
ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಯುರ್ವೇದ ಚಿಕಿತ್ಸೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಆಯುರ್ವೇದಕ್ಕೆ 5 ಸಾವಿರ ವರ್ಷಗಳಷ್ಟು ಇತಿಹಾಸವಿದ್ದು, ಆಯುರ್ವೇದ ಚಿಕಿತ್ಸೆಯನ್ನು ಇಡೀ ದೇಶವೇ ಒಪ್ಪಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಉಡುಪಿಯ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರೋಗ ನಿರ್ಣಾಯಕ ಘಟಕದ ವಿನೂತನ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಆಯುರ್ವೇದದಲ್ಲಿ ಎಸ್‌ಡಿಎಂ ಕಾಲೇಜು ಇಡೀ ದೇಶದಲ್ಲೇ ಉತ್ತಮ ಸಂಶೋಧನೆ ಮಾಡುತ್ತಿದೆ ಎಂದು ಹೇಳಿದರು.
ನಾನು ಕುಟುಂಬ ಸಮೇತ ಪ್ರತಿವರ್ಷ ಉಜಿರೆಗೆ ಆಯುರ್ವೇದ ಚಿಕಿತ್ಸೆಗೆ ಬರುತ್ತಿದ್ದೆ. ಈಗ ಬೆಂಗಳೂರು ಬಳಿಯಿರುವ ಇದೇ ಸಂಸ್ಥೆಯ ಕ್ಷೇಮವನಕ್ಕೆ ಹೋಗುತ್ತಿದ್ದೇವೆ. ಆಯುರ್ವೇದ ಚಿಕಿತ್ಸೆ ಮನಸ್ಸಿಗೆ ಹಿತ ನೀಡುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಖಾಸಗಿ ವಲಯದ ಕಾಲೇಜುಗಳಲ್ಲಿ ಎಸ್‌ಡಿಎಂ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇಲ್ಲಿ ಅದ್ಭುತವಾದ ಕೆಲಸ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಲೋಪತಿಗಿಂತ ಆಯುರ್ವೇದದ ಮೇಲೆ ಹೆಚ್ಚು ವಿಶ್ವಾಸ ಬಂದಿದೆ. ಈ ಕಾಲೇಜು ಇನ್ನೂ ಉನ್ನತ ಸ್ಥಾನಕ್ಕೇರಲಿ, ದೇಶಕ್ಕೇ ಹೆಸರುವಾಸಿಯಾಗಲಿ, ಸಮಾಜಕ್ಕೆ ಮಾದರಿಯಾಗಲಿ ಎಂದು ಹಾರೈಸುತ್ತೇನೆ ಎಂದು ಸಚಿವರು ಹೇಳಿದರು
ಉತ್ತರ ಕರ್ನಾಟಕ ಭಾಗದಲ್ಲಿ ಧರ್ಮಸ್ಥಳದ ಮಂಜುನಾಥನಿಗೆ ಭಕ್ತರ ಸಂಖ್ಯೆ ಜಾಸ್ತಿ. ಮಂಜುನಾಥ ಅಂದರೆ ಅಷ್ಟೊಂದು ಶ್ರದ್ದಾ ಭಕ್ತಿ, ಇಂತಹ ಪಾವನ ಕ್ಷೇತ್ರದಲ್ಲಿ ಇರುವ ನೀವೇ ಪುಣ್ಯವಂತರು ಎಂದರು.
ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಮತಾ, ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್.ಎಸ್, ಕಾಲೇಜಿನ ನಿರ್ದೇಶಕ ಪ್ರಸನ್ನ ರಾವ್, ಫಾರ್ಮಸಿ ವಿಭಾಗದ ಮುಖ್ಯಸ್ಥ ಮುರಳೀಧರ್ ಬಲ್ಲಾಳ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ದೇಶ ಅಂದಾಗ ಎಲ್ಲರೂ ಒಂದೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್-ಕಾಪು ಮಾರಿಯಮ್ಮನವರ ದೇವಸ್ಥಾನಕ್ಕೆ ಸಚಿವರ ಭೇಟಿ
ದೇಶ ಅಂತ ಬಂದಾಗ ನಾವೆಲ್ಲರೂ ಒಂದೇ, ವೈರಿ ರಾಷ್ಟ್ರ ನಮ್ಮ ಮೇಲೆ ಯುದ್ದಕ್ಕೆ ಬರುತ್ತಿದೆ. ಭಾರತಕ್ಕಿದು ಸಂಕಷ್ಟದ ಕಾಲ, ಎಲ್ಲರೂ ಒಗ್ಗಟಾಗಿ ಎದುರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾಪುವಿನ ಪುರಾಣ ಪ್ರಸಿದ್ಧ ಮಾರಿಯಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ನಮ್ಮ ಬೆಳಗಾವಿಯ ಸೊಸೆ ಸೋಫಿಯಾ ಖುರೇಷಿ, ಪಾಕಿಸ್ತಾನ ಮೇಲಿನ ಅಪರೇಷನ್ ಸಿಂಧೂರ್ ಕುರಿತು ಪ್ರತಿದಿನ ದೈನಂದಿನ ಚಟುವಟಿಕೆಗಳನ್ನು ಮಾಧ್ಯಮಗಳಿಗೆ ವಿವರಿಸುತ್ತಿದ್ದಾರೆ. ಇದು ನಿಜಕ್ಕೂ ಸಂತೋಷದ ವಿಚಾರ. ಅವರು ಕರ್ನಾಟಕದ ಹೆಮ್ಮೆಯ ಸೊಸೆ ಎಂದು ಹೇಳಿದರು.
ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆಯಲಾಗಿದೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಮತ್ತಷ್ಟು ಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲ ಮಂದಿ ಸೈನಿಕರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಸಂದೇಶಗಳನ್ನು ಹರಡುತ್ತಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಂಥ ಸಮಾಜ ಘಾತುಕ ಶಕ್ತಿಗಳು ಭಾರತದಲ್ಲಿ ಇರಬಾರದು ಎಂದು ಪ್ರತಿಕ್ರಿಯಿಸಿದರು.
ಲಿಂಗಾಯತ ಸಚಿವರಿಂದ ಒಮ್ಮತದ ತೀರ್ಮಾನ:
ಜಾತಿಗಣತಿಗೆ ಸಂಬಂಧಿಸಿದಂತೆ 7 ಜನ ಲಿಂಗಾಯತ ಸಚಿವರು ಒಮ್ಮತದ ತೀರ್ಮಾನಕ್ಕೆ ಬಂದಿದ್ದು, ಒಟ್ಟಾಗಿ ನಮ್ಮ ತೀರ್ಮಾನವನ್ನು ಒಂದು ಪತ್ರದಲ್ಲಿ ಬರೆದು ಎಲ್ಲರೂ ಸಹಿ ಹಾಕಿ ಮುಖ್ಯಮಂತ್ರಿಗಳಿಗೆ ನೀಡಲು ತೀರ್ಮಾನಿಸಿದ್ದೇವೆ ಎಂದು ಸಚಿವರು ಹೇಳಿದರು.
ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸಚಿವರಿಗೆ ಸನ್ಮಾನ:
ಸಾವಿರ ಸೀಮೆಯ ಒಡತಿ ಎಂದೇ ಪೂಜಿಸಲ್ಪಡುವ ಉಡುಪಿ ಜಿಲ್ಲೆಯ ಪುರಾಣ ಪ್ರಸಿದ್ದ ಕಾಪು ಮಾರಿಯಮ್ಮನವರ ದೇವಸ್ಥಾನಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭೇಟಿ ನೀಡಿ, ದೇವರ ದರ್ಶನ ಪಡೆದರು. ಸ್ವರ್ಣ ಗದ್ದುಗೆ ಮೇಲೆ ಅಮ್ಮ ಕುಳಿತಿರುವುದನ್ನು ನೋಡಿದರೆ ನಮ್ಮ ಸಂಸ್ಕೃತಿ ಹಾಗೂ ಭಾರತದ ನಂಬಿಕೆ ನಿಜ ಎನಿಸುತ್ತದೆ ಎಂದು ಸಚಿವರು ಹೇಳಿದರು. ಸಚಿವರನ್ನು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.
ಈ ವೇಳೆ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ನಡಿಕೆರೆ ರತ್ನಾಕರ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ದಿನೇಶ್ ಹೆಗಡೆ, ಸುನೀಲ್ ಬಂಗೇರ, ನವೀನಚಂದ್ರ, ದೀಪಕ್ ಕೋಟ್ಯಾನ ಕಮಲ
ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಪುರುಷಗಿಂತ ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಜಾಸ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್: ಡಾ.ರಾಜೇಂದ್ರ ಕುಮಾರ್ ಅವರ ಸಾಧನೆ ನಿಜಕ್ಕೂ ಪ್ರಶಂಸಾರ್ಹ
ಮಂಗಳೂರು: ನಮ್ಮ ಸಮಾಜದಲ್ಲಿ ಪುರುಷಗಿಂತ ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಜಾಸ್ತಿ, ನೂರು ರೂಪಾಯಿ ಕೊಟ್ಟರೂ ಅಷ್ಟೆ, ಒಂದು ಲಕ್ಷ ರೂಪಾಯಿ ಕೊಟ್ಟರೂ ಅಷ್ಟೇ, ಸಂಸಾರವನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸಿಕೊಂಡು ಹೋಗುವ ಜಾಣ್ಮೆ ಮಹಿಳೆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮಂಗಳೂರಿನ ಬಂಗ್ರ ಕೂಳೂರು ಗೋಲ್ಡನ್ ಫಿಂಚ್ ಸಿಟಿಯಲ್ಲಿ ಶನಿವಾರ ನಡೆದ ನವೋದಯ ಸ್ವ-ಸಹಾಯ ಗುಂಪುಗಳ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮಹಿಳೆಯರನ್ನು ಎಲ್ಲಿ ಗೌರವಿಸುತ್ತಾರೆ, ಪೂಜಿಸುತ್ತಾರೆ, ಆ ಜಾಗ ಅಭಿವೃದ್ಧಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.
ನವೋದಯ ಗ್ರಾಮೀಣ ವಿಕಾಸ ಸಂಸ್ಥೆ ಇವತ್ತು ಹೆಮ್ಮರವಾಗಿ ಬೆಳೆದಿದೆ. 8 ಜಿಲ್ಲೆಗಳಿಗೆ ಕಾರ್ಯಚಟುವಟಿಕೆ ವಿಸ್ತರಣೆ ಮಾಡಿಕೊಂಡು ಈಗ ರಾಜ್ಯ ಮಟ್ಟದ ಸಂಸ್ಥೆಯಾಗಿ ಬೆಳೆಸುತ್ತಿರುವುದು ನಿಜಕ್ಕೂ ಪ್ರಶಂಸಾರ್ಹವಾಗಿದೆ. ರಾಜೇಂದ್ರ ಕುಮಾರ್ ಅವರು ಈ ಎರಡೂ ಕ್ಷೇತ್ರಗಳನ್ನು ಅತ್ಯಂತ ಜಾಣ್ಮೆಯಿಂದ ಸುಮಾರು 3 ದಶಕಗಳಿಂದ ಸ್ವಲ್ಪವೂ ವಿಶ್ವಾಸ ಕಳೆದುಕೊಳ್ಳದೆ ಮುನ್ನಡೆಸುವ ಮೂಲಕ ಸಹಕಾರಿ ಕ್ಷೇತ್ರದ ಭೀಷ್ಮ ಎನಿಸಿಕೊಂಡಿದ್ದಾರೆ ಎಂದು ಸಚಿವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ಇಡೀ ರಾಜ್ಯದಲ್ಲಿ ಅಪೆಕ್ಸ್ ಬ್ಯಾಂಕ್ ಬಿಟ್ಟರೆ, ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಪೈಕಿ ಅತಿದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿರುವ ಬ್ಯಾಂಕ್ ಅಂದರೆ ಅದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್. ಇದರ ಹಿಂದಿನ ರೂವಾರಿಯೇ ರಾಜೇಂದ್ರ ಕುಮಾರ್ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘಿಸಿದರು.
ಬ್ಯಾಂಕ್ ವ್ಯವಹಾರಗಳು, ಪಾರದರ್ಶಕವಾಗಿರಬೇಕು. ಬ್ಯಾಂಕ್ ವ್ಯವಹಾರದಲ್ಲೂ ರಾಜೇಂದ್ರ ಕುಮಾರ್ ಅವರು ತೊಡಗಿಸಿಕೊಂಡು, ಇದರ ಜೊತೆಗೆ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಉದ್ದೇಶದಿಂದ 8 ಜಿಲ್ಲೆಗಳಲ್ಲಿ ನವೋದಯ ಸ್ವ-ಸಹಾಯ ಗುಂಪುಗಳನ್ನು ರಚಿಸುವ ಮೂಲಕ ನೆರವಾಗುತ್ತಿದ್ದಾರೆ ಎಂದು ಹೇಳಿದರು.
ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ. ಇದಕ್ಕಾಗಿಯೇ ಗೃಹಲಕ್ಷ್ಮೀ ಯೋಜನೆಗೆ ವಾರ್ಷಿಕ 28 ಸಾವಿರ ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತಿದೆ. ಮಹಿಳೆ ಸದೃಢವಾಗಿ ಬೆಳೆಯಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
* *ರಾಜೇಂದ್ರ ಕುಮಾರ್ ಅವರ ಸಾಧನೆಗೆ ಪತ್ನಿಯೇ ಸ್ಫೂರ್ತಿ*
ಪ್ರತಿಯೊಂದು ಮನೆಯನ್ನೂ ಬೆಳೆಗುವವಳು ಹೆಣ್ಣುಮಗಳು, ರಾಜೇಂದ್ರ ಕುಮಾರ್ ಅವರು ಇಷ್ಟು ದೊಡ್ಡ ಸಾಧನೆ ಮಾಡಲು ಮೂಲ ಪ್ರೇರಣೆಯೇ ಅವರ ಧರ್ಮಪತ್ನಿ. ತಮ್ಮ ಮೂರು ಮಕ್ಕಳ ಜೊತೆಗೆ ಮನೆಯ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಸಿದ ಫಲವಾಗಿ, ರಾಜೇಂದ್ರ ಕುಮಾರ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್, ಸಭಾಧ್ಯಕ್ಷ ಯು.ಟಿ.ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಆರ್.ಬಿ.ತಿಮ್ಮಾಪುರ, ಕೆ.ಎನ್.ರಾಜಣ್ಣ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಕಾರ್ಯಕ್ರಮದ ರೂವಾರಿಗಳಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ನವೋದಯ ಸ್ವ-ಸ್ವಹಾಯ ಗುಂಪುಗಳ ಸದಸ್ಯರು ಹಾಗೂ ಬೃಹತ್ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.