ಮಂಗಳೂರು: ಕೆಪಿಸಿಸಿ ಅದ್ಯಕ್ಷ ಹುದ್ದೆಯಿಂದ ಡಿಸಿಎಂ ಡಿ.ಕೆ. ಶಿವಕುಮಾರ ಬದಲಾವಣೆಗೆ ನಮ್ಮ ಹಠವಿಲ್ಲ. ನಮ್ಮದು ಏನೇಯಿದ್ರೂ ರಿಕ್ವಸ್ಟ್‌ ಅಷ್ಟೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎನ್ನುವ ಬಗ್ಗೆ ನಮ್ಮದೇನು ಹಠ ಇಲ್ಲ ರಿಕ್ವೆಸ್ಟ್ ಮಾತ್ರ. ನಾವು ಹೋಗಿ ಹೈಕಮಾಂಡ್ ಬಳಿ ಪ್ರಾರ್ಥನೆ ಮಾಡೋದು ಮಾತ್ರ. ಅದರ ಬಗ್ಗೆ ತೀರ್ಮಾನವನ್ನು ಹೈಕಮಾಂಡ್ ಮಾಡುತ್ತದೆ. ದೆಹಲಿ ಹೈಕಮಾಂಡ್ ಅಂದ್ರೆ ದೇವಸ್ಥಾನ ಇದ್ದ ಹಾಗೇ. ಅಲ್ಲಿಗೆ ಯಾರು ಬೇಕಿದ್ರೂ ಹೋಗಬಹುದು, ಯಾರು ಹೋಗೋದಕ್ಕೂ ನಿರ್ಬಂಧ ಇಲ್ಲ. ನಾನು ದೆಹಲಿ ಹೋದಾಗ ಪಕ್ಷ ಬೆಳೆಯಬೇಕು, ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋದನ್ನ ಹೈಕಮಾಂಡ್ ದೇವಾಲಯದಲ್ಲಿ ಬೇಡಿಕೊಂಡಿದ್ದೇನೆ ಎಂದರು.

ಎಲ್ಲರೂ ಹೋಗಿ ಅದನ್ನೇ ಬೇಡೋದು. ಸಣ್ಣ ಪುಟ್ಟ ವ್ಯತ್ಯಾಸಗಳು ಇದ್ದರೆ ಅದನ್ನ ಸರಿ ಮಾಡೋ ಪ್ರಾರ್ಥನೆ ಕೂಡಾ ಅಲ್ಲಿಯೇ ಆಗುತ್ತೆ, ಸಚಿವ ರಾಜಣ್ಣ ಅವರನ್ನು ಕರೆಸಿ ಚರ್ಚೆ ನಡೆಸಬಹುದಿತ್ತು. ಸಮಸ್ಯೆಗೆ ಇಲ್ಲಿಯೇ ಪರಿಹಾರ ಸಿಗುತ್ತಿತ್ತು. ದೆಹಲಿಗೆ ಹೋಗುವ ಅವಶ್ಯಕತೆ ಇರಲಿಲ್ಲ. ಕಾರ್ಯಾಧ್ಯಕ್ಷರ ಅಧೀನದಲ್ಲೇ ರಾಜಣ್ಣ ಇರುವಂತದ್ದು, ದೆಹಲಿಗೆ ಪತ್ರ ಬರೆಯುವ ಅವಶ್ಯಕತೆ ಇರಲಿಲ್ಲ, ಗೃಹಲಕ್ಷ್ಮಿ ಹಣ ಎರಡು ತಿಂಗಳಿನಿಂದ ಆಗಿಲ್ಲ, ಆದರೆ ಈಗ ಒಟ್ಟಿಗೇ ಬಿಡುಗಡೆ ಆಗುತ್ತೆ. ಈ ಹಿಂದೆಯೂ ಎರಡು ತಿಂಗಳಿಗೊಮ್ಮೆ ಬಿಡುಗಡೆ ಆಗುತ್ತಾ ಬಂದಿದೆ. ಒಟ್ಟಾರೆ ಹಣ ಕೂಡಿಸಿ ಕೊಡುತ್ತಿದ್ದೇವೆ, ಯೋಜನೆ ನಿಲ್ಲಿಸಿಲ್ಲ. ತಾತ್ಕಾಲಿಕ ತಡವಾಗಿದೆ, ಪೂರ್ತಿ ಕೊಡೋ ಪ್ರಯತ್ನ ಮಾಡುತ್ತೇವೆ, ರಾಜ್ಯದಲ್ಲಿ ದಲಿತ ಸಮಾವೇಶ ನಡೆಸುವ ವಿಚಾರ ಸದ್ಯಕ್ಕೆ ಚರ್ಚೆ ಇಲ್ಲ. ಅದು ಗೃಹಸಚಿವ ಡಾ ಪರಮೇಶ್ವರ್ ನೇತೃತ್ವದಲ್ಲಿ ನಡೆಯುವ ಸಮಾವೇಶ. ಅವರು ಯಾವಾಗ ಹೇಳುತ್ತಾರೆ ಆಗ ಸಮಾವೇಶ ನಡೆಯುತ್ತೆ ಎಂದರು.