ಗಾಜಾದಲ್ಲಿ ಈವರೆಗೆ 46,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ 15 ತಿಂಗಳ ಸುದೀರ್ಘ ಯುದ್ಧವನ್ನು ಕೊನೆಗೊಳಿಸಲು ಇಸ್ರೇಲ್ ಮತ್ತು ಹಮಾಸ್ ಗುಂಪು ಕದನ ವಿರಾಮ ಒಪ್ಪಂದಕ್ಕೆ ಬಂದಿವೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಅಕ್ಟೋಬರ್ 7, 2023 ರಂದು ಹಮಾಸ್ ಉಗ್ರಗಾಮಿಗಳು ಇಸ್ರೇಲ್‌ನ ಮೇಲೆ ರಾಕೆಟ್‌ಗಳಿಂದ ದಾಳಿ ಮಾಡಿದ ನಂತರ ಭುಗಿಲೆದ್ದ ಯುದ್ಧವು 46,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ.

 

ಕಾದಾಡುತ್ತಿರುವ ಬಣಗಳ ನಡುವಿನ ಒಪ್ಪಂದವು ಗಾಜಾದಿಂದ ಇಸ್ರೇಲಿ ಪಡೆಗಳನ್ನು ವ್ಯವಸ್ಥಿತವಾಗಿ ಹಿಂತೆಗೆದುಕೊಳ್ಳುವುದು ಮತ್ತು ಇಸ್ರೇಲ್‌ ಹಾಗೂ ಹಮಾಸ್‌ ತಾವು ಒತ್ತೆಯಾಳುಗಳಾಗಿ ಇಟ್ಟುಕೊಂಡವರ ಬಿಡುಗಡೆಯನ್ನು ಒಳಗೊಂಡಿದೆ ಎಂದು ವರದಿ ತಿಳಿಸಿದೆ. ಕದನ ವಿರಾಮ ಇನ್ನೂ ಔಪಚಾರಿಕವಾಗಿ ಘೋಷಣೆಯಾಗಬೇಕಿದೆ.
ಅಮೆರಿಕದ ಬೆಂಬಲದೊಂದಿಗೆ ಈಜಿಪ್ಟ್ ಮತ್ತು ಕತಾರ್ ನೇತೃತ್ವದ ತಿಂಗಳುಗಳ ಕದನ ವಿರಾಮ ಮಾತುಕತೆಗಳು ಮತ್ತು ಸಂಧಾನ ಮಾತುಕತೆಗಳ ನಂತರ ಒಪ್ಪಂದಕ್ಕೆ ಬರಲಾಗಿದೆ ಕುತೂಹಲಕಾರಿಯಾಗಿ, ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಪ್ರಮಣವಚನ ಸ್ವೀಕರಿಸುವ ಕೆಲವೇ ದಿನಗಳ ಮೊದಲು ಈ ಒಪ್ಪಂದಕ್ಕೆ ಬರಲಾಗಿದೆ.

 

ಕದನ ವಿರಾಮ ಒಪ್ಪಂದ ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಪ್ಯಾಲೇಸ್ತಿನಿಯನ್ ಉಗ್ರಗಾಮಿ ಗುಂಪಿನ ನಿಯೋಗವು ಒಪ್ಪಿಗೆಯನ್ನು ತಿಳಿಸಿದೆ ಎಂದು ಹಮಾಸ್ ಅನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಅನಾಮಧೇಯತೆಯ ಷರತ್ತಿನ ಮೇಲೆ ಮಾತನಾಡಿದ ಪ್ಯಾಲೇಸ್ತಿನಿಯನ್ ಅಧಿಕಾರಿಯ ಪ್ರಕಾರ, ಔಪಚಾರಿಕವಾಗಿ ಲಿಖಿತ ಅನುಮೋದನೆಯನ್ನು ನೀಡುವ ಮೊದಲು ಕತಾರ್‌ನಲ್ಲಿ ನಡೆದ ಮಾತುಕತೆಗಳ ಪ್ರಕಾರ ಹಮಾಸ್ ಕದನ ವಿರಾಮ ಒಪ್ಪಂದ ಮತ್ತು ಒತ್ತೆಯಾಳು ವಾಪಸಾತಿ ಷರತ್ತುಗಳಿಗೆ ಮೌಖಿಕ ಒಪ್ಪಿಗೆ ನೀಡಿತ್ತು ಎಂದು ಅವರು ಹೇಳಿದರು.
ಅಕ್ಟೋಬರ್ 7, 2023 ರಂದು ಹಮಾಸ್ ಉಗ್ರಗಾಮಿಗಳು ಇಸ್ರೇಲಿನೊಳಗೆ ನುಗ್ಗಿ, ಸುಮಾರು 1200 ಸೈನಿಕರು ಮತ್ತು ನಾಗರಿಕರನ್ನು ಕೊಂದಿದ್ದರು. ನಂತರ ದಾಳಿಯ ವೇಳೆ ಉಗ್ರರು ಸುಮಾರು 250 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ನಂತರ ಗಾಜಾದ ಮೇಲೆ ಇಸ್ರೇಲಿ ಆಕ್ರಮಣ ನಡೆಯಿತು. ಗಾಜಾ ಆರೋಗ್ಯ ಸಚಿವಾಲಯವು ಅಕ್ಟೋಬರ್ 2023 ರಿಂದ, ಗಾಜಾದಲ್ಲಿ ಇಸ್ರೇಲಿ ಕಾರ್ಯಾಚರಣೆಯ ಅವಧಿಯಲ್ಲಿ 46,000 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು, ಲಕ್ಷಾಂತರ ಜನರು ಡೇರೆಗಳಲ್ಲಿ ಮತ್ತು ತಾತ್ಕಾಲಿಕ ಪುನರ್ವಸತಿ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ.