ಲಖನೌ: ರಸ್ತೆ ಅಪಘಾತ ಕಡಿಮೆ ಮಾಡುವ ಸಲುವಾಗಿ ಹಾಗೂ ದ್ವಿಚಕ್ರ ವಾಹನಗಳು ಅಪಘಾತ ಸಂಭವಿಸಿದಾಗ ಸಂಭವಿಸುವ ಸಾವು ನೋವಿನ ಪ್ರಮಾಣ ಕಡಿಮೆ ಮಾಡಲು ಉತ್ತರ ಪ್ರದೇಶ ಸಾರಿಗೆ ಇಲಾಖೆ ವಿನೂತನ ಉಪಕ್ರಮ ಜಾರಿಗೆ ತಂದಿದೆ. ‘ಹೆಲ್ಮಟ್ ಇಲ್ಲದಿದ್ದರೆ-ಇಂಧನ ಇಲ್ಲ’ ಎನ್ನುವ ಯೋಜನೆ ರಾಜ್ಯದ ನಗರಗಳಲ್ಲಿ ಜಾರಿಗೆ ತಂದಿದೆ.

ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಅಪಘಾತಕ್ಕೀಡಾದವರು ಹೆಲ್ಮೆಟ್ ಧರಿಸುವುದಿಲ್ಲ. ರಾಜ್ಯದಲ್ಲಿ ಪ್ರತಿ ವರ್ಷ 25,000-26,000 ಜನರು ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗೆ ಹೇಳಿದ್ದರು.

ಬೈಕ್‌ ಸವಾರ ಅಥವಾ ಹಿಂಬದಿ ಸವಾರ ಹೆಟ್ ಧರಿಸದೇ ಇದ್ದರೆ ಅಂಥವರಿಗೆ ಇಂಧನ ಮಾರಾಟ ಮಾಡಕೂಡದು ಎಂದು ಎಲ್ಲಾ ಪೆಟ್ರೋಲ್ ಬಂಕ್‌ಗಳಿಗೆ ನಿರ್ದೇಶನ ನೀಡಿ ಜನವರಿ 8ರಂದು ರಾಜ್ಯದ ಸಾರಿಗೆ ಆಯುಕ್ತ ಬ್ರಜೇಶ್ ನರೈನ್ ಸಿಂಗ್ ಪತ್ರ ಬರೆದಿದ್ದಾರೆ.

ಈ ಪತ್ರವನ್ನು ಎಲ್ಲಾ 75 ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದ್ದು, ಈ ಬಗ್ಗೆ ತುರ್ತು ಗಮನಹರಿಸಬೇಕು ಎಂದು ಸೂಚಿಸಲಾಗಿದೆ. ಹೆಲ್ಮಟ್ ಧರಿಸದೇ ಇರುವುದರಿಂದ ಸಾವುನೋವಿನ ಸಂಖ್ಯೆಯ ದತ್ತಾಂಶವನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ದ್ವಿಚಕ್ರ ವಾಹನ ಸವಾರರನ್ನು ಒಳಗೊಂಡ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಾವುಗಳು ಹೆಲ್ಮಟ್ ಬಳಸದ ಕಾರಣದಿಂದ ಸಂಭವಿಸುತ್ತಿವೆ. ಈ ನೀತಿಯು ಜೀವಗಳನ್ನು ಉಳಿಸುವ ಮತ್ತು ರಸ್ತೆ ಸುರಕ್ಷತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಈ ಉಪಕ್ರಮವನ್ನು ಈ ಹಿಂದೆ 2019 ರಲ್ಲಿ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಪರಿಚಯಿಸಲಾಗಿತ್ತು. ಆದರೆ ಸಮರ್ಪಕವಾಗಿ ಜಾರಿಯಾಗಿರಲಿಲ್ಲ. ಆದರೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ.