ಅರಬ್ ನಾಡಿನ ಶಿಕ್ಷಣ ಕ್ಷೇತ್ರದ ಬಗ್ಗೆ ನನಗೆ ಕುತೂಹಲವೂ ಇತ್ತು. ಕೆಲವು ತಪ್ಪು ಕಲ್ಪನೆಗಳೂ ಇದ್ದವು. ಆದರೆ ಅಚ್ಚರಿಯೆಂಬಂತೆ ಸೌದಿ ಅರೇಬಿಯಾದಲ್ಲಿ ಸಾಕ್ಷರತೆಯ ಪ್ರಮಾಣ ಒಟ್ಟು ಶೇ. 98 ರಷ್ಟಿದ್ದು ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇ. 96 ರಷ್ಟಿದೆ. ( ಪುರುಷರದು ಶೇ. 99).

ಸೌದಿಯಲ್ಲಿ ಶಿಕ್ಷಣ ಎಲ್ಲ ಹಂತಗಳಲ್ಲೂ ಉಚಿತ. ಪ್ರಾಥಮಿಕದಿಂದ ಮುಂದೆ ಆರು ವರ್ಷ ಶಿಕ್ಷಣ ಎಲ್ಲರಿಗೂ ಕಡ್ಡಾಯ. 1957 ರವರೆಗೆ ಇಲ್ಲಿ ಉನ್ನತ ಶಿಕ್ಷಣ ಪಡೆಯಲು ಬೇರೆ ದೇಶಗಳಿಗೆ ಹೋಗಬೇಕಿತ್ತು. ಇಂದು ಶಿಕ್ಷಣ ಕ್ಷೇತ್ರ ಅದ್ಭುತ ಪ್ರಗತಿ ಸಾಧಿಸಿದ್ದು ಎಲ್ಲ ಬಗೆಯ ಮತ್ತು ಎಲ್ಲ ಹಂತಗಳ ಉನ್ನತ ಶಿಕ್ಷಣದ ಸೌಲಭ್ಯಗಳೂ ಇಲ್ಲಿ‌ ಲಭ್ಯವಿವೆ.

