ಮುಂಬೈ : 16 ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಂದೆ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತನಾಗಿರುವ ತಂದೆ ತನ್ನ ಮಗನ ಆಸೆ ಈಡೇರಿಸಲು ಸಾಧ್ಯವಾಗದ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ನೋವಿನಿಂದ ತಾನೂ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಟೈಮ್ಸ್‌ ಆಫ್‌ ಇಂಡಿಯಾ ವರದಿ ಪ್ರಕಾರ, ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಬಿಲೋಲಿ ತಹಸೀಲ್‌ನ ಮಿನಕಿಯಲ್ಲಿರುವ ಅವರ ಕುಟುಂಬದ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ 16 ವರ್ಷದ ಬಾಲಕ ಮತ್ತು ಆತನ ತಂದೆ ಪತ್ತೆಯಾಗಿದ್ದಾರೆ. ಬಡ ರೈತ ತನ್ನ ಮಗ ಮರಕ್ಕೆ ನೇಣು ಬಿಗಿದುಕೊಂಡಿರುವುದನ್ನು ನೋಡಿದ ನಂತರ ಅದೇ ಹಗ್ಗವನ್ನು ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಮತ್ತು ಅದೇ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ ಎಂದು ನಾಂದೇಡ್ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಮಗ ಓಂಕಾರ, ಮೂವರು ಸಹೋದರರಲ್ಲಿ ಕಿರಿಯವನಾಗಿದ್ದ, ಮಕರ ಸಂಕ್ರಾಂತಿಯನ್ನು ಆಚರಿಸಲು ಲಾತೂರ್ ಜಿಲ್ಲೆಯ ಉದ್ಗಿರ್‌ನಲ್ಲಿರುವ ತನ್ನ ಹಾಸ್ಟೆಲ್‌ನಿಂದ ಮನೆಗೆ ಬಂದಿದ್ದ ಎಂದು ಹೇಳಲಾಗಿದೆ.

ವರದಿಯ ಪ್ರಕಾರ, ಓಂಕಾರ್ ತನ್ನ ತಂದೆ ಬಳಿ ಶೈಕ್ಷಣಿಕ ಉದ್ದೇಶಗಳಿಗಾಗಿ ಸ್ಮಾರ್ಟ್‌ಫೋನ್ ಕೊಡಿಸುವಂತೆ ಕೇಳಿಕೊಂಡಿದ್ದ. ಆದಾಗ್ಯೂ, ಹಣಕಾಸಿನ ತೊಂದರೆಯಿಂದಾಗಿ ತಂದೆಗೆ ಅದನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಓಂಕಾರ್ ಅವರ ತಾಯಿಯ ಪ್ರಕಾರ, ಮಗ ತನ್ನ ತಂದೆಯ ಬಳಿ ನಿರಂತರವಾಗಿ ಸ್ಮಾರ್ಟ್‌ಫೋನ್ ಕೇಳುತ್ತಿದ್ದ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಬ್-ಇನ್ಸ್‌ಪೆಕ್ಟರ್ ದಿಲೀಪ್ ಮುಂಡೆ ಹೇಳಿದ್ದಾರೆ.
ಸ್ಮಾರ್ಟ್‌ ಫೋನ್‌ ಕೊಡಿಸಲು ಸಾಧ್ಯವಾಗದ ಕಾರಣ ಅಸಮಾಧಾನಗೊಂಡ ಓಂಕಾರ್ ಮನೆಯಿಂದ ಹೊರಟುಹೋದ. ಮನೆಯವರು ಆತ ತೋಟಕ್ಕೆ ಹೋಗಿರಬಹುದು ಎಂದು ಭಾವಿಸಿದ್ದರು. ಆದರೆ ಮರುದಿನ ಬೆಳಿಗ್ಗೆಯಾದರೂ ಆತ ಬಾರದಿದ್ದಾಗ ಆತನಿಗಾಗಿ ತೀವ್ರ ಹುಡುಕಾಟ ನಡೆಸಿದರು.

ತೋಟಕ್ಕೆ ಬಂದ ರೈತ ತಂದೆ, ತಮ್ಮ ಮಗನ ಶವ ಮರಕ್ಕೆ ನೇತಾಡುತ್ತಿರುವುದನ್ನು ನೋಡಿ ಆಘಾತಕ್ಕೊಳಗಾದರು ದುಃಖದಿಂದ ಕಂಗೆಟ್ಟ ಅವರು ತನ್ನ ಮಗನ ಶವವನ್ನು ಬಿಚ್ಚಿ, ಹತಾಶೆಯ ಕ್ಷಣದಲ್ಲಿ, ಅದೇ ಹಗ್ಗವನ್ನು ಬಳಸಿ ಅದೇ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಲಾಗಿದೆ.
ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅವರಿಬ್ಬರನ್ನು ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.