ಲಕ್ನೋ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಪ್ರಯಾಣ ದರದ ಬಗ್ಗೆ ಉಂಟಾದ ಜಗಳದ ನಂತರ ಮಹಿಳೆಯೊಬ್ಬರು ಆಟೋ ಚಾಲಕನಿಗೆ ಥಳಿಸಿದ ವೀಡಿಯೊ ವೈರಲ್ ಆಗಿದೆ.
ಪ್ರಿಯಾಂಶಿ ಪಾಂಡೆ ಎಂಬ ಯುವತಿ ಆಟೋ ಡ್ರೈವರ್ ವಿಮಲೇಶಕುಮಾರ ಶುಕ್ಲಾ ಎಂಬವರನ್ನು ಬೈಯುತ್ತ ಸೀಟಿನಿಂದ ಎಳೆಯಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಕೈಮುಗಿದು ಬೇಡಿಕೊಂಡರೂ ಆಕೆ ಆತನಿಗೆ ಥಳಿಸುತ್ತಿರುವುದನ್ನು ವೀಡಿಯೊ ತೋರಿಸಿದೆ. ಆಟೋ ಚಾಲಕನು ಹುಡುಗಿಯ ಪಾದಗಳನ್ನು ಮುಟ್ಟುವುದನ್ನು ಸಹ ಕಾಣಬಹುದು.
ನಂತರ ಮಹಿಳೆ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. ಇದು ವೈರಲ್ ಆದ ನಂತರ ಆಟೊ ಚಾಲಕ ಮಹಿಳೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.ಆಟೋ ಚಾಲಕ ಮತ್ತು ಮಹಿಳೆ ಜಗಳಕ್ಕೆ ಕಾರಣವಾದ ಬಗ್ಗೆ ವಿರೋಧಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಪ್ರಯಾಣ ದರವನ್ನು ನೀಡುವಂತೆ ಕೇಳಿದಾಗ ಮಹಿಳೆ ಥಳಿಸಲು ಪ್ರಾರಂಭಿಸಿದ್ದಾರೆ ಎಂದು ಶುಕ್ಲಾ ಹೇಳಿದ್ದಾರೆ.”ನಾನು ಅವರನ್ನು ಇಳಿಸಿದ ನಂತರ ದರವನ್ನು ಕೇಳಿದಾಗ, ತಾವು ವಿದ್ಯಾರ್ಥಿಗಳು, ಹೀಗಾಗಿ ಹಣ ಕೊಡುವುದಿಲ್ಲ ಎಂದು ನಿರಾಕರಿಸಿದರು, ನಾನು ಹಣ ನೀಡುವಂತೆ ಒತ್ತಾಯಿಸಿದಾಗ, ಅವರಲ್ಲೊಬ್ಬರು ನನ್ನ ಕಾಲರ್ ಅನ್ನು ಹಿಡಿದು ನಂತರ ತನ್ನ ಮೊಬೈಲ್ ಅನ್ನು ಸಹೋದರಿಗೆ ಕೊಟ್ಟು ಅದನ್ನು ರೆಕಾರ್ಡ್ ಮಾಡಲು ಹೇಳಿದ್ದಾರೆ. ನಾನು ನಂತರ ಹಣ ಬೇಡ ಎಂದು ಹೇಳಿದೆ. ನಾನು ಅವರಿಗೆ ಏನೂ ಮಾಡಿಲ್ಲ” ಎಂದು ಆಟೋ ಚಾಲಕ ಹೇಳಿದ್ದಾರೆ.
ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ತನ್ನ ವೀಡಿಯೊವನ್ನು ನೋಡಿದ ನಂತರ ತಾನು ಅವಮಾನಿತನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.ನಂತರ ಪೊಲೀಸರ ಬಳಿಗೆ ಹೋದ ಆಟೋ ಚಾಲಕ, “ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ವೈರಲ್ ಮಾಡಿ ನನ್ನ ಮಾನಹಾನಿ ಮಾಡಿದ್ದಾರೆ. ನನಗೆ ತುಂಬಾ ಅವಮಾನ ಮಾಡಲಾಗಿದೆ, ನನಗೆ ಭಿಕ್ಷೆ ಬೇಡಲು ಸಹ ಸಾಧ್ಯವಾಗುವುದಿಲ್ಲ, ನನಗೆ ನ್ಯಾಯ ಸಿಗಬೇಕು” ಎಂದು ದೂರು ನೀಡಿದ್ದಾರೆ. ಎಳೆದಾಡಿ ಹಲ್ಲೆ ನಡೆಸಿದ್ದರಿಂದ ತನ್ನ ಎದೆಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ಆದಾಗ್ಯೂ, ಮಹಿಳೆ, ಆತ ತನ್ನ ಬಗ್ಗೆ “ತಪ್ಪು ಪದ” ಬಳಸಿದ್ದಾನೆ ಎಂದು ಹೇಳಿಕೊಂಡಿದ್ದಾರೆ. ಅವರು ವೀಡಿಯೊ ಹೇಳಿಕೆಯಲ್ಲಿ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಆ ವ್ಯಕ್ತಿ ತನ್ನ ಬಗ್ಗೆ ಅಶ್ಲೀಲ ಭಾಷೆಯನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ. “ಅದಕ್ಕಾಗಿಯೇ ನಾನು ಆತನನ್ನು ಥಳಿಸಿದೆ. ಅಂದಿನಿಂದ, ನನಗೆ ಬೆದರಿಕೆ ಕರೆಗಳು ಬರುತ್ತಿವೆ, ನಂತರ ನಾನು ನನ್ನ ವೈಯಕ್ತಿಕ ಐಡಿಯಿಂದ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದೇನೆ” ಎಂದು ಅವರು ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಮಿರ್ಜಾಪುರ ಪೊಲೀಸರು ತಿಳಿಸಿದ್ದಾರೆ.