ಅರಸಮ್ಮಕಾನು : ಶೇಡಿಮನೆ ಗ್ರಾಮದ ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜನವರಿ 14 ರಂದು ಕೆಂಡೋತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಕ್ಷೇತ್ರ ಮಹಿಮೆ: ಭವ ಭಯ ನಿವಾರಕನೂ,ಪಾಪವಿದರೂನು, ಭಕ್ತೋದ್ದಾರನೂ ಅದ ಜಗದೀಶ್ವರನು
ರಜತಾದ್ರಿಯಲ್ಲಿ ಪಾರ್ವತಿ ದೇವಿಯೊಂದೊಡಗೂಡಿ
ವಾಸಿಸುತ್ತಿರುವ ಸಂದರ್ಭದಲ್ಲಿ ಮಹಾಶೇಷನ ಮಿತ್ರನಾಗಿ ಮಹೇಶ್ವರನನ್ನು ಕುರಿತು ತಪಸ್ಸು ಮಾಡಿದಾಗ ಪ್ರತ್ಯಕ್ಷನಾದ ಪರಮೇಶ್ವರನು ನಿನಗೆ ಐದು ಜನ ಪುತ್ರಿಯರು ಜನಿಸುತ್ತಾರೆ ಎಂದು ಼ವರವಿತ್ತು
ಅದೃಶ್ಯನಾಗುತ್ತಾನೆ. ಅಂತೆಯೇ ವರ ಪ್ರಸಾದದಿಂದ ಜನಿಸಿದ ಐದು ಪುತ್ರಿಯರಿಗೆ ಅನುಕ್ರಮವಾಗಿ ದೇವರತಿ, ನಾಗರತಿ, ಚಾರುರತಿ, ಮಂದರತಿ ಹಾಗೂ ನೀಲರತಿ, ಎಂದು ಹೆಸರಿಟ್ಟು ವಾತ್ಸಲ್ಯದಿಂದ ಬೆಳೆಸುತ್ತಾನೆ.
ಇತ್ತ ಶಂಖಚೂಡನು ಮಕ್ಕಳ ಮದುವೆಯ ಯೋಚನೆಯಲ್ಲಿ ಇದ್ದಾಗಲೇ ವಿಷ್ಣು ಪಾದವನ್ನು ಸೇರುತ್ತಾನೆ. ಆಗ ನಾಡಿನ ಪ್ರಜೆಗಳು ಹಿರಿಯವಳಾದ
ದೇವರತಿಯನ್ನೇ “ರಾಜ್ಯಧಿಕಾರಿಣಿ” ಎಂದು ಪರಿಗಣಿಸಿ ಆಕೆಯನ್ನು “ಅರಸಮ್ಮ” ಎಂದು ಕರೆಯ ತೊಡಗಿದರು. ಅದೇ ಸ್ಥಳ “ಅರಸಮ್ಮಕಾನು”. ಪ್ರಾಯಪ್ರಬುದ್ಧೆಯರಾದ ಕನ್ಯೆಯರು ಸ್ವರ್ಗಸ್ಥ ತಂದೆಯ ಮನೋ ಇಷ್ಟದಂತೆ ಕುಮಾರ ಸ್ವಾಮಿಯನ್ನು ಕಂಡು ಮದುವೆಯಾಗುವ ಹಂಬಲವನ್ನು ವ್ಯಕ್ತ ಪಡಿಸಲು ಕೈಲಾಸಕ್ಕೆ ತೆರಳುತ್ತಾರೆ. ಕೈಲಾಸದ ದ್ವಾರ ಪಾಲಕನಾಗಿ ಮಹಾದ್ವಾರದಲ್ಲಿದ್ದ ನಂದಿ ಅವರನ್ನು ತಡೆದು ವಿಚಾರಿಸಿ ಕಾಮುಕರಾದ ನಿಮ್ಮನ್ನು ಒಳಗೆ ಬಿಡನೆಂದು ಹೇಳುತ್ತಾನೆ.
