ಪುತ್ತೂರು: ಪುತ್ತೂರಿನ ಮುಂಡೂರು ಗ್ರಾಮದಲ್ಲಿ ಸುಮಾರು 15 ಎಕ್ರೆ ಜಾಗವನ್ನು ಕ್ರೀಡಾಂಗಣಕ್ಕೆ ಕಾಯ್ದಿರಿಸಲಾಗಿದ್ದು ಇದರ ಅಭಿವೃದ್ದಿಗೆ ಖೇಲೋಇಂಡಿಯಾಗೆ 20 ಕೋಟಿ ರೂ ಅನುದಾನವನ್ನು ನೀಡುವಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಶಾಸಕ ಅಶೋಕ್ ರೈ ಅವರು ಯುವಜನ ಸೇವೆ ಮತ್ತು ಕ್ರೀಡೆ ಇಲಾಖೆ ಮುಖ್ಯ ಕಾರ್ಯದರ್ಶಿ ಡಾ.ರಣದೀಪ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯು ಕನಾಟಕದ ಕರಾವಳಿ ಜಿಲ್ಲೆಯಾಗಿದ್ದು, ಪುತ್ತೂರು ತಾಲೂಕು ಜಿಲ್ಲೆಯಲ್ಲಿ ಅತೀ ದೊಡ್ಡ ತಾಲೂಕಾಗಿರುತ್ತದೆ. ನನ್ನ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಹಲವಾರು ಗ್ರಾಮೀಣ ಕ್ರೀಡಾಪಟುಗಳು ಪ್ರತಿಭೆಗಳು ರಾಜ್ಯ, ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಶಾಲಿಯಾಗಿರುತ್ತಾರೆ. ತಾಲೂಕಿನ ಸುತ್ತಮುತ್ತ ಇರುವ ಎಲ್ಲಾ ಗ್ರಾಮದ ಯುವ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅನುಕೂಲವಾಗುವಂತೆ ಕ್ರೀಡಾಂಗಣ ನಿರ್ಮಾಣ ಮಾಡುವ ಅತೀ ಅವಶ್ಯವಿರುತ್ತದೆ.
ಪುತ್ತೂರು ತಾಲೂಕಿನ ಮುಂಡೂರು ಗ್ರಾಮದಲ್ಲಿ ಈಗಾಗಲೇ ಕ್ರೀಡಾಂಗಣ ರಚನೆ ಮಾಡುವ ಬಗ್ಗೆ 15.00 ಎಕ್ರೆ ಜಮೀನನ್ನು ಕ್ರೀಡಾಂಗಣದ ಉದ್ದೇಶಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಸರಲ್ಲಿ ಕಾಯ್ದಿರಿಸಲಾಗಿದೆ ಹಾಗೂ ವಿವಿಧೋದ್ದೇಶ ಕ್ರೀಡಾಂಗಣ ನಿರ್ಮಾಣ ಮಾಡಲು ಹಾಗೂ ಈಜುಕೊಳ(50 ಮಿ.25 ಮಿ) ನಿರ್ಮಾಣ ಮಾಡಲು 20.00 ಕೋಟಿಗೆ ವಿವರವಾದ ಯೋಜನಾ ವರದಿ ತಯಾರಿಸಲಾಗಿದೆ. ಆದ್ದರಿಂದ ತಾಲೂಕಿನಲ್ಲಿ ಸುಸ್ಥಿತವಾದ ಕ್ರೀಡಾಂಗಣ ನಿರ್ಮಾಣ ಮಾಡಲು ಕೇಂದ್ರ ಸರಕಾರದ “ಖೇಲೋ ಇಂಡಿಯಾ” ಯೋಜನೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಮಂಡಿಸಿ ಅನುದಾನ ಒದಗಿಸುವಲ್ಲಿ ರಾಜ್ಯ ಸರಕಾರ ಪ್ತಸ್ತಾವನೆ ಸಲ್ಲಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.
—
ಪುತ್ತೂರು ತಾಲೂಕಿನ ಮುಂಡೂರು ಗ್ರಾಮದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣ ಮಾಡುವ ಉದ್ದೇಶದಿಂದ 15 ಎಕ್ರೆ ಜಾಗ ಕಾಯ್ದಿರಿಸಲಾಗಿದೆ. ಈ ಕ್ರೀಡಾಂಗಣ ಅಭಿವೃದ್ದಿಗೆ ಸುಮಾರು 20 ಕೋಟಿ ರೂ ಅನುದಾನ ಅಗತ್ಯವಿದೆ.ಕ್ರೀಡಾಂಗಣ ನಿರ್ಮಾಣವಾದಲ್ಲಿ ತಾಲೂಕಿನ ಕ್ರೀಡಾಪಟುಗಳು ಹಾಗೂ ಇನ್ನಿತರ ಭಾಗದ ಕ್ರೀಡಾಳುಗಳಿಗೆ ತುಂಬಾ ಪ್ರಯೋಜನವಾಗಲಿದೆ.ಅನುದಾನಕ್ಕಾಗಿ ಖೇಲೋ ಇಂಡಿಯಾಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.ಅನುದಾನ ದೊರೆಯುತ್ತದೆ ಎಂಬ ಸಂಪೂರ್ಣ ವಿಶ್ವಾಸವೂ ಇದೆ-
ಅಶೋಕ್ ರೈ, ಶಾಸಕರು ಪುತ್ತೂರು