ಬೆಳಗಾವಿ : ಹಲವು ವರ್ಷಗಳ ವಿದೇಶಿಯರ ಆಕ್ರಮಣದಿಂದಾಗಿ ಎಲೆ ಮರೆಯ ಕಾಯಿಯಂತಾಗಿದ್ದ ಸಂಸ್ಕೃತ ಭಾಷೆಯು ಪುನ: ತನ್ನ ಪ್ರಭೆಯನ್ನು ಬೀರಲು ಪ್ರಾರಂಭಿಸಿದೆ. ಈ ಪ್ರಭೆಯಿಂದಾಗಿ ಇಂದು ನಮ್ಮ ಬೆಳಗಾವಿ ನಗರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಯುವಕ-ಯುವತಿಯರು ಹಾಗೂ ಸಾವಿರಕ್ಕೂ ಹೆಚ್ಚು ಜನ ಸಂಸ್ಕೃತದಲ್ಲಿ ಮಾತನಾಡುತ್ತಾರೆಂಬುದು ಆಶ್ಚರ್ಯವೆನಿಸಬಹುದು. ಈ ರೀತಿ ದೇಶದ ಎಲ್ಲೆಡೆ ಮತ್ತು ವಿದೇಶದಲ್ಲೂ ಸಹ ಸಂಸ್ಕೃತದಲ್ಲಿ ಸುಲಭವಾಗಿ ಮಾತನಾಡುವುದನ್ನು ಮತ್ತು ತನ್ಮೂಲಕ ನಮ್ಮ ಜ್ಞಾನ ವಿಜ್ಞಾನದ ನಿಧಿಯಾದ ಶಾಸ್ತ್ರಗ್ರಂಥಗಳ ಅಧ್ಯಯನಕ್ಕೆ ಕೋಟ್ಯಾಂತರ ಜನರನ್ನು ಕಳೆದ 43 ವರ್ಷಗಳಿಂದ ಪ್ರೇರೇಪಿಸುತ್ತಲಿದೆ ಸಂಸ್ಕೃತ ಭಾರತೀ ಎನ್ನುವ ಲಾಭರಹಿತ ಸಂಸ್ಥೆ.
ಸಂಸ್ಕೃತ ಭಾರತಿ ವತಿಯಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಪ್ರಾಂತ ಸಮ್ಮೇಳನವು ಈ ಬಾರಿ ನಮ್ಮ ಕುಂದಾನಗರಿಯ ಮರಾಠ ಮಂದಿರದಲ್ಲಿ ಜನವರಿ 11 ಹಾಗೂ 12 ರಂದು ನಡೆಯುತ್ತಿರುವುದು ಬೆಳಗಾವಿಗರಿಗೆ ವಿಶೇಷವಾಗಿದೆ.
ಸಮ್ಮೇಳನದಲ್ಲಿ ಹಲವಾರು ವಿಶೇಷ ವಕ್ತಾರರು ವಿಭಿನ್ನ ಸಂಸ್ಕೃತ ವಿಷಯಗಳ ಕುರಿತು, ಸಂಸ್ಕೃತದ ಮುಂದಿನ ಬೆಳವಣಿಗೆಯ ಕುರಿತು, ಮನೆ-ಮನಗಳಿಗೆ ಸಂಸ್ಕೃತದ ರುಚಿಯನ್ನು ತಲುಪಿಸುವ ನಿಟ್ಟಿನಲ್ಲಿ ಚರ್ಚಿಸಿ ಪ್ರೇರಣೆ ನೀಡಲಿದ್ದಾರೆ. ನಗರದ ಮುಖ್ಯಬೀದಿಗಳಲ್ಲಿ ಸಂಸ್ಕೃತ ಶೋಭಾಯಾತ್ರೆ, ಸಂಸ್ಕೃತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಸ್ಕೃತದ ಪುಸ್ತಕ ಪ್ರದರ್ಶಿನಿ, ಸಂಸ್ಕೃತ ವಸ್ತು ಪ್ರದರ್ಶಿನಿ, ಸಂಸ್ಕೃತ ವಿಜ್ಞಾನ ಪ್ರದರ್ಶಿನಿ ಮುಂತಾದವುಗಳು ಸಮ್ಮೇಳನದ ಭಾಗವಾಗಿವೆ. ಈ ಸಮ್ಮೇಳನಕ್ಕೆ ಇಡೀ ಉತ್ತರ ಕರ್ನಾಟಕದಿಂದ ಸುಮಾರು 800ಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಯಾವುದೇ ಜಾತಿ ವರ್ಗಗಳಿಗೆ ಸೀಮಿತಗೊಳ್ಳದೆ ಸಮಾಜದ ಎಲ್ಲ ಸ್ತರದ, ಎಲ್ಲ ವಯಸ್ಸಿನ ಜನರು ಸಂಸ್ಕೃತದಲ್ಲಿ ಮಾತನಾಡುವುದನ್ನು ಈ ಸಮ್ಮೇಳನದಲ್ಲಿ ಕಾಣಬಹುದಾಗಿದೆ.