ಕೋಪಿಷ್ಠರಾದ ನಾಗಕನ್ನಿಕೆಯರು ನಂದಿಗೆ ಶಾಪ ಕೊಡುತ್ತಾರೆ. ಅದಕ್ಕೆ ಪ್ರತಿಯಾಗಿ ಸಿಟ್ಟಿಗೆದ್ದ ನಂದಿ ನಿಮ್ಮ ಆಸೆ ನೆರವೇರದೆ ಭೂಲೋಕದಲ್ಲಿ ಹಾವಾಗಿ ಕಾಡೆಗಿಚ್ಚಿಗೆ ಸಿಕ್ಕಿ ಪರಿತಪಿಸುವಂತಾಗಲಿ” ಎಂದು ಶಾಪವಿಡುತ್ತಾನೆ. ಯಾವ ಮಹಾದಾಸೆಯಿಂದ ಮಹತ್ಕಾರ್ಯಕ್ಕೆ ನಾಗಕನ್ನಿಕೆಯರು ಹೊರಟ್ಟಿದ್ದರೂ ಶಾಪಗ್ರಸ್ಥರಾಗಿ ಪುನಃ ಪಾರ್ವತಿ ದೇವಿಯ ಅನುಗ್ರಹದಿಂದ ಭೂಲೋಕದಲ್ಲಿ ಶಾಪ ವಿಮೋಚನೆಯ ನಂತರ ಪ್ರತ್ಯೇಕ ಸ್ಥಳಗಳಲ್ಲಿ ನೆಲೆ ನಿಂತುಭಕ್ತರನ್ನುದ್ದರಿಸುವ ಮಹಾತ್ಕಾರ್ಯಕ್ಕೆ ಪ್ರೇರಿತರಾಗಿ ಹೊರಡುತ್ತಾರೆ.ಅದೊಂದು ದಿನ ಸಹ್ಯಾದ್ರಿ ಪರ್ವತ ಪ್ರದೇಶದಲ್ಲಿ ಬಿದಿರು (ಹಿಂಡಿಲು) ಮಳೆಯಲ್ಲಿ ಸರ್ಪರೂಪವಾಗಿ ನೆಲೆಸಿರಬೇಕಾದರೆ”ವ್ಯಾಘ್ರಪಾದ”ಮಹರ್ಷಿಯ ವಿನಃ ಕಾರಣ ಶಾಪಕ್ಕೊಳಗಾಗಿ ಬಿದಿರು (ಹಿಂಡಿಲು) ಮಳೆ ಸುಟ್ಟು
ಹೋಗುತ್ತದೆ. ಆ ಸಂದರ್ಭದಲ್ಲಿ ದೇಶ ಭ್ರಷ್ಟನಾಗಿ ವೇಷ ಮರೆಯಿಸಿಕೊಂಡು ರಾಜ ದೇವವರ್ಮನು ಕಾಡಿನಲ್ಲಿ ಬರುವಾಗ ಕಾಡ್ಗಿಚ್ಚಿನ ಮಧ್ಯದಲ್ಲಿ ಒದ್ದಾಡಿ ಪರಿತಪಿಸುತ್ತಿರುವ ನಾಗಕನ್ನಿಕೆಯರನ್ನು ನೋಡಿ ಅವರ ಕೋರಿಕೆಯಂತೆ ತನ್ನ ಮೈಮೇಲಿನ ಬಟ್ಟೆಯಿಂದ ಅವರನ್ನು ಬಿದಿರು (ಹಿಂಡಿಲು) ಮಳೆಯಿಂದ ಅವರನ್ನು ರಕ್ಷಿಸಿ ಉಪಚರಿಸುತ್ತಾನೆ. ನಂತರ ನಾಗಕನ್ನಿಕೆಯರು ಶಾಪ ವೃತ್ತಾಂತವನ್ನೆಲ್ಲಾ ಹೇಳಿ ನಮ್ಮನ್ನು ಬಟ್ಟೆಯಿಂದ ಕಟ್ಟಿಕೊಂಡು ಹೋಗು, ನಮಗೆ ಸರಿ ಕಂಡ ಸ್ಥಳದಲ್ಲಿ ನಾವು ನೆಲೆಸುತ್ತೇವೆ ಎಂಬ ಅವರ ಕೋರಿಕೆಯನ್ನು ಮನ್ನಿಸಿ ದೇವರ್ಮನು ಹೊರಡುತ್ತಾನೆ. ಕಾಡಿನ ಮಾರ್ಗದಲ್ಲಿ ರಾಜ ದೇವವರ್ಮ ಬರುತ್ತಿರುವಾಗ