ಅಷ್ಟೇ ಅಲ್ಲ, ಸೌದಿ ಸರಕಾರದಲ್ಲಿ ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೆಂದರೆ, ಸರಕಾರದ ಎರಡನೇ ಅತಿ ಹೆಚ್ಚು ವೆಚ್ಚದ ಕ್ಷೇತ್ರವೆಂದರೆ ಶಿಕ್ಷಣ. ದೇಶೀಯ ಆದಾಯದ ಶೇ. 8.8 ರಷ್ಟನ್ನು ಶಿಕ್ಷಣಕ್ಕಾಗಿ ಖರ್ಚು ಮಾಡಲಾಗುತ್ತದೆ. ಇದು ಜಾಗತಿಕ ಸರಾಸರಿಗಿಂತ (4.6) ಎರಡು ಪಟ್ಟು ಹೆಚ್ಚು. ಈ ದೇಶದ ರಾಷ್ಟ್ರೀಯ ಶಿಕ್ಷಣದ ಬಜೆಟ್ 53.4 ಬಿಲಿಯನ್ ಡಾಲರ್.( 200 ಬಿಲಿಯನ್ ಸೌದಿ ರಿಯಾಲ್. ). ಒಟ್ಟು ಶೈಕ್ಷಣಿಕ ದಾಖಲಾತಿ 7. 5 ಮಿಲಿಯನ್. ಪದವೀಧರರಲ್ಲಿ ಮಹಿಳೆಯರ ಸಂಖ್ಯೆಯೂ ಸಾಕಷ್ಟು ದೊಡ್ಡದು. ಈ ಹಿಂದೆ ಹೇಳಿರುವಂತೆ ಜಗತ್ತಿನ ಅತಿ ದೊಡ್ಡ ಮಹಿಳಾ ವಿಶ್ವವಿದ್ಯಾಲಯ ರಿಯಾಧ್ ನಲ್ಲಿದೆ. ಈಚಿನ ದಶಕದಲ್ಲಂತೂ ಮಹಿಳೆಯರಿಗೆ ಎಲ್ಲ ಬಗೆಯ ಆಧುನಿಕ ಶಿಕ್ಷಣ ಕಲಿಯುವ ಅವಕಾಶ ತೆರೆದಿಡಲಾಗಿದೆ. ವಿಶನ್ 2030 ರನ್ವಯ ಸರಕಾರದ ಯೋಜನೆಗಳಲ್ಲಿ ಶೈಕ್ಷಣಿಕ ಸುಧಾರಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆಡಳಿತಗಾರರ ಪ್ರಕಾರ ಸೌದಿ ಅರೇಬಿಯಾ 2030 ರ ವೇಳೆಗೆ ವಿಶ್ವದ 200 ಅಗ್ರ ವಿಶ್ವವಿದ್ಯಾಲಯಗಳಲ್ಲಿ ಕನಿಷ್ಠ 5 ವಿವಿಗಳು ಸ್ಥಾನ ಪಡೆದಿರಬೇಕು. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಎಲ್ಲ ಬಗೆಯ ಪ್ರಯತ್ನ ಮಾಡಲಾಗುತ್ತಿದೆ. ಗಮನಿಸಬೇಕಾದ ಸಂಗತಿಯೆಂದರೆ ಶಾಲೆಗಳಲ್ಲಿ ಇಸ್ಲಾಮಿಕ್ ಶಿಕ್ಷಣಕ್ಕಾಗಿ ವ್ಯಯಿಸುವ ಸಮಯವನ್ನು ಕಡಿತ ಮಾಡಿ ಇತರೇ ವಿಷಯಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ದೇಶದಲ್ಲಿ ಕಿಂಗ್ ಸೌದ್ ವಿಶ್ವವಿದ್ಯಾಲಯ ಪ್ರಮುಖವಾದುದು. ಇದಲ್ಲದೆ ಇಸ್ಲಾಮಿಕ್ ವಿವಿ., ಕಿಂಗ್ ಅಬ್ದುಲ್ಲಜೀಜ್ ವಿವಿ, ಮತ್ತಿತರ ಹಲವು ವಿವಿಗಳಿವೆ. ಮಹಿಳೆಯರು ಈಚೆಗೆ ಶಿಕ್ಷಣ ಮತ್ತು ಉದ್ಯೋಗದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಪುರುಷರಿಗೆ ಸಮನಾಗಿ ಕಾಣಿಸಿಕೊಳ್ಳುವತ್ತ ಸಾಗಿದ್ದಾರೆ. ನಾವು ರಿಯಾಧ್ ನಲ್ಲಿ ಮೂರು ಪ್ರಮುಖ ಮನೋರಂಜನಾ ಸ್ಥಳಗಳಿಗೆ ಭೆಟ್ಟಿ ಕೊಟ್ಟ ಸಮಯದಲ್ಲಿ ಮುಸ್ಲಿಂ ಮಹಿಳೆಯರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮುಕ್ತವಾಗಿ ವಿಹರಿಸುತ್ತಿದ್ದುದನ್ನು ಸ್ವತಃ ಕಂಡೆವು. ಈಗಿನ ದೊರೆಯ ಆಡಳಿತ ತರುತ್ತಿರುವ ಸುಧಾರಣಾ ಕ್ರಮಗಳಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಜಾಗತಿಕ ಪರಿವರ್ತನೆಯಲ್ಲಿ ತಮ್ಮ ರಾಷ್ಟ್ರವೂ ಮುಂಚೂಣಿಯಲ್ಲಿರಬೇಕೆಂಬುದು ಅರಸನ ಅಪೇಕ್ಷೆಯಾಗಿದ್ದು ವಿಶನ್ 2030 ವ್ಯಾಪಕ ಬದಲಾವಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ನಾವು ಕರ್ನಾಟಕದಲ್ಲೇ ನೋಡುತ್ತಿರುವಂತೆ ನಮ್ಮ ಸರಕಾರಗಳಿಗೆ ಶಿಕ್ಷಣ ಕ್ಷೇತ್ರದ ಮಹತ್ವವೇ ತಿಳಿದಿಲ್ಲ. ಶಿಕ್ಷಣ ಕ್ಷೇತ್ರದ ಅವ್ಯವಸ್ಥೆ ಮತ್ತು ಅಸಡ್ಡೆ ಎಲ್ಲರಿಗೂ ಗೊತ್ತು. ಆದರೆ ಸೌದಿ ಅರೇಬಿಯಾ ಆಡಳಿತಗಾರರಿಗೆ ಶಿಕ್ಷಣದ ಮಹತ್ವ ಮತ್ತು ಅಗತ್ಯ ಮನವರಿಕೆಯಾಗಿರುವುದು ನಿಜಕ್ಕೂ ಪ್ರಶಂಸನೀಯವೇ ಸರಿ. ಅವರು ತಮ್ಮ ದೇಶದ ವಾರ್ಷಿಕ ಬಜೆಟ್ ನಲ್ಲಿ ಎರಡನೇ ಸ್ಥಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿದ್ದಾರೆ. ಶೈಕ್ಷಣಿಕ ಪ್ರಗತಿಯೇ ಉಳಿದೆಲ್ಲ ಬೆಳವಣಿಗೆಗೆ ಕಾರಣವೆನ್ನುವುದನ್ನು ಅವರು ಅರಿತಿದ್ದಾರಲ್ಲ, ಅದು ಮೆಚ್ಚಬೇಕಾದ್ದೇ.

ಸೌದಿ ಪ್ರವಾಸಾನುಭವ :13
ಅರೇಬಿಯನ್ ಕಹಿ‌ ಕಾಫಿಯ ರಮ್ಯ ಕಥೆ
*************
ಅರಬ್ ನಾಡಿಗೆ ಬಂದ ಮೇಲೆ ಇಲ್ಲಿಯ ಪ್ರಸಿದ್ಧ ಅರೇಬಿಯನ್ ಕಾಫಿ ಕುಡಿಯದಿದ್ದರೆ ಹೇಗೆ. ಕುಡಿದದ್ದೂ ಆಯಿತು. ಅದರ ಸವಿ ಅನುಭವಿಸಿದ್ದೂ ಆಯಿತು. ಜುಬೇಲ್ ದಿಂದ ರಿಯಾಧ್ ಗೆ ಹೋಗುವ 5೦೦ ಕಿ. ಮೀ. ದಾರಿಯಲ್ಲಿ ಹಲವು ಸಲ ಈ ಕಾಫಿ ಕುಡಿಯುವ ಸಂದರ್ಭ ಬಂತು. ನಿಜಕ್ಕೂ ಇಲ್ಲಿಯ ಕಾಫಿ ಸ್ಪೆಷಲ್ಲೇ.

ಅರೇಬಿಯನ್ನರಿಗೆ ಈ ಕಾಫಿ ಹುಚ್ಚು ಬಹಳ. ಕಾಫಿ ಅವರ ಬದುಕಿನ ಒಂದು ಅವಿಭಾಜ್ಯ ಅಂಗ. ಅರೇಬಿಯನ್ ಸಂಸ್ಕೃತಿ ಪರಂಪರೆಗಳೊಡನೆ ದೀರ್ಘ ಕಾಲದ ಸಂಬಂಧ ಈ ಕಾಫಿಗೆ. ಇದಕ್ಕೊಂದು ದೊಡ್ಡ ಇತಿಹಾಸವೇ ಇದೆ. ಇದೊಂದು ಇಲ್ಲಿಯ ರಾಷ್ಟ್ರೀಯ ಪೇಯವೆಂದರೇ ಸರಿಯಾದೀತು. ( ಈ ದೇಶದಲ್ಲಿ‌ ಮದ್ಯಪಾನ ಪೂರ್ಣ ನಿಷೇಧ) .

ಈ ಕಾಫಿ ಎಲ್ಲಿಂದ ಬಂತು, ಹೇಗೆ ಬಂತು ಎನ್ನುವುದು ಬಹಳ ಸ್ವಾರಸ್ಯಕರವಾದ ಸಂಗತಿ. ಇದರ ಆರಂಭ ಇಥಿಯೋಪಿಯ ಯೆಮೆನ್ ಗಳನ್ನು ತಲುಪುತ್ತದೆ. ಸೂಫಿ ಸಂತರಿಗೂ ಕಾಫಿಗೂ ಇನ್ನಿಲ್ಲದ ನಂಟು. ಹಾಗಿದ್ದರೆ ಮೊದಲು ಕಾಫಿ ಕಂಡು ಹಿಡಿದದ್ದು ಯಾರು?

ಇದಕ್ಕೊಂದು ದಂತಕಥೆಯಿದೆ. ಕಾಲ್ಡಿ ಎಂಬ ಒಬ್ಬ ಕುರಿಗಾಹಿ ಕಾಡಿನಲ್ಲಿ ಕುರಿ ಮೇಯಿಸುತ್ತಿದ್ದಾಗ ಒಂದು ನಿರ್ದಿಷ್ಟ ಗಿಡದ ಹಣ್ಣನ್ನು ತಿಂದ ಕುರಿಗಳು ರಾತ್ರಿ ನಿದ್ದೆಯನ್ನೇ ಮಾಡದಿರುವುದನ್ನು ಗಮನಿಸಿದನಂತೆ. ಆತ ಈ ವಿಷಯವನ್ನು ಯೆಮೆನ್ ನ ಸೂಫಿ ಮಠದ ಸಾಧುಗಳಿಗೆ ತಿಳಿಸಿದನಂತೆ. ಆಗ ಆ ಸೂಫಿ ಸಾಧುಗಳು ಆ ಹಣ್ಣನ್ನು ತಂದು ಕುದಿಸಿ ಬಿಸಿ ಪೇಯ ಮಾಡಿ ಕುಡಿದಾಗ ಅವರೂ ಅದರಿಂದ ಉತ್ತೇಜಿತರಾದರಂತೆ. ಅಲ್ಲಿಂದ ಈ ಪೇಯ ಇತರ ಭಾಗಗಳಿಗೆ ಹರಡಿಕೊಳ್ಳತೊಡಗಿತಂತೆ.

ಅದೇನೇ ಇರಲಿ, ಇಥಿಯೋಪಿಯಾದ kaffa ಎಂಬ ಪ್ರದೇಶದಿಂದ ಬಂದುದರಿಂದ ಇದು koffie ಆಗಿ ಮುಂದೆ coffee ಆಗಿರಬಹುದಾಗಿದೆ. ಮಧ್ಯಪ್ರಾಚ್ಯದ ಯೆಮೆನ್ ದಿಂದ ಹೊರಟ ಕಾಫಿಯ ಪಯಣ ಮೆಕ್ಕಾ ( ಹೆಜಾಜ್) , ಇಜಿಪ್ತ, ಟರ್ಕಿ,ಯುರೋಪ ಖಂಡದ ಮೂಲಕ ಜಗತ್ತಿನ ಇತರ ಭಾಗಗಳಿಗೆ ತಲುಪಿತು. ಮೆಕ್ಕಾ ಮೂಲಕ ಅರಬ್ ನಾಡಿನಲ್ಲಿ ವ್ಯಾಪಿಸಿಕೊಂಡ ಕಾಫಿ ಅರಬ್ಬರ ಬಹಳ ಪ್ರಿಯವಾದ ಪೇಯವಾಗಿ ಅವರ ಸಂಸ್ಕೃತಿಯಲ್ಲಿ ಬೆರೆತುಕೊಂಡಿತು. ಅರೇಬಿಯನ್ ಕಾಫಿ ಸಕ್ಕರೆ ರಹಿತವಾದದ್ದು. ಆದರೆ ಕೇಸರಿ, ಏಲಕ್ಕಿ, ಲವಂಗ , ದಾಲಚಿನ್ನಿಯಂತಹ ವಸ್ತುಗಳಿಂದ ಕೂಡಿದ ಸುವಾಸನಾಯುಕ್ತ ಕಾಫಿ ಹಲವು ಶತಮಾನಗಳಿಂದ ಅವರ ಜನಜೀವನದಲ್ಲಿ ಬೆರೆತುಕೊಂಡಿದೆ. ಅದರ ಉತ್ತೇಜನಾತ್ಮಕ ಗುಣಕ್ಕಾಗಿ ಇಸ್ಲಾಂ ಧರ್ಮಗುರುಗಳು ಅದನ್ನು ನಿಷೇಧಿಸಿದ್ದೂ ಉಂಟು. ಆದರೆ 1524 ರಲ್ಲಿ ಆ ನಿಷೇಧವನ್ನು ಆಗಿನ ಅರಸ ತೆಗೆದುಹಾಕಿದ. ಇಜಿಪ್ತನಲ್ಲೂ ಹಾಗೇ ಆಯಿತು.

