ಬೆಂಗಳೂರು : ಆಶಾ ಕಾರ್ಯಕರ್ತೆಯರ ಸಂಘಟನೆಯ ಮುಖಂಡರ ಜೊತೆಗಿನ ಸಿಎಂ ಸಿದ್ದರಾಮಯ್ಯ ಅವರ ಸಂಧಾನ ಯಶಸ್ವಿಯಾಗಿದೆ.ಮುಷ್ಕರ ವಾಪಸ್ ಪಡೆಯಲು ಅಶಾ ಕಾರ್ಯಕರ್ತೆಯರು ನಿರ್ಧಾರ ಕೈಗೊಂಡಿದ್ದಾರೆ.

ಮಾಸಿಕ ₹15,000 ಗೌರವಧನ ಮತ್ತು ಇತರ ಸವಲತ್ತುಗಳಿಗಾಗಿ ಆಗ್ರಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ಪ್ರತಿನಿಧಿಗಳ ಜತೆಗೆ ಶುಕ್ರವಾರ ಬೆಳಿಗ್ಗೆ ನಡೆದ ಮತ್ತೊಂದು ಮಾತುಕತೆಯೂ ಮುರಿದುಬಿದ್ದಿತ್ತು. ಮುಖ್ಯಮಂತ್ರಿಯ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದ ಧರಣಿ ನಿರತರು, ಸಂಕ್ರಾಂತಿಯನ್ನೂ ಇಲ್ಲೇ ಆಚರಿಸುವುದಾಗಿ ಪಣ ತೊಟ್ಟಿದ್ದರು.

ಮಂಗಳವಾರದಿಂದ ಆರಂಭವಾಗಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿಯು ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿರಿಸಿತ್ತು. ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಪ್ರತಿಭಟನಾ ನಿರತರ ಪ್ರತಿನಿಧಿಗಳ ಜತೆಗೆ ಶುಕ್ರವಾರ ಬೆಳಿಗ್ಗೆಯೇ ಸಭೆ ನಡೆಸಿದ್ದರು. ಆದರೆ ಬೇಡಿಕೆ ಈಡೇರಿಕೆ ಸಂಬಂಧ ಒಮ್ಮತಕ್ಕೆ ಬರಲು ಆಗದೇ ಇದ್ದ ಕಾರಣಕ್ಕೆ ಮಾತುಕತೆ ಮುರಿದುಬಿದ್ದಿತ್ತು.

ಬುಧವಾರ ಮತ್ತು ಗುರುವಾರ ನಡೆದ ಸಭೆಯಲ್ಲಿ ಸರ್ಕಾರದ ಪ್ರತಿನಿಧಿಗಳು ವ್ಯಕ್ತಪಡಿಸಿದ್ದಕ್ಕಿಂತ ಭಿನ್ನವಾದ ನಿಲುವನ್ನು ಅಧಿಕಾರಿಗಳು ಪ್ರದರ್ಶಿಸಿದ್ದರು. ಆಶಾ ಕಾರ್ಯಕರ್ತೆಯರ ಅವಶ್ಯಕತೆಯೇ ಇಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿಯೇ ಎಲ್ಲವನ್ನೂ ನಿಭಾಯಿಸುತ್ತಾರೆ ಎಂಬ ಅಭಿಪ್ರಾಯ ಸರ್ಕಾರದ ಕಡೆಯಿಂದ ವ್ಯಕ್ತವಾಗಿತ್ತು. ಕೊನೆಗೂ ಆಶಾ ಕಾರ್ಯಕರ್ತೆಯರ ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.