ಬೆಳಗಾವಿ: ಬೆಂಗಳೂರಿನಲ್ಲಿ ರವಿವಾರ ಕಾಂಗ್ರೆಸ್ ಶಾಸಕಾಂಗದ ಸಭೆ ನಡೆಯಲಿದೆ. ಅದರಲ್ಲಿ ಬೆಳಗಾವಿಯಲ್ಲಿ ಜ. 21ರಂದು ನಡೆಯಲಿರುವ ಕಾಂಗ್ರೆಸ್ ಸಮಾವೇಶದ ಕುರಿತು ಚರ್ಚೆ ನಡೆಸಲಾಗುತ್ತದೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಸಭೆಗೆ ಆಗಮಿಸಲಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಿ.ಟಿ. ರವಿ ಅವರಿಗೆ ಬೆದರಿಕೆ ಹಾಕಿರುವ ಅನಾಮಿಕ ಪತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರವಿ ಅವರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಪತ್ರ ಬರೆದಿದ್ದಾರೆಯೇ ? ಸುಮ್ಮನೆ ಏಕೆ ಈ ಕಥೆ ಹೇಳುತ್ತಾರೆ. ಇದನ್ನೆಲ್ಲಾ ರವಿ ಅವರೇ ಸೃಷ್ಟಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸತೀಶ ಜಾರಕಿಹೊಳಿ ಅವರ ಮನೆಗೆ ಊಟಕ್ಕೆ ಹೋಗಿದ್ದಾರೆ. ನನ್ನ ಮನೆಗೆ ಎರಡು ಸಲ ಬಂದಿದ್ದಾರೆ. ಅವರಷ್ಟೇ ಅಲ್ಲ ವಿರೋಧ ಪಕ್ಷದವರು ಸಹ ಊಟಕ್ಕೆ ಬರುತ್ತಾರೆ. ನಾವು ಸಹ ಹೋಗುತ್ತೇವೆ. ಆದ್ದರಿಂದ ಸತೀಶ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಔತಣಕೂಟಕ್ಕೆ ಯಾವ ಮಹತ್ವ ನೀಡುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.