
ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಯಕ್ಷಗಾನ ಮಂಡಳಿಗೆ ಪ್ರದರ್ಶನಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ದೇವಿಯ ಅಪ್ಪಣೆಯಂತೆ 2025-260 ಸಾಲಿನ ತಿರುಗಾಟದಲ್ಲಿ 7ನೇ ಮೇಳವನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕಟೀಲು ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣರು ಹೇಳಿದ್ದಾರೆ.
ಕಟೀಲಿನ 7ನೇ ಮೇಳದ ಆರಂಭದ ಬಗ್ಗೆ ಕಟೀಲು ದೇವಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರವಿವಾರ ಹೂಪ್ರಶ್ನೆಯ ಮೂಲಕ ದೇವರ ಒಪ್ಪಿಗೆ ಸಿಕ್ಕಿದ್ದು ಮುಂದಿನ ನ. 16ರಂದು ನೂತನ ಮೇಳದೊಂದಿಗೆ ತಿರುಗಾಟ ನಡೆಯಲಿದೆ. ಬೆಂಗಳೂರು, ಮೈಸೂರು ಪ್ರದೇಶದಲ್ಲಿ ಆಟ ಆಡಿಸಲು ಬೇಡಿಕೆ ಇದೆ. 5 ಕ್ಕೂ ಹೆಚ್ಚು ಬಯಲಾಟ ನಿರ್ದಿಷ್ಟ ಅವಧಿಯಲ್ಲಿ ಬುಕ್ಕಿಂಗ್ ಇದ್ದರೆ ಅಲ್ಲಿಯೂ ಆಟ ಆಡಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
7ನೇ ಮೇಳ ಆರಂಭಿಸುವ ಬಗ್ಗೆ ದುರ್ಗೆಯ ಸನ್ನಿಧಿಯಲ್ಲಿ ಭಾನುವಾರ ಆಡಳಿತ ಮಂಡಳಿ, ಅರ್ಚಕ ವರ್ಗ, ಮೇಳದ ಆಡಳಿತ ಮತ್ತು ಪ್ರಮುಖರ ಉಪಸ್ಥಿತಿಯಲ್ಲಿ ಮಹಾಪೂಜೆ ಬಳಿಕ ವಿಶೇಷ ಪ್ರಾರ್ಥನೆ ಮೂಲಕ ಅರಿಕೆ ಮಾಡಿದ್ದು, ದೇವಿಯು ಒಪ್ಪಿಗೆ ನೀಡಿದ್ದರಿಂದ 7ನೇ ಮೇಳವನ್ನು ಆರಂಭಿಸುವ ನಿರ್ಧಾರ ಮಾಡಲಾಗಿದೆ ಎಂದರು.
ದೇವಳದಲ್ಲಿ 1ನೇ ಮೇಳ ಆರಂಭದ ಬಗ್ಗೆ ನಿಖರ ಮಾಹಿತಿಯಿಲ್ಲ, 2ನೇ ಮೇಳವು 1965ರಲ್ಲಿ, 3ನೇ ಮೇಳ 82-83ರಲ್ಲಿ, 4ನೇ ಮೇಳ 93-94ರಲ್ಲಿ, 5ನೇ ಮೇಳ 2010-11, 6 ನೇ 2013-140 ಆರಂಭಗೊಂಡಿದ್ದು, ಇದೀಗ 7ನೇ ಮೇಳವು ನ.16ರಂದು ಕಟೀಲು ಯಕ್ಷಗಾನ ಮೇಳದ 2025-26ರ ತಿರುಗಾಟದ ಸಂದರ್ಭದಲ್ಲಿ ಆರಂಭಗೊಳ್ಳಲಿದೆ ಎಂದರು.
7ನೇ ಮೇಳಕ್ಕೆ ಬೇಕಾದ ಚಿನ್ನದ ಕಿರೀಟ ಈಗಾಗಲೇ ಇದೆ. ತೊಟ್ಟಿಲು ಸೇರಿದಂತೆ ಮೇಳದ ಪರಿಕರಗಳಿಗೆ ಈಗಾಗಲೇ ಭಕ್ತರು ಆಸಕ್ತಿ ವಹಿಸಿದ್ದು, ದೇವಳಕ್ಕೆ ಯಾವುದೇ ಖರ್ಚು ಬಾರದ ‘ರೀತಿಯಲ್ಲಿ 7ನೇ ಮೇಳ ಆರಂಭಗೊಳ್ಳಲಿದೆ. 7ನೇ ಮೇಳಕ್ಕೆ ಕಲಾವಿದರ ಕೊರತೆಯಿಲ್ಲ. ದೇವಳದ 6 ಮೇಳದಲ್ಲಿ ಪ್ರಬುದ್ಧ ಕಲಾವಿದರಿದ್ದು ಜೊತೆಗೆ ಉತ್ತಮ ಅನುಭವವನ್ನು ಹೊಂದಿರುವ ಹವ್ಯಾಸಿ ಕಲಾವಿದರಿದ್ದಾರೆ. 7ನೇ ಮೇಳಕ್ಕೆ ಬೇಕಾದ ಬಸ್ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು ತಿಳಿಸಿದರು.
ವೀಳ್ಯದ ಹೆಚ್ಚಳ, ಕಲಾವಿದರ ಸಂಭಾವನೆ ಏರಿಕೆ ಮತ್ತಿತರ ವಿಷಯಗಳ ಬಗ್ಗೆ ನ.16ರಂದು ನಿರ್ಧರಿಸಲಾಗುವುದು. ಪ್ರತಿವರ್ಷ ಸುಮಾರು 180 ದಿನಗಳಲ್ಲಿ 1080 ಪ್ರದರ್ಶನ ಸಿಗಲಿದ್ದು, ಅದರಲ್ಲಿ 450
ಶಾಶ್ವತ ಪ್ರದರ್ಶನವಿದೆ. 2013-14ರಲ್ಲಿ ತತ್ಕಾಲ್ ವ್ಯವಸ್ಥೆ ಆರಂಭಿಸಿದ್ದು, