ಬೆಳಗಾವಿ: ಖಾನಾಪುರ ತಾಲೂಕು ಮಾಚಿಗಡ ಗ್ರಾಮದ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟ್ ಕಮಿಟಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಎರಡು ಲಕ್ಷ ರೂಪಾಯಿ ಮಂಜೂರಾತಿಯಾಗಿದೆ.

ಇದರ ಮಂಜೂರಾತಿ ಪತ್ರವನ್ನು ಖಾನಾಪುರ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲ ಅವರು ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಮಹಿಳೆ ಅಬಲೆ ಅಲ್ಲ ಸಬಲೆ ಎಂದು ನಿರೂಪಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಾ ಶ್ರಮಿಸುತ್ತಿದೆ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದುವರಿದಿದ್ದು ಯೋಜನೆಯ ಸಹಕಾರದೊಂದಿಗೆ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರುತ್ತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನರ ಪಾಲಿಗೆ ಆಶಾಕಿರಣವಾಗಿ ಲಭಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಲಭಿಸಿರುವ ಹಣದಿಂದ ಉತ್ತಮ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಹಲವಾರು ಸಮಾಜದ ಅಭಿವೃದ್ಧಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಶ್ಲಾಘನೀಯವಾಗಿದೆ . ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ್ದಾರೆ. ಕೆರೆಗಳ ಹೂಳೆತ್ತುವ ಕಾರ್ಯಕ್ರಮ, ನಿರಾಶ್ರಿತರಿಗೆ ಮನೆ ನಿರ್ಮಾಣ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಸಹಾಯಧನ, ಸಮುದಾಯ ಭವನ ಕಟ್ಟಡ, ಕಲ್ಯಾಣ ಮಂಟಪ ಹಾಗೂ ಸ್ಮಶಾನ ಅಭಿವೃದ್ಧಿಗಾಗಿ ಮತ್ತು ಜ್ಞಾನದೀಪ ಕಾರ್ಯಕ್ರಮದಡಿಯಲ್ಲಿ ಶಾಲೆಗಳಿಗೆ ಅತಿಥಿ ಶಿಕ್ಷಕರ ನಿಯೋಜನೆ, ಕುಡಿತ ಬಿಡಿಸುವುದಕ್ಕಾಗಿ ಮದ್ಯವರ್ಜನ ಶಿಬಿರ, ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳ ವಿತರಣೆ, ನಿರ್ಗತಿಗರಿಗೆ ಮಾಸಾಸನ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಅನೇಕ ಜನೋಪಯೋಗಿ, ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಗ್ರಾಮೀಣ ಜನರ ಏಳಿಗೆಗಾಗಿ ಶ್ರಮಿಸುವ ಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಡೆಯವರು ಮಾಡುತ್ತಿದ್ದಾರೆ. ಪೂಜ್ಯರ ಕೆಲಸ ಇಡೀ ದೇಶಕ್ಕೆ ಮಾದರಿ ಎಂದು ಹೇಳಿದರು.

ಖಾನಾಪುರ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಗಣಪತಿ ನಾಯ್ಕ ಅವರು ಯೋಜನೆಯ ವಿವಿಧ ಕಾರ್ಯಕ್ರಮ ಹಾಗೂ ಸೌಲಭ್ಯಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಶ್ರೀ ಸುಬ್ರಮಣ್ಯ ದೇವಸ್ಥಾನ ಸಮಿತಿ ಅಧ್ಯಕ್ಷ ಬಾಬು ನಾಗಪ್ಪ ಪಾಟೀಲ, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರಾದ ನಾರಾಯಣ ಪಾಟೀಲ, ತಮ್ಮಣ್ಣ ಕೋಲ್ಕಾರ್, ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.