ಬೆಳಗಾವಿ: ಗೋವಾದ ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೂ ಮಾಮಲೇದಾರ್ (69) ಅವರ ಮೇಲೆ ಬೆಳಗಾವಿಯಲ್ಲಿ ಶನಿವಾರ ಮಧ್ಯಾಹ್ನ ಆಟೊ ಚಾಲಕ ಹಲ್ಲೆ ಮಾಡಿದ್ದಾನೆ. ಘಟನೆಯ ಕೆಲವೇ ನಿಮಿಷಗಳಲ್ಲಿ ಅವರು ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಖಡೇಬಜಾರ್ ಶ್ರೀನಿವಾಸ ಲಾಡ್ಜ್ ಮುಂದೆ ಘಟನೆ ನಡೆದಿದೆ. ಲಾವೊ ಅವರು ಮರಳಿ ಲಾಡ್ಜ್ ಒಳಗೆ ಹೋಗುವಾಗ ಕುಸಿದುಬಿದ್ದ ಮೃತಪಟ್ಟರು.ಇದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಲಾವೊ ಮಾಮಲೇದಾರ್ ಕೆಲಸದ ನಿಮಿತ್ತ ಬೆಳಗಾವಿಗೆ ಬಂದಿದ್ದು ಖಡೇಬಜಾರ್‌ನಲ್ಲಿರುವ ಶ್ರೀನಿವಾಸ ಲಾಡ್ಜ್‌ನಲ್ಲಿ ತಂಗಿದ್ದರು. ಮಧ್ಯಾಹ್ನ ಲಾಡ್ಜ್‌ಗೆ ಮರಳುವಾಗ ಅವರ ಕಾರು ಎದುರಿಗೆ ಇದ್ದ ಆಟೊಗೆ ತಾಗಿದೆ. ಕೋಪಗೊಂಡ ಆಟೊ ಚಾಲಕ ಜಗಳ ಮಾಡಿದ. ಆಗ ಲಾವೊ ಮಾತಿಗಿಳಿದಿದ್ದರು.

ಸಿಟ್ಟಿಗೆದ್ದ ಆಟೊ ಚಾಲಕ ಲಾವೊ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಸುತ್ತ ಸೇರಿದ ಜನ ಜಗಳ ಬಿಡಿಸಿದರು. ನಂತರ ಲಾವೊ ಅವರು ಲಾಡ್ಜ್ ಒಳಗೆ ಹೋಗಲು ಮೆಟ್ಟಿಲು ಹತ್ತಿದರು. ಮೆಟ್ಟಿಲು ಬಳಿಯೇ ಕುಸಿದುಬಿದ್ದು ಮೃತಪಟ್ಟರು.