ಮಂಗಳೂರು: ಮಕರ ಸಂಕ್ರಾಂತಿಯೊಂದಿಗೆ ಆರಂಭವಾಗುವ ಕದ್ರಿ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಭಾಗವಾಗಿ ಮಂಗಳವಾರ ಬೆಳಿಗ್ಗೆ ಸಹಸ್ರಾರು ಭಕ್ತರು ತೀರ್ಥಸ್ನಾನ ಮಾಡಿ ಪುನೀತರಾದರು.
ಕದ್ರಿ ಯೋಗೀಶ್ವರ ಮಠಾಧೀಶ ರಾಜಾ ನಿರ್ಮಲ್ ನಾಥಜೀ ತೀರ್ಥಸ್ನಾನ ಪೂರೈಸಿದ ನಂತರ ಸಾರ್ವಜನಿಕರು ಪವಿತ್ರ ತೀರ್ಥಸ್ನಾನ ಮಾಡಿದರು. ನಂತರ ನಿತ್ಯದ ಪೂಜಾವಿಧಿಗಳು ನೆರವೇರಿದವು.
ನಿತ್ಯ ಬಲಿ, ಮಹಾಪೂಜೆ ನಡೆದವು. ಸಂಜೆ ಕತ್ತಲಾವರಿಸುತ್ತಿದ್ದಂತೆ ಸಾಮೂಹಿಕ ಪ್ರಾರ್ಥನೆಯ ನಂತರ ಏಳುಪಟ್ಟ ಮೊಗವೀರ ಮಹಾಸಭಾದವರು ಕೊಡಿಮರ ಏರಿಸುವ ಕಾರ್ಯ ನೆರವೇರಿಸಿದರು. ದೇವಾಲಯದ ಎದುರಿನ ಮೆಟ್ಟಿಲುಗಳ ಮೇಲೆ ಜಾಗ ಕಾದಿರಿಸಿಕೊಂಡು ಕೂತಿದ್ದ ಜನರು ಕೊಡಿಮರ ಏರಿಸುವುದನ್ನು ಕಣ್ಣುಂಬಿಕೊಳ್ಳಲು ಕಾತುರತೆಯಿಂದ ಕಾಯುತ್ತಿದ್ದರು. ಕೊಡಿಮರ ಏರಿಸಿದ ಮೇಲೆ ಚೆಂಡೆ, ವಾದ್ಯಗಳು ಮೊಳಗಿದವು. ಪಟಾಕಿ ಸಿಡಿಸಿ ಭಕ್ತರು ಸಂಭ್ರಮಿಸಿದರು. ಪ್ರಸಾದ ವಿತರಣೆ, ಬಲಿ ನಡೆದ ಮೇಲೆ ಕದ್ರಿ ಕೆಳಗಿನ ಮನೆಯವರು ಕಂಚುದೀಪ ಬೆಳಗಿದರು.
ನಿತ್ಯ ಬಲಿ, ನಿತ್ಯ ಪೂಜೆ, ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಮರ ಏರುವುದು, ಪ್ರಸಾದ ವಿತರಣೆ, ಸಂಜೆ ಪೂಜೆ ಬಲಿ ಆದ ಮೇಲೆ ಧ್ವಜ ಸ್ತಂಭ 45 ಏರುವುದು, 18 ಅಂಕಣದಲ್ಲಿ ದೀಪ ಬೆಳಗಿದರು. ದೊಂದಿಯಿಂದ ದೀಪ ಬೆಳಗಿದರು.
ಮಲ್ಲಿಕಾ ಕಲಾವೃಂದದ ವತಿಯಿಂದ ಬೆಳಗಿನಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ಕದ್ರಿ ಯಕ್ಷಗಾನ ಬಾಲ ಮತ್ತು ಯಕ್ಷಕೂಟದ ಕಲಾವಿದರಿಂದ ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನಗೊಂಡಿತು. ನಂತರ ವಿದುಷಿ ಶುಭಲಕ್ಷ್ಮಿ ಕದ್ರಿಯವರ ಶಿಷ್ಯಯರು ಗಾಯನ ನಡೆಯಿತು.