ನಾಗಪುರ: ಔರಂಗಜೇಬನ ಸಮಾಧಿ ಕೆಡಹುವಂತೆ ಬಲಪಂಥೀಯ ಸಂಘಟನೆ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪವಿತ್ರ ಗ್ರಂಥವನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಗಳ ನಡುವೆ ಸೋಮವಾರ ಕೇಂದ್ರ ನಾಗಪುರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಚಿಟ್ಟಿಶ್ ಪಾರ್ಕ್‌ನಿಂದ ಶುಕ್ರವಾರಿ ತಲಾವ್‌ ರಸ್ತೆ ಬೆಲ್ಟ್ವರೆಗೆ ಹಿಂಸಾಚಾರದಿಂದ ಹೆಚ್ಚು ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿ ಕೆಲವು ನಾಲ್ಕು ಚಕ್ರದ ವಾಹನಗಳಿಗೆ ಗಲಭೆಕೋರರು ಬೆಂಕಿ ಹಚ್ಚಿದ್ದಾರೆ. ನಿವಾಸಿಗಳ ಮನೆಗಳ ಮೇಲೂ ಕಲ್ಲು ಎಸೆಯಲಾಗಿದೆ.

ಸಾವಿರಾರು ಸಂಖ್ಯೆಯಲ್ಲಿರುವ ಜನರನ್ನು ಚದುರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಮಹಲ್ ಪ್ರದೇಶದ ಛತ್ರಪತಿ ಶಿವಾಜಿ ಮಹಾರಾಜ್ ಪ್ರತಿಮೆಯ ಬಳಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಸ್ವಲ್ಪ ಸಮಯದ ನಂತರ ಗಲಾಟೆ ಪ್ರಾರಂಭವಾಯಿತು ಎಂದು ಪೊಲಿಸರು ತಿಳಿಸಿದ್ದಾರೆ..

ಪೊಲೀಸರ ಪ್ರಕಾರ, ಆಂದೋಲನದ ಸಮಯದಲ್ಲಿ ಕುರಾನ್ ಅನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಗಳು ಹರಡಿವೆ. ಬಜರಂಗದಳದ ಪ್ರತಿಭಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ಹರಡಿದ್ದು, ಮುಸ್ಲಿಂ ಸಮುದಾಯದ ಸದಸ್ಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಪವಿತ್ರ ಗ್ರಂಥವನ್ನು ಸುಟ್ಟುಹಾಕಲಾಗಿದೆ ಎಂದು ಆರೋಪಿಸಿ ಸಂಜೆ ಗಣೇಶಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನ ನಂತರ, ಮಹಲ್‌, ಕೊತ್ವಾಲಿ, ಗಣೇಶಪೇಟೆ ಮತ್ತು ಚಿತನ್ವಿಸ್ ಪಾರ್ಕ್‌ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಮುಸ್ಲಿಂ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಸಾಚಾರ: ಹಲವರಿಗೆ ಗಾಯ, ನಿಷೇಧಾಜ್ಞೆ ಜಾರಿ: ನಗರದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ಹತೋಟಿಗೆ ತರುವ ಯತ್ನಗಳು ನಡೆಯುತ್ತಿರುವ ನಡುವೆಯೇ ಹಂಸಪುರಿ ಪ್ರದೇಶದಲ್ಲಿ ಮತ್ತೊಂದು ಹಿಂಸಾಚಾರ ವರದಿಯಾಗಿದ್ದು, ನಾಗಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಘಲ್ ದೊರೆ ಔರಂಗಜೇಬ್ ಸಮಾಧಿ ತೆರವುಗೊಳಿಸುವಂತೆ ಆಗ್ರಹಿಸಿ ಬಜರಂಗದಳದ ಸದಸ್ಯರು ಸೋಮವಾರ ನಡೆಸಿದ ಪ್ರತಿಭಟನೆ ವೇಳೆ, ಮುಸ್ಲಿಂ ಸಮುದಾಯದ ಪವಿತ್ರ ಗ್ರಂಥ ಕುರಾನ್ ಅನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿ ಹಬ್ಬಿದ ಪರಿಣಾಮ ನಾಗಪುರದ ಕೇಂದ್ರ ಭಾಗದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

‘ನಾಗಪುರದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163(ಮಾನವ ಜೀವಕ್ಕೆ ಅಪಾಯ, ಸಾರ್ವಜನಿಕ ಗೊಂದಲ ಅಥವಾ ಗಲಭೆಗಳನ್ನು ತಡೆಗಟ್ಟಲು ತುರ್ತು ಪ್ರಕರಣಗಳಲ್ಲಿ ತಕ್ಷಣದ ಆದೇಶಗಳನ್ನು ಹೊರಡಿಸಲು ಮ್ಯಾಜಿಸ್ಟ್ರೇಟ್‌ಗಳಿಗೆ ಅಧಿಕಾರ ನೀಡುವುದು) ಅನ್ನು ವಿಧಿಸಲಾಗಿದೆ’ ಎಂದು ನಾಗುರ ಪೊಲೀಸ್‌ ಆಯುಕ್ತ ಡಾ. ರವೀಂದರ್‌ ಸಿಂಘಾಲ್ ಹೇಳಿದ್ದಾರೆ.

ಸೋಮವಾರ ರಾತ್ರಿ 7.30ರ ಸುಮಾರಿಗೆ ಚಿಟ್ಟಿಸ್ ಪಾರ್ಕ್ ಮತ್ತು ಮಹಲ್ ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿತ್ತು. ಪೊಲೀಸರು ಸೇರಿದಂತೆ ಸುಮಾರು 15 ಜನರು ಘರ್ಷಣೆಯಲ್ಲಿ ಗಾಯಗೊಂಡಿದ್ದರು. ನಂತರ ರಾತ್ರಿ 10.30ರ ಸುಮಾರಿಗೆ ಹಂಸಪುರಿ ಪ್ರದೇಶದಲ್ಲಿ ಘರ್ಷಣೆ ಭುಗಿಲೆದ್ದಿದ್ದು, ಉದ್ರಿಕ್ತರ ಗುಂಪು ವಾಹನ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದರು.

ಹಂಸಪುರಿ ಪ್ರದೇಶದ ನಿವಾಸಿ ಶರದ್ ಗುಪ್ತಾ (50) ಅವರ ಮನೆಗೆ ಕಲ್ಲು ತೂರಾಟ ನಡೆಸಿದ್ದ ಉದ್ರಿಕ್ತರು, ಅವರ ಮನೆಯ ಮುಂದೆ ನಿಲ್ಲಿಸಿದ್ದ ನಾಲ್ಕು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದರು.

‘ದಾಳಿಯಲ್ಲಿ ನಾನು ಗಾಯಗೊಂಡಿದ್ದೆ. ನಮ್ಮ ಮನೆಯ ಪಕ್ಕದ ಅಂಗಡಿಗೂ ಬೆಂಕಿ ಹಚ್ಚಿ ಧ್ವಂಸ ಮಾಡಿದ್ದಾರೆ. ರಾತ್ರಿ 1 ಗಂಟೆಯ ನಂತರ ಪೊಲೀಸರು ಬಂದರು’ ಎಂದು ಗುಪ್ತಾ ಹೇಳಿದ್ದಾರೆ.

‘ರಾತ್ರಿ 10.30ರ ಸುಮಾರಿಗೆ ಗುಂಪೊಂದು ಮನೆಯ ಮುಂದೆ ಬಂದು ಗಲಾಟೆ ನಡೆಸಿದ್ದು, ಮನೆಯ ಹೊರಗೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳ ಬರುವ ಮೊದಲೇ ಬೆಂಕಿ ನಂದಿಸಿದೆವು’ ಎಂದು ಹಂಸಪುರಿ ನಿವಾಸಿಯೊಬ್ಬರು ಪಿಟಿಐಗೆ ಹೇಳಿದ್ದಾರೆ.