ದಿನಾಂಕ 11 ಶನಿವಾರ ಬೆಳಿಗ್ಗೆ 7.30 ಕ್ಕೆ ಸಂಸ್ಕೃತ ಪ್ರದರ್ಶಿನಿಯ ಉದ್ಘಾಟನಾ ಕಾರ್ಯಕ್ರಮವಿದ್ದು ಮರಾಠಾ ಮಂದಿರದ ಅಧ್ಯಕ್ಷರಾದ ಶ್ರೀ ಅಪ್ಪಾ ಸಾಹೇಬ ಗುರವರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಶಿಕ್ಷಣ ತಜ್ಞ ಮಿಲಿಂದ ಬಡಕುಂದ್ರಿ ಹಾಗೂ ವಿತ್ತ ಲೇಖಜ್ಞ ಅಶೋಕ್ ಪರಾಂಜಪೆ ಭಾಗವಹಿಸಲಿದ್ದಾರೆ.
ಮುಖ್ಯ ಸಮ್ಮೇಳನದ ಉದ್ಘಾಟನೆಯು ಶನಿವಾರ ಬೆಳಗ್ಗೆ 10 ಗಂಟೆಗೆ ನೆರವೇರಲಿದ್ದು ಉದ್ಘಾಟಕರಾಗಿ ಸಂಸ್ಕೃತ ಗ್ರಾಮವಾದ ನಂದೇಶ್ವರದಿಂದ ಪರಮಪೂಜ್ಯ ಶ್ರೀ ದುಂಡೇಶ್ವರ ಮಹಾಸ್ವಾಮಿಗಳು ಆಗಮಿಸಲಿದ್ದಾರೆ. ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ನಿರ್ದೇಶಕ ಡಾ. ಸುಹಾಸ್ ಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ. ಸಂ. ಭಾ ಅಖಿಲ ಭಾರತ ಶ್ಲೋಕ ಪಾಠಣ ಕೇಂದ್ರದ ಪ್ರಮುಖರಾದ ಶ್ರೀ ಚಿನ್ಮಯ ಆಂಶೇಖರ ರವರು ಮುಖ್ಯ ವಕ್ತಾರರಾಗಿ ಮತ್ತು ಡಾ. ಜಿ ಆರ್ ಅಂಬಲಿ ಅಧ್ಯಕ್ಷರಾಗಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ವಿಶೇಷ ವಕ್ತಾರರಾಗಿ ಟಿ.ಎನ್ ಪ್ರಭಾಕರ್ (ಸಂ.ಭಾ ಅಖಿಲ ಭಾರತ ಕುಟುಂಬ ಪ್ರಬೋಧನ ಪ್ರಮುಖರು), ರವೀಂದ್ರ ಜಿ (ರಾ. ಸ್ವ. ಸೇ ಸಂಘದ ಪ್ರಚಾರಕರು), ರಾಮಕೃಷ್ಣ ತದ್ದಲಸೆ (ಸಂ.ಭಾ ರಾಜ್ಯ ಪ್ರಶಿಕ್ಷಣ ಪ್ರಮುಖರು) ಉಪಸ್ಥಿತರಿರುತ್ತಾರೆ.
ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಅಶೋಕ ಗಂಗೋಡ್ಕರ್ (ಖ್ಯಾತ ಉದ್ಯಮಿ), ಸಮೀರ್ ಕಣಬರ್ಗಿ (ಖ್ಯಾತ ಉದ್ಯಮಿ) ಭಾಗವಹಿಸಲಿದ್ದು, ಸಂಸ್ಕೃತ ಭಾರತೀ ಪ್ರಾಂತ ಉಪಾಧ್ಯಕ್ಷೆ ಶಾರದಾ ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ.
ಶನಿವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತ್ತು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಂಸ್ಕೃತ ಪ್ರದರ್ಶಿನಿಯು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ. ಈ ಪ್ರದರ್ಶಿನಿಯಲ್ಲಿ ಹಲವು ಸಂಸ್ಕೃತ ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ. ಸಂಸ್ಕೃತಮಯ ವಾತಾವರಣವನ್ನು ಬೆಳಗಾವಿ ಜನರೆಲ್ಲರೂ ಕಣ್ತುಂಬಿ ಕಣ್ತುಂಬಿಕೊಳ್ಳಲು ವಿಶೇಷ ಸಂದರ್ಭವಿದ್ದು ಬೆಳಗಾವಿಯ ಎಲ್ಲ ಜನರು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.