
ಬಂಟ್ವಾಳ: ತುಳುನಾಡಲ್ಲಿ ದೇವರಿಗಿಂತ ಹೆಚ್ಚಾಗಿ ಜನರು ದೈವಗಳ ಮೊರೆ ಹೋಗುವುದು, ಪ್ರಾರ್ಥನೆ ನೆರವೇರಿಸುವುದು ಹೆಚ್ಚು . ಅದಕ್ಕೆ ತಕ್ಕಂತೆ ಆಗಾಗ ದೈವ- ದೇವರುಗಳು ತಮ್ಮ ಕಾರಣಿಕ ಶಕ್ತಿಯನ್ನು ಮೆರೆಯುವುದುಂಟು. ಇದೀಗ ಅಂಥ ಮತ್ತೊಂದು ಪವಾಡ ನಡೆದಿದೆ.
ಫರಂಗಿಪೇಟೆಯ ಕಾಲೇಜು ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿ ಹಲವು ದಿನಗಳ ಬಳಿಕ ಮಾರ್ಚ್ 8 ರಂದು ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ಪೊಲೀಸ್ ತಂಡಗಳು ಹತ್ತು ದಿನಗಳ ಕಾಲ ದಿಗಂತ್ ಗೆ ಹುಡುಕಾಟ ನಡೆಸಿದ್ದರು. ಉಡುಪಿಯ ಮಳಿಗೆಯಲ್ಲಿ ದಿಗಂತ್ ಪತ್ತೆಯಾಗಿದ್ದ. ಈ ನಡುವೆ ದಿಗಂತ್ ಪತ್ತೆ ಹಿಂದೆ ದೈವ ಪವಾಡ ಕಾರಣವಾಗಿತ್ತು ಎನ್ನಲಾಗಿದೆ.
ದಿಗಂತ್ ಕುಟುಂಬದ ಭಕ್ತಿಗೆ ತುಳುನಾಡಿನ ಕಾರಣಿಕದ ದೈವ ಒಲಿದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ದಿಗಂತ್ ಕುಟುಂಬ ಅರ್ಕುಳ ಉಳ್ಳಾಕುಲು ಮಗೃಂತಾಯ ದೈವದ ಚಾಕರಿ ಮಾಡಿಕೊಂಡು ಬರುತ್ತಿದ್ದಾರೆ. ನಾಲ್ಕು ತಲೆಮಾರುಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೈವಸ್ಥಾನದಲ್ಲಿ ದೀವಟಿಗೆ ಹಿಡಿಯುವ ಕೆಲಸ ಮಾಡುವ ದಿಗಂತ್ ಸಹೋದರ ರವಿ ಅವರು ನೇಮೋತ್ಸವದಲ್ಲಿ ತಮ್ಮನಿಗಾಗಿ ಮನಸಲ್ಲೇ ಸಂಕಲ್ಪ ಮಾಡಿದ್ದರು.
ದೈವದ ನೇಮೋತ್ಸವದ ಧ್ವಜ ಕೆಳಗೆ ಇಳಿಯುದರ ಒಳಗಾಗಿ ನನ್ನ ತಮ್ಮ ಪತ್ತೆಯಾಗಬೇಕು ಎನ್ನುವ ಸಂಕಲ್ಪ ಮಾಡಿದ್ದರು. ನೇಮೋತ್ಸವದ ಸಂದರ್ಭದಲ್ಲಿ ಊರವರು ದೈವದಲ್ಲಿ ವಿಚಾರ ತಿಳಿಸು ಎಂದು ಹೇಳಿದ್ದರು. ಆದರೆ, ಸಹೋದರ ರವಿ ದೈವದಲ್ಲಿ ಪ್ರಶ್ನೆ ಕೇಳುವುದಿಲ್ಲ. ನಮ್ಮ ಸೇವೆಗೆ ದೈವ ದಿಗಂತ್ ಪತ್ತೆ ಮಾಡಬೇಕು. ನೇಮೋತ್ಸವ ಸಂದರ್ಭ ಏರಿದ ಕೊಡಿ ಇಳಿಯುವುದರ ಒಳಗೆ ತಮ್ಮ ಬರಬೇಕೆಂದು ಹರಕೆ ಹೊತ್ತಿದ್ದರು.
ರವಿವಾರ ದೈವದ ನೇಮೋತ್ಸವದ ಧ್ವಜಾರೋಹಣ ನಡೆದಿತ್ತು. ಆದರೆ ಶನಿವಾರ ಸಂಜೆಯೇ ದಿಗಂತ್ ಪತ್ತೆಯಾಗಿದ್ದ. ದೈವ ನಮ್ಮ ಕುಟುಂಬದ ಚಾಕರಿಗೆ ಫಲ ನೀಡಿದೆ. ದಿಗಂತ್‌ನನ್ನು ಉಳ್ಳಾಕುಲು ಮಗೃಂತಾಯ ದೈವವೇ ಪತ್ತೆ ಹಚ್ಚಿದೆ ಎಂದು ದಿಗಂತ್ ಸಹೋದರ ರವಿ ಹೇಳಿದರು.