ಅಂದರೆ ಕಾಫಿಯ ಶೋಧ 15 ನೇ ಶತಮಾನದ ವೇಳೆಗೆ ಆಗಿ ಇಂದು ಅದು ವಿಶ್ವವ್ಯಾಪಿಯಾಗಿದೆ. ಹಿಂದಿನ ಅರಬರು ತಮ್ಮ ಮನೆಗೆ ಅತಿಥಿಗಳು ಬಂದಾಗ ಆತಿಥ್ಯಕ್ಕೆ ಈ ಕಾಫಿಯನ್ನೇ ವಿಶೇಷವಾಗಿ ಬಳಸುತ್ತಿದ್ದರು. ಬಂದ ಅತಿಥಿಗಳು ಮೂರು ಕಪ್ ಕಾಫಿ ಸೇವಿಸಿ ನಾಲ್ಕನೆಯ ಕಪ್ ಸೇವಿಸುವಾಗ daymen ಅಂದರೆ ” ಯಾವಾಗಲೂ” ಎಂಬ ಶಬ್ದ ಉಚ್ಚರಿಸುತ್ತಿದ್ದರಂತೆ. ಈ ಆತಿಥ್ಯಕ್ಕೆ ಮನೆಯ ಹಿರಿಯ ಮಗನನ್ನೇ ಬಳಸಲಾಗುತ್ತಿತ್ತು. ಕಾಫಿಗೆ ಬಳಸಲಾಗುವ
Qahiya ಎಂಬ ರೋಮನ್ ಶಬ್ದದ ಅರ್ಥ ಹಸಿವು ಕಡಿಮೆ ಮಾಡುವುದು ಎಂದು. Quhawah ಎನ್ನುವುದು ಅರೇಬಿಕ್ ಶಬ್ದ. ಇದು ಕಪ್ಪು ಬಣ್ಣ ಅಥವಾ ಒಣಹುಳಿ ಎಂಬ ಅರ್ಥವನ್ನೂ ಕೊಡುತ್ತದೆ. ಟರ್ಕಿಯಲ್ಲಿದಕ್ಕೆ kahve ಎನ್ನುವುದಿದೆ. ಉತ್ತರ ಅರೇಬಿಯಾದಲ್ಲಿ ಕಾಫಿ ಗಾಢ ಕಪ್ಪು ಬಣ್ಣದ್ದಾಗಿದ್ದರೆ ನಜ್ಮ- ಹೆಜಾಜ್ ಗಳಲ್ಲಿದು ಹೊಂಬಣ್ಣ ಪಡೆದಿರುತ್ತದೆ. ಹರಾರಿ ಕಾಫಿ, ಬೆಡೋಯಿನ್ ಕಾಫಿ, ಡಚ್ ಕಾಫಿಗಳೂ ಬಹಳ ಪ್ರಸಿದ್ಧ. ಖರ್ಜೂರದೊಂದಿಗೆ ಈ ಕಾಫಿ ಅತಿಥಿಗಳಿಗೆ ಕೊಡುವುದು ರೂಢಿ. ಅರಬ್ ಜಗತ್ತಿನಲ್ಲಿ ಕಾಫಿ ಹೌಸ್ ಗಳು ಬೌದ್ಧಿಕ ಚರ್ಚೆಯ ತಾಣಗಳೂ ಆಗಿದ್ದವು. ಅವಕ್ಕೆ schools of the wise ಎಂದೂ ಹೇಳುತ್ತಿದ್ದರಂತೆ. 17 ನೇ ಶತಮಾನದ ಮಧ್ಯಭಾಗದಲ್ಲೇ ಲಂಡನ್ನಿನಲ್ಲಿ 3೦೦ ಕ್ಕೂ ಹೆಚ್ಚು ಕಾಫಿಹೌಸ್ ಗಳಿದ್ದವು.

ಡಚ್ಚರು ಮೊದಲು ಭಾರತದಲ್ಲಿ ಈ ಕಾಫಿ ಕೃಷಿಯನ್ನು ಮಾಡಲು ಪ್ರಯತ್ನಿಸಿದವರು. ಮುಖ್ಯವಾಗಿ ಇದರ ಉತ್ತೇಜಕ ಗುಣಕ್ಕಾಗಿ ಜನರು ಇದನ್ನು ಇಷ್ಟಪಡುತ್ತಾರೆ. ಅರಬ್ ಪರಂಪರೆಯಲ್ಲಿ ಕಾಫಿಗೆ ಬಹಳ ಸುಂದರವಾದ ಅಲಂಕೃತ ಪಾತ್ರೆಗಳನ್ನು ಬಳಸುತ್ತಾರೆ.

✒️ಎಲ್.ಎಸ್.ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