ಬೆಳಗಾವಿ : ಜಗತ್ತಿನ ಬೆಳವಣಿಗೆ ವಿಜ್ಞಾನದ ಮೇಲೆ ನಿಂತಿದೆ. ವಿಜ್ಞಾನದ ಬೆಳವಣಿಗೆ ಜಗತ್ತಿನ ಬೆಳವಣಿಗೆ. ನಾವಿಂದು ಕಾಣುವ ಜಗತ್ತು ವಿಜ್ಞಾನದ ಕೊಡುಗೆ. ವಿಜ್ಞಾನದ ಹಿಂದೆ ಹೋದ ದೇಶ ಭೌತಿಕ ಮತ್ತು ಬೌದ್ಧಿಕವಾಗಿ ಬದಲಾಗಿದೆ. ಬದಲಾಯಿಸುವ ಗುಣ ವಿಜ್ಞಾನಕ್ಕಿದೆ. ಹಾಗಾಗಿ ಜಗತ್ತಿನ ವಿಕಾಸದ ರಹದಾರಿ ವಿಜ್ಞಾನವಾಗಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಸಿ. ಎಂ. ತ್ಯಾಗರಾಜ ಅವರು ಅಭಿಪ್ರಾಯಪಟ್ಟರು.

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನದ ನಿಮಿತ್ತ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ ಸಿ.ವಿ. ರಾಮನ್. ಅಂದು ಸುಧಾರಿತ ವಿಜ್ಞಾನದ ಪರಿಕರಗಳ ಕೊರತೆಯ ಮಧ್ಯೆಯೂ ತಮ್ಮಲ್ಲಿರುವ ಅಗಾಧ ಜ್ಞಾನದ ಮೂಲಕ ವಿಜ್ಞಾನ ಲೋಕಕ್ಕೆ ‘ರಾಮನ್ ಪರಿಣಾಮ’ ಸಿದ್ಧಾಂತವನ್ನು ಕೊಟ್ಟರು. ಇಂದು ಎಲ್ಲವೂ ಇದೆ. ಆದರೆ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ . ಸಾಧನೆಯ ಶ್ರಮದಿಂದ ವಿದ್ಯಾರ್ಥಿಗಳು ದೂರಾಗಿದ್ದಾರೆ. ಸಾಧನೆಯ ಪಥ ಬೇಡ, ಫಲ ಬೇಕು ಎಂಬ ಮಾನಸಿಕ ಸ್ಥಿತಿಯಿಂದ ವಿದ್ಯಾರ್ಥಿಗಳು ಹೊರಬರಬೇಕು ಎಂದು ಹೇಳಿದರು.

ಬಡತನ ಇನ್ನಿತರ ಕುಂದು ಕೊರತೆಗಳ ನೆಪ ಮಾಡಿಕೊಂಡು ತಮ್ಮ ಬದುಕಿಗೆ ತಾವೇ ಪೂರ್ಣ ವಿರಾಮ ಹಾಕುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಜಗತ್ತಿನ ವಿಜ್ಞಾನ ಲೋಕದ ಸಾಧಕರನ್ನು ಒಂದು ಸಲ ಕಣ್ಣರಳಿಸಿ ನೋಡಬೇಕು. ಅವರಲ್ಲಿ ಬಹುತೇಕರು ಸಾಮಾನ್ಯ ಕುಟುಂಬದಿಂದ ಬಂದವರು. ಅವರೆಲ್ಲ ಗುಡಿಸಲಲ್ಲಿ ಅರಳಿ ಜಗತ್ತನ್ನು ಬೆಳಗಿದರು ಎಂದರು.

ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ಹಾಗೂ ಎಲೆಕ್ಟ್ರಾನಿಕ್ ವಿಭಾಗದ ಪ್ರೊ. ಶಿವಪ್ಪ ಬಿ. ಗುಡೆನ್ನವರ್ ಅವರು ಸಿ.ವಿ, ರಾಮನ್ ಅವರ ಬಾಲ್ಯದ ಜೀವನ ಸಾಮಾನ್ಯವಾಗಿದ್ದರೂ ತುಂಬಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಅವರ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಾಧನೆಯ ಮಜಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸಿ. ವಿ. ರಾಮನ್ ಅವರ ರಾಮನ್ ಎಫೆಕ್ಟ್ ವಿಜ್ಞಾನ ಲೋಕದಲ್ಲಿ ಸಂಚಲನವನ್ನೇ ಸೃಷ್ಟಿಸಿತು ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ವಿಭಾಗದ ಪ್ರೊ. ನವೀನಕುಮಾರ್ ಎಸ್. ಕೆ. ಅವರು ವಿಜ್ಞಾನದ ಆವಿಷ್ಕಾರದಿಂದಲೇ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ನಾವು ಉಪಯೋಗಿಸುತ್ತಿರುವುದು ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ ಎಂ.ಜಿ. ಹೆಗಡೆ ಅವರು ವಿಜ್ಞಾನದ ತಳಹದಿಯ ಮೇಲೆ ನಿಂತ ಸಣ್ಣ ಪುಟ್ಟ ದೇಶಗಳು ಇಂದು ಜಗತ್ತನ್ನು ಆಳುತ್ತಿವೆ. ಅವುಗಳಿಂದ ಹೊರಬರುವ ಹೊಸ ಆವಿಷ್ಕಾರಗಳು, ಫಲಿತಗಳು ಜಗತ್ತನ್ನು ತಲ್ಲಣಗೊಳಿಸುತ್ತಿವೆ. ಸಿ ವಿ. ರಾಮನ್ ಅವರು ನಮ್ಮ ವೈಜ್ಞಾನಿಕ ಪರಂಪರೆಯ ಕೊಂಡಿ. ನೊಬೆಲ್ ಪಡೆದುಕೊಂಡು ಈ ದೇಶದ ವಿಜ್ಞಾನಕ್ಕೊಂದು ಗಟ್ಟಿಯಾದ ತಳಹದಿಯನ್ನು ಒದಗಿಸಿದರು. ವಿಜ್ಞಾನದ ವಿದ್ಯಾರ್ಥಿಗಳಿಗೆ ಅವರು ಎಂದಿಗೂ ಸ್ಫೂರ್ತಿಯಾಗಿರುತ್ತಾರೆ ಎಂದರು.

ವಿಜ್ಞಾನದ ದಿನಾಚರಣೆ ನಿಮಿತ್ತ ಹಲವು ದಿನಗಳಿಂದ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಡಾ. ಲಾವಣ್ಯ ಗುಂಜಾಳ ಪ್ರಾರ್ಥಿಸಿದರು. ಡಾ. ಜ್ಯೋತಿ ಬಿರಾದಾರ ಸ್ವಾಗತಿಸಿದರು. ಡಾ. ಹೊಯ್ಮಂತಿ ಅಧಿಕಾರಿ ಪರಿಚಯಿಸಿದರು, ಡಾ. ನಮಿತಾ ಪೋತರಾಜ್ ವಂದಿಸಿದರು. ವಿದ್ಯಾರ್ಥಿನಿ ಮೀರಾ ನದಾಫ್ ನಿರೂಪಿಸಿದರು. ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.