ಒಂದೆಡೆ ವಿಶಾಂತ್ರಿಗಾಗಿ ತಂಗುತ್ತಾನೆ, ಆಗ ಹಿರಿಯವಳಾದ ದೇವರತಿ ಹೊರಟು ಹೋಗಿ ಹತ್ತಿರದ ಹುತ್ತದಲ್ಲಿ ಸೇರುತ್ತಾಳೆ. ಅಂದಿನಿಂದ ಆ ಕಾಡಿಗೆ “ಅರಸಮ್ಮಕಾನು” ಎಂದು ಹೆಸರಾಯಿತು. ಉಳಿದವರು ಕ್ರಮವಾಗಿ ನಾಗರತಿ, (ನಾಗೇರ್ತಿ),ಚಾರುರತಿ (ಚೋರಾಡಿ) ಮಂದರತಿ (ಮಂದರ್ತಿ) ಹಾಗೂ ನೀಲಾರತಿ (ನೀಲಾವರ) ಎಂಬಲ್ಲಿ ನೆಲೆ ನಿಂತು ಇಂದಿಗೂ ಆಕರ್ಷಣೆಯ ಕೇಂದ್ರಗಳಾಗಿ ಬೆಳೆಯುತ್ತಿವೆ. ಪರಿವಾರ ಸಾನ್ನಿಧ್ಯಗಳು: ಗಣಪತಿ, ನಾಗ, ಚಾಮುಂಡೇಶ್ವರಿ, ಕಲ್ಕುಡ, ಸತ್ಯದೇವತೆ, ಕ್ಷೇತ್ರಪಾಲ ಹಾಗೂ ಇನ್ನಿತರ ದೈವ ದೇವರುಗಳ ಸಾನ್ನಿಧ್ಯವನ್ನು ಹೊಂದಿದೆ.

ಕಾರ್ಯಕ್ರಮಗಳು: ಜ.14 ರ ಬೆಳಿಗ್ಗೆ ಗಂ 7 ರಿಂದ ಗುರುಗಣಪತಿ ಪ್ರಾರ್ಥನೆ, ಪುಣ್ಯಾಹವಾಚನ, ಪ್ರಧಾನ ಹೋಮ,ಕಲಶಾಭಿಷೇಕ, ಚಂಡಿಕಾ
ಹೋಮ, ವೇದಪಾರಾಯಣ, ಗಣಹೋಮ,.ಗಂ.9 ರಿಂದ ಹಣ್ಣುಕಾಯಿ, ಹರಿವಾಣ ನೈವೇದ್ಯ, ತುಲಾಭಾರ ಸಂಕಲ್ಪ ಆರಂಭ, ಗಂ.11.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಗಂ.12 ಕ್ಕೆ ಉತ್ಸವ ಬಲಿ, ಮಹಾಪೂಜೆ, 1 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಗಂ 6 ರಿಂದ ಸ್ಥಳೀಯ ಭಜನಾ ಮಂಡಳಿಯವರಿಂದ ಶ್ರೀರಾಮ ಭಜನೆ, ಗಂ.8.30 ರಿಂದ ಪೌರಾಣಿಕ ಯಕ್ಷಗಾನ, ಗಂ.11 ಕ್ಕೆ ಶ್ರೀದೇವಿ ದರ್ಶನ, ಗಂ.11.15 ಕ್ಕೆ ಕಲ್ಕುಡ ದರ್ಶನ, ಗಂ.12 ಕ್ಕೆ ಶ್ರೀದೇವಿ ಮತ್ತು ಕಲ್ಕುಡ ಮುಖಾಮುಖಿ ಗಂ 12.30 ಕ್ಕೆ ಕೆಂಡೋತ್ಸವ, ಕಲ್ಕುಡ ಮತ್ತು ಸತ್ಯದೇವತೆ ಸಿರಿ ಸಿಂಗಾರ ಕೋಲ. ಗಂ. 2.30 ಕ್ಕೆ ರಂಗಪೂಜೆ, ಜ.15 ರ ಬೆಳಗಿನ ಜಾವ ಗಂ. 3 ರಿಂದ ಶ್ರೀದೇವಿ ದರ್ಶನ,ಭೂತ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.