ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಆದರೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರವನ್ನು ಎಚ್ಚರಿಸಬೇಕಾದ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ಧ್ವನಿ ಕಳೆದುಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಯನೀಯ ಸೋಲು ಅನುಭವಿಸಿ ಮನೆ ಸೇರಿರುವ ಬಿಜೆಪಿ ಪಾಲಿಗೆ ಅತ್ಯಂತ ಪ್ರಬಲ ಅಸ್ತ್ರಗಳಿದ್ದರೂ ಆ ಪಕ್ಷ ಮಾತ್ರ ಮೌನವಹಿಸಿದೆ. ಲೋಕಸಭಾ ಚುನಾವಣೆಗೆ ತಯಾರಿ ನಡೆಸಲು ಬೆಳಗಾವಿಯ ಇತ್ತೀಚಿನ ಬೆಳವಣಿಗೆಗಳನ್ನು ಸರಕಾರದ ಮುಂದಿಟ್ಟು ಹೋರಾಟ ಮಾಡಬೇಕಾಗಿದ್ದ ಬಿಜೆಪಿಯ ವೈಫಲ್ಯವನ್ನು ಜಿಲ್ಲೆಯ ಜನ ಪ್ರಶ್ನಿಸಿದ್ದಾರೆ.

ಬೆಳಗಾವಿ ಮಹಾನಗರದ ವ್ಯಾಪ್ತಿಯ
ಹೊಸ ವಂಟಮೂರಿ,ಸುಳಗೆ,ನಾವಗೆ
ಗ್ರಾಮಗಳಲ್ಲಿ ನಡೆದ ಘಟನೆಗಳು ಹಾಗೂ
ಬೆಳಗಾವಿಯ ವಡಗಾವಿ ಸುತ್ತಮುತ್ತಲೂ
ನಡೆದ ಸರಣಿ ಕಳುವಿನ ಪ್ರಕರಣಗಳು
ನಾಗರಿಕರಲ್ಲಿ ಭಯ,ಭೀತಿ ಉಂಟು
ಮಾಡಿದ್ದು ಮುಂದಿನ ದಿನಗಳಲ್ಲಿ ಏಲ್ಲಿ
ಏನಾಗುವದೊ ಎಂಬ ಆತಂಕ ಮನೆ
ಮಾಡಿದೆ.

ಹೊಸ ವಂಟಮೂರಿಯ ಮಹಿಳೆಯೊಬ್ಬರ ವಿವಸ್ತ್ರ ಘಟನೆ ದೇಶದ
ಗಮನ ಸೆಳೆಯಿತಲ್ಲದೇ ರಾಜ್ಯ ಶ್ರೇಷ್ಠ
ನ್ಯಾಯಾಲಯವು ತಾನೇ ಮುಂದಾಗಿ
ಪ್ರಕರಣ ದಾಖಲಿಸಿಕೊಂಡು ವಿಚಾರಣೆ
ನಡೆಸಿದೆ.ಸುಳಗೆ ಗ್ರಾಮದಲ್ಲಿ ಪುಂಡರು
ಕನ್ನಡ ಧ್ವಜವನ್ನು ಸುಟ್ಟರು.ನಾವಗೆಯಲ್ಲಿ
ತ್ರಿಕೋನ ಪ್ರೇಮದ ಸಂಬಂಧ ದೊಡ್ಡ
ಗಲಾಟೆ,ಮನೆ ಕಾರುಗಳ ಮೇಲೆ ದಾಳಿಯೇ
ನಡೆದಿದೆ.ವಡಗಾವಿ ಭಾಗದಲ್ಲಿ ಸರಣಿ
ಕಳ್ಳತನಗಳು ನಡೆದ ಹಿನ್ನೆಲೆಯಲ್ಲಿ
ನಾಗರಿಕರೇ ಸರದಿಯ ಮೇಲೆ ಕಾವಲಿ
ನಿಂತು ಸ್ವಯಂ ರಕ್ಷಣೆಗೆ ಮುಂದಾದರು!
ನಮ್ಮಲ್ಲಿ ಇಬ್ಬರು ಸಚಿವರಿದ್ದಾರೆ.
ಇಂಥ ಘಟನೆಗಳು ನಡೆದಾಗ ಅವರೇ
ಗ್ರಾಮಗಳಿಗೆ ಭೆಟ್ಟಿ ನೀಡಿ “ಧೈರ್ಯ ತುಂಬಿ”
ಬಂದಿದ್ದಾರೆ.ಸಾಧ್ಯವಾದ ಪರಿಹಾರವನ್ನೂ
ನೀಡಿದ್ದಾರೆ.ಇದೆಲ್ಲ ಘಟನೆಗಳು
ಸಂಭವಿಸಿದ ನಂತರ ನಡೆಯುತ್ತಿರುವ
ಯಥಾ ಪ್ರಕಾರದ ಸೌಜನ್ಯದ ಭೆಟ್ಟಿ
ಮತ್ತು ಪರಿಹಾರಾತ್ಮಕ ಕ್ರಮಗಳಷ್ಟೆ.
ಇಷ್ಟೆಲ್ಲ ಆದರೂ ಉತ್ತರಾಯಿತ್ವ
ನಿಗದಿಯಾಗುತ್ತಿಲ್ಲ.ಕಾನೂನು ಮತ್ತು
ಸುವ್ಯವಸ್ಥೆ ಹದಗೆಡುತ್ತಲೇ ಸಾಗಿದೆಯೆಂಬ
ಭಾವನೆಯು ಜನಸಾಮಾನ್ಯರಲ್ಲಿ ದಿನೇ
ದಿನೇ ಹೆಚ್ಚುತ್ತಲೇ ನಡೆದಿದ್ದರೆ ಯಾರು
ಇದಕ್ಕೆ ಉತ್ತರಿಸಬೇಕು? ಅಪರಾಧಗಳು
ಸಂಭವಿಸಿ ಅಪರಾಧಿಗಳಿಗೆ ಭಯವೇ
ಇಲ್ಲದಿದ್ದರೆ ಕಾನೂನನ್ನು ಬಿಗಿಗೊಳಿಸಲು
ಯಾರು ಮುಂದಾಗಬೇಕು? ಮುಂದಾಗದೇ
ಇದ್ದರೆ ಅಂಥವರ ಮೇಲೆ ಕ್ರಮ ಕೈಕೊಳ್ಳದೇ
ಸರಕಾರ ಕೇವಲ “ಪರಿಹಾರ” ನೀಡುವದೇ
ತನ್ನ ಕರ್ತವ್ಯವೆಂದು ತಿಳಿದಿದೆಯೆ?
ಗ್ರಾಮಗಳನ್ನು ಪೋಲೀಸರ ಮಧ್ಯೆ
ಹಂಚಿ ಅಲ್ಲಿಯ ಬೆಳವಣಿಗೆಗಳ ಮೇಲೆ
ನಿಗಾ ಇರಿಸುವ ವ್ಯವಸ್ಥೆ ಈ ಹಿಂದೆ ಇತ್ತು.
ಈ ಪೋಲೀಸರು ಗ್ರಾಮದಲ್ಲಿಯ ಇತರ
ಸರಕಾರಿ ಸಿಬ್ಬಂದಿಯ ಜೊತೆ ಸಂಪರ್ಕ
ಇಟ್ಟುಕೊಂಡು ಗ್ರಾಮದಲ್ಲಿ ಕಾನೂನು
ಸುವ್ಯವಸ್ಥೆಯ ಮೇಲೆ ನಿಗಾ ವಹಿಸುತ್ತಿದ್ದರು.ಆದರೆ ಈಗ ಅದೆಲ್ಲ
ತಾಳ ತಪ್ಪಿದಂತಾಗಿದೆ.ಯಾರೂ ಯಾರನ್ನೂ
ಕೇಳುವ ಸ್ಥಿತಿಯಲ್ಲಿಲ್ಲ.ಎಂಥದೇ ಘಟನೆ
ನಡೆದರೂ ನಾಲ್ಕು ದಿನ ಮಾಧ್ಯಮದಲ್ಲಿ
ಬಂದು ಹೋಗುತ್ತದೆ ಎಂಬ ಭಾವನೆ
ಬೇರೂರತೊಡಗಿದೆ.

ಬೆಳಗಾವಿ ಮಹಾನಗರದ ವ್ಯಾಪ್ತಿಯಲ್ಲಿ
ನಾಗರಿಕರು ನಿರಾತಂಕವಾಗಿರಬೇಕಾದ
ವಾತಾವರಣ ನಿರ್ಮಾಣವಾಗಬೇಕು.ಈ
ಸಂಬಂಧ ಸರಕಾರ ಮತ್ತು ಜಿಲ್ಲೆಯ ಸಚಿವದ್ವಯರು ಆಡಳಿತಾತ್ಮಕ
ಕ್ರಮಕ್ಕೆ ಮುಂದಾಗಬೇಕು.

ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