ಬೆಳಗಾವಿ : ಬನದ ಹುಣ್ಣಿಮೆ ಪ್ರಯುಕ್ತ ಪ್ರಸಿದ್ಧ ಯಲ್ಲಮ್ಮನ ಗುಡ್ಡದಲ್ಲಿ ಜ.13ರ ಸೋಮವಾರದಂದು ಬೃಹತ್ ಜಾತ್ರೆ ನಡೆಯಲಿದೆ. ಏಳುಕೊಳ್ಳದ ನಾಡಿನ ಈ ಧಾರ್ಮಿಕ ನಾಡಿನಲ್ಲಿ ಸಂಭ್ರಮ ಏರ್ಪಟ್ಟಿದೆ. ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ನಡೆಯುತ್ತಿರುವ ಮೊದಲ ಜಾತ್ರೆ ಇದಾಗಿದೆ. ಭಕ್ತರಿಗೆ ಪೂರಕ ಮೂಲಭೂತ ಸೌಲಭ್ಯ ಕೊಡಲು ಪ್ರಾಧಿಕಾರ ಅಗತ್ಯ ಸಿದ್ಧತೆ ಮಾಡಿದೆ. ವಿವಿಧ ರಾಜ್ಯಗಳ ಭಕ್ತರ ದಂಡು ಹರಿದು ಬರುತ್ತಿದೆ.

ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತರು ಎಲ್ಲೆಡೆಯಿಂದ ಮಹಾಪೂರದಂತೆ ಆಗಮಿಸುತ್ತಿದ್ದು, ಅವರಿಗೆ ವಸತಿ, ಶೌಚಗೃಹ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ.

ಚಕ್ಕಡಿಗಳ ಜಾತ್ರೆ ಎಂದೇ ಈ ಜಾತ್ರೆ ಪ್ರಸಿದ್ಧಿ ಪಡೆದಿದೆ. ಬಾಳೆದಿಂಡು, ತಳಿರು ತೋರಣಗಳಿಂದ ಶೃಂಗಾರಗೊಂಡ ಬಂಡಿಗಳಲ್ಲಿ ಭಕ್ತರು ಪುಣ್ಯಕ್ಷೇತ್ರ ಯಲ್ಲಮ್ಮನ ಗುಡ್ಡದತ್ತ ಸಾಗುತ್ತಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರು, ಉಚಿತ ಮೇವು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ದೇವಸ್ಥಾನದ ಸುತ್ತಲೂ ಭಕ್ತರ ದಟ್ಟಣೆ ಕಂಡು ಬಂದಿದೆ. ಚಕ್ಕಡಿ ಮಾತ್ರವಲ್ಲ, ಟ್ರ್ಯಾಕ್ಟರ್, ಟಂ ಟಂ ವಾಹನಗಳು, ಸೈಕಲ್, ಕಾಲ್ನಡಿಗೆ ಮೂಲಕ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.

ಯಲ್ಲಮ್ಮ ದೇವಿಗೆ ಬೆಳಗ್ಗೆ ಹಾಗೂ ಸಂಜೆ ವಿಶೇಷ ಪೂಜೆ ನಡೆಯಲಿದೆ. ಭಕ್ತರಿಗೆ ಶೀಘ್ರ ದೇವರ ದರ್ಶನ ಪಡೆಯಲು ಅನುಕೂಲವಾಗಲು ಸರಳ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧ ಸ್ಥಳಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುತ್ತಿದ್ದೇವೆ. ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ತಿಳಿಸಿದ್ದಾರೆ.