ಮಂಗಳೂರು: ಮಹಿಳಾ ಪ್ರಧಾನ ತುಳು ಚಲನಚಿತ್ರ ‘ಮೀರಾ’ ಫೆಬ್ರವರಿ 21ರಂದು ದೇಶದಾದ್ಯಂತ ತೆರೆ ಕಾಣಲಿದೆ.

ಅಸ್ತ್ರ ಪ್ರೊಡಕ್ಷನ್‌ನ ಬ್ಯಾನರ್ ಅಡಿಯಲ್ಲಿ, ಅಶ್ವತ್ಥ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರವು ತುಳು ಚಿತ್ರರಂಗದಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ. ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ ಮಾಡಿ ಹಾಡನ್ನು ರೂಪಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ಲಂಚುಲಾಲ್ ಕೆ.ಎಸ್‌. ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇಶಿತಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾ‌ರ್, ಸ್ವರಾಜ್ ಶೆಟ್ಟಿ, ಜೆ.ಪಿ.ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವರ್ಕಾಡಿ, ಯತೀಶ್ ಪೂಜಾರಿ, ಅಶ್ವತ್ಥ, ಬೇಬಿ ಲಕ್ಷ್ಯ ಎಲ್. ಜೊತೆಗೆ, ಮುಂಬೈ ಮೂಲದ ತುಳು ಬ್ಲಾಗರ್ ನಟಿ ರಕ್ಷಿತಾ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದರು.

‘ಮೀರಾ’ ಚಲನಚಿತ್ರದ ಡಿಒಪಿ ಅಜಯ್ ಕೆ.ಎಸ್, ಜಾಬಿನ್ಸ್‌ ಸೆಬಾಸ್ಟಿಯನ್ ಸಂಕಲನ, ರಜ್ಜು ಜಯಪ್ರಕಾಶ್ ಸಂಗೀತ ಸಂಯೋಜನೆ, ಜಯಪ್ರಕಾಶ್ ಕಳೇರಿ ಗೀತೆ ರಚನೆ ಮಾಡಿದ್ದಾರೆ. ಮಲಯಾಳಂ ಸಿನೆಮಾ ‘ಭ್ರಮಯುಗಂ’ ಖ್ಯಾತಿಯ ಲಿಜು ಪ್ರಭಾಕರ್ ಚಿತ್ರದ ಡಿ.ಐ ವಿಭಾಗ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಮಧುಬಾಲಕೃಷ್ಣ ಸೇರಿದಂತೆ ಪ್ರಸಿದ್ಧ ಗಾಯಕರ ಧ್ವನಿಯಲ್ಲಿ ಮೂಡಿಬಂದಿದೆ ಎಂದರು.

ಸಹಾಯಕ ನಿರ್ದೇಶಕ ಜಿತಿನ್ ಕುಂಬ್ಳೆ, ನಟಚರಣ್‌ ಸಿಆರ್‌ಬಿ ಇದ್ದರು.