ಪೊಲೀಸ್ ಠಾಣೆ, ಕಚೇರಿಗಳನ್ನು ಉದ್ಘಾಟಿಸಿದ ಬಳಿಕ ಪುಲಕೇಶಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಪೊಲೀಸ್ ವಸತಿ ಸಮುಚ್ಛಯಗಳನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿ ಹೋಗುತ್ತಿದೆ. ಇವರೆಲ್ಲರ ರಕ್ಷಣೆ, ಆಸ್ತಿ ಪಾಸ್ತಿ ಮಾನ ಪ್ರಾಣ ರಕ್ಷಿಸಿ ನೆಮ್ಮದಿಯ ಬದುಕಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇದಕ್ಕಾಗಿ ಇಲಾಖೆಗೆ ಅಗತ್ಯವಾದ ಸವಲತ್ತು ಮತ್ತು ನೂತನ ಠಾಣೆಗಳನ್ನು ಒದಗಿಸಲು ಸರ್ಕಾರ ಸದಾ ಸಿದ್ದವಿದೆ ಎಂದರು.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದ್ದಾಗ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಹೀಗಾಗಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಿ ಠಾಣೆಗೆ ಬರುವವರನ್ನು ಆರೋಗ್ಯಕರವಾಗಿ ನಡೆಸಿಕೊಳ್ಳಿ ಎಂದು ಸೂಚಿಸಿದರು.

ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಕಡಿಮೆ ಆಗುತ್ತಿರುವುದು ನೆಮ್ಮದಿಯ ಸಂಗತಿ. ಆದರೆ ಪೊಲೀಸರು ಚಾಪೆ ಕೆಳಗೆ ತೂರಿದರೆ ಅಪರಾಧಿಗಳು ರಂಗೋಲಿ ಕೆಳಗೆ ತೂರಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಇದಕ್ಕೆ ಅವಕಾಶ ಆಗಬಾರದು ಎಂದರು.

ಜನರಿಗೆ ಉದ್ಯೋಗ ಇಲ್ಲದಿರುವುದು, ಬದುಕಿಗೆ ಅವಕಾಶ ಇಲ್ಲದಿರುವಾಗ ಅಪರಾಧ ಜಗತ್ತಿನ ಕಡೆಗೆ ಆಕರ್ಷಿತರಾಗುತ್ತಾರೆ. ನಗರದಲ್ಲಿ ರಿಯಲ್ ಎಸ್ಟೇಟ್ ದಂಧೆ ಕಾರಣದಿಂದ ಅಪರಾಧಗಳು ಹೆಚ್ಚಾಗುತ್ತಿವೆ. ಆದ್ದರಿಂದ ಶಿಕ್ಷೆಯ ಪ್ರಮಾಣ

ಪೊಲೀಸರು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈ ಜೋಡಿಸಿದರೆ ಸಹಿಸಲ್ಲ. ಯಾವುದೇ ಕಾರಣಕ್ಕೂ ರಿಯಲ್ ಎಸ್ಟೇಟ್ ಗೆ ಬೆಂಬಲ ನೀಡುಬಾರದು. ಬೆಂಬಲ ಕೊಡುವ ಕೆಲಸ ಮಾಡಿದರೆ ಸರ್ಕಾರ ಸಹಿಸಲ್ಲ. ಅಪರಾಧಿಗಳಿಗೆ ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಬೇಕು ಎಂದರು.

ಪೇದೆಗಳು, ಎಸ್ ಐ ಗಳು, ಇನ್ಸ್ ಪೆಕ್ಟರ್ ಗಳೇ ಹೆಚ್ಚೆಚ್ಚು ಕೆಲಸ ಮಾಡ್ತಾರೆ. ಇವರ ಯೋಗಕ್ಷೇಮ ಕೂಡ ನಮ್ಮ ಜವಾಬ್ದಾರಿ. ಪೊಲೀಸ್ ಸಿಬ್ಬಂದಿಯ ಗೃಹ ಯೋಜನೆಯನ್ನು ಸರ್ಕಾರ ಮುಂದುವರೆಸುತ್ತದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಭರವಸೆ ನೀಡಿದರು.

ಜನ ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಿ: ಪೊಲೀಸರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಕಿವಿಮಾತು

ಬೆಂಗಳೂರು:
“ಮನುಷ್ಯಲ್ಲಿರುವ ಅತ್ಯಂತ ಶ್ರೇಷ್ಠವಾದ ಗುಣ ನಂಬಿಕೆ. ಹೀಗಾಗಿ ಜನರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವಂತೆ ಕೆಲಸ ಮಾಡಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪೊಲೀಸರಿಗೆ ಕಿವಿಮಾತು ಹೇಳಿದ್ದಾರೆ.

“ನಿಂಬೆಗಿಂ ಹುಳಿಯಿಲ್ಲ, ದುಂಬಿಗಿಂ ಕರಿ ಇಲ್ಲ, ಶಂಭುಗಿಂತ ಅಧಿಕ ದೇವರಿಲ್ಲ. ಅಂದರೆ ದೇವರಲ್ಲಿ ದೊಡ್ಡವನು ಶಂಭು. ಅಂದರೆ ನಮ್ಮ ಈ ಪರಮೇಶ್ವರ (ವೇದಿಕೆ ಮೇಲೆ ಇದ್ದ ಸಚಿವ ಡಾ. ಜಿ. ಪರಮೇಶ್ವರ ಅವರತ್ತ ಕೈ ತೋರುತ್ತಾ) ಇದ್ದಾರಲ್ಲ ಹಾಗೇ. ಅದೇ ರೀತಿ ನಂಬಿಕೆಗಿಂತ ದೊಡ್ಡ ಗುಣವಿಲ್ಲ. ಹೀಗಾಗಿ ಜನ ನಿಮ್ಮ ಮೇಲೆ ಇಟ್ಟಿರೋ ನಂಬಿಕೆ ಉಳಿಸಿಕೊಳ್ಳಿ ಎಂದೂ ಅವರು ಪೊಲೀಸರನ್ನು ಉದ್ದೇಶಿಸಿ ಹೇಳಿದರು.

ಪುಲಕೇಶಿನಗರದಲ್ಲಿ ಪೊಲೀಸ್ ವಸತಿ ಗೃಹಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಬುಧವಾರ ಮಾತನಾಡಿದರು.

“ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸಚಿವ ಸಂಪುಟ ಅತ್ಯಂತ ಅನುಭವಿ ಸಚಿವರ ಸಂಪುಟ. ನಮ್ಮ ಸಂಪುಟದಲ್ಲಿ ನಾಲ್ವರು ಮಾಜಿ ಗೃಹ ಸಚಿವರು ಇದ್ದಾರೆ. ಪರಮೇಶ್ವರ್ ಅವರು 2 ಬಾರಿ, ಕೆ.ಜೆ. ಜಾರ್ಜ್, ಎಂ.ಬಿ ಪಾಟೀಲ್ ಹಾಗೂ ರಾಮಲಿಂಗಾ ರೆಡ್ಡಿ ಅವರಿಗೂ ಗೃಹ ಇಲಾಖೆಯ ಜವಾಬ್ದಾರಿ ಹೊತ್ತಿರುವ ಅನುಭವವಿದೆ. ಈ ಇಲಾಖೆಗೆ ಇವರೆಲ್ಲರೂ ಹೊಸ ರೂಪ ನೀಡಿದ್ದಾರೆ. ಹೀಗಾಗಿ ಪರಮೇಶ್ವರ ಅವರು ನಿಮಗೆ ನೀಡಿರುವ ಹಿತವಚನಗಳಂತೆ ಕೆಲಸ ಮಾಡಿ” ಎಂದು ತಿಳಿಸಿದರು.

“ಪರಮೇಶ್ವರ ಅವರು ಹೇಳಿದಂತೆ ಕರ್ನಾಟಕ ರಾಜ್ಯದ ಪೊಲೀಸರಿಗೆ ದೇಶದಲ್ಲಿ ತಮ್ಮದೇ ಆದ ಗೌರವವಿದೆ. ಪರಮೇಶ್ವರ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಗೆ ಇಂದು ಸುವರ್ಣ ದಿನ. ಮುಖ್ಯಮಂತ್ರಿಗಳು ಇಡೀ ದಿನ ನಿಮಗೆ ಸಮಯ ನೀಡಿದ್ದಾರೆ. ರಾಜ್ಯದಲ್ಲೇ ಅತ್ಯುತ್ತಮ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಪರಮೇಶ್ವರ್ ಅವರಿಗೆ ಅಭಿನಂದಿಸುತ್ತೇನೆ. ನಮ್ಮ ಸರ್ಕಾರ ನಿಮ್ಮ ಜತೆ ಸದಾ ಇರುತ್ತದೆ. ಹೊಸವರ್ಷಾಚರಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಕಾರ್ಯವೈಖರಿ ಉತ್ತಮವಾಗಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿ” ಎಂದರು.

“ಬಂಗಾರಪ್ಪನವರ ಕಾಲದಲ್ಲಿ ನಾನು ಬಂಧಿಖಾನೆ ಹಾಗೂ ಹೋಂಗಾರ್ಡ್ ಇಲಾಖೆಯ ಜವಾಬ್ದಾರಿ ಹೊತ್ತಿದೆ. ಆಗಿನ ಕಾಲಕ್ಕೂ ಈಗಲೂ ಅನೇಕ ತಂತ್ರಜ್ಞಾನಗಳು ಆಧುನೀಕರಣಗೊಂಡಿವೆ. ಅಪರಾಧಗಳನ್ನು ಬಗೆಹರಿಸಲು ಸೈಬರ್ ಕ್ರೈಂ ಹಾಗೂ ಅಂತಾರ್ಜಾಲದ ಮೂಲಕ ಪತ್ತೆ ಮಾಡುವ ಅವಕಾಶವಿದೆ. ಹೀಗಾಗಿ ನಾವು ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕು” ಎಂದರು.

“ನಾನು ಈ ಹಿಂದೆ ಸಿಎಂ ಹಾಗೂ ಗೃಹ ಸಚಿವರ ಸಮ್ಮುಖದಲ್ಲೇ ಡಿಜಿ ಅವರಿಗೆ ಗದರಿದ್ದೆ. ಕಾರಣ, ಉಡುಪಿ ಹಾಗೂ ವಿಜಯಪುರದಲ್ಲಿ ಪೊಲೀಸರು ಬಿಜೆಪಿ ಶಾಲು ಧರಿಸಿದ್ದರು. ಈಗಲೂ ಆಗಿದ್ದ ಡಿಜಿ ಅವರು ಅದೇ ವಿಚಾರವನ್ನು ನಮ್ಮ ಮೇಲೆ ಇಟ್ಟುಕೊಂಡಿದ್ದಾರೆ. ನಾನು ನಿಮಗೆ ಹೇಳುವುದೇನೆಂದರೆ, ನಮ್ಮಂತಹ ರಾಜಕಾರಣಿಗಳು ನಿಮ್ಮನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ನಿಮ್ಮ ಕರ್ತವ್ಯ, ನಿಮ್ಮ ಸಮವಸ್ತ್ರ, ನಿಮ್ಮ ಘನತೆಗೆ ಯಾವತ್ತೂ ಕಳಂಕ ಬರಬಾರದು. ನಾವು ಇವತ್ತು ಬರುತ್ತೇವೆ, ನಾಳೆ ಹೋಗುತ್ತೇವೆ. ಆದರೆ ನಿಮ್ಮ ಖಾಕಿ ಹಾಗೂ ಅದರ ಖದರ್, ಶಿಸ್ತು, ಪೊಲೀಸರಿಗೆ ಇರುವ ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು. ಜನ ನಿಮ್ಮ ಬಳಿ ನ್ಯಾಯ ಪಡೆಯಲು ಬರುತ್ತಾರೆ. ಅವರಿಗೆ ನ್ಯಾಯ ಕೊಡಿಸುವ ಕೆಲಸ ನಿಮ್ಮಿಂದ ಯಶಸ್ವಿಯಾಗಲಿ” ಎಂದು ತಿಳಿಸಿದರು

“ನಾನು 1988ರಲ್ಲಿ ವಿಶ್ವ ಯೂಥ್ ಅಂಡ್ ಸ್ಟೂಡೆಂಟ್ ಫೆಸ್ಟಿವಲ್ ಸಮ್ಮೇಳನಕ್ಕಾಗಿ ಪ್ಯೊಂಗ್ಯಾಂಗ್ ಗೆ ತೆರಳಿದ್ದೆ. ನಾನು, ಸೀತರಾಮ್ ಯೆಚೂರಿ ಹಾಗೂ ತಿವಾರಿ ಅಲ್ಲಿ ನಡೆದುಕೊಂಡು ಹೋಗುವಾಗ ಅಲ್ಲಿನ ದೊಡ್ಡ ವೃತ್ತದ ಬಳಿ ಸಂಚಾರಿ ದಟ್ಟಣೆ ಇತ್ತು. ಆಗ ಕೇವಲ ಓರ್ವ ಮಹಿಳಾ ಟ್ರಾಫಿಕ್ ಸಿಬ್ಬಂದಿ ಅದನ್ನು ನಿಭಾಯಿಸುತ್ತಿದ್ದರು. ನಾವು ಕುತೂಹಲದಿಂದ ವೀಕ್ಷಣೆ ಮಾಡಿದೆ. ನಂತರ ಆಕೆಯನ್ನು ಕರೆದು ನಿಮ್ಮ ವೇತನವೆಷ್ಟು ಎಂದು ಕೇಳಿದೆ. ಅದಕ್ಕೆ ಆಕೆ ಕೋಪಗೊಂಡಳು. ನಾನು ವೇತನಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ನನ್ನ ದೇಶಕ್ಕಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಉತ್ತರಿಸಿದಳು” ಎಂದರು.

“ಎಲ್ಲರೂ ಬದುಕು ನಡೆಸಲು ಕೆಲಸ ಮಾಡುತ್ತಾರೆ. ಆದರೆ ಪ್ರತಿಯೊಬ್ಬ ಪೊಲೀಸರು ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ. ಹೀಗಾಗಿ ಜನ ಅವರ ಮೇಲೆ ಅಪಾರವಾದ ನಂಬಿಕೆ ಇಡುತ್ತಾರೆ. ಅದನ್ನು ನೀವು ಉಳಿಸಿಕೊಳ್ಳಿ” ಎಂದು ತಿಳಿಸಿದರು.