ಬೆಂಗಳೂರು: ಬೆಂಗಳೂರು ಕೇಂದ್ರ ಭಾಗದಲ್ಲಿರುವ ಆನಂದ್ ರಾವ್ ವೃತ್ತದ ಬಳಿ 59 ಮಹಡಿಗಳ ಬೃಹತ್ ಅವಳಿ ಗೋಪುರ ನಿರ್ಮಾಣಕ್ಕೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಆನಂದ್‌ರಾವ್ ವೃತ್ತದ ಬಳಿಯ 8.30 ಎಕರೆ ಸರ್ಕಾರಿಜಾಗದಲ್ಲಿ 5.23 ಎಕರೆ ಜಾಗ ಬಳಸಿಕೊಂಡು ಬಹುಮಹಡಿ ಅವಳಿ ಕಟ್ಟಡ ನಿರ್ಮಾಣಕ್ಕೆ 2020 ರಲ್ಲೇ ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಇದೀಗ ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮ ಲಿಮಿಟೆಡ್ (ಎನ್‌ಬಿಸಿಸಿ) ಸಂಸ್ಥೆಯಿಂದ ನಿರ್ಮಾಣದ ವೆಚ್ಚ ಭರಿಸಿ ಅವಳಿ ಗೋಪುರ ನಿರ್ಮಾಣ ಕುರಿತು ಪ್ರಸ್ತಾವನೆಗೆ ಸಂಪುಟದಲ್ಲಿ ಒಪ್ಪಿಗೆ
ದೊರೆಯುವ ಸಾಧ್ಯತೆಯಿದೆ. ಸುಮಾರು 1,500 ಕೋಟಿರು. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಲಾಗಿದ್ದು, ಇಲ್ಲಿಂದ ಕೆಂಪೇಗೌಡ ಬಸ್ಸು ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣ, ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದವರೆಗೆ ಸೈವಾಕ್ ನಿರ್ಮಾಣಕ್ಕೂ ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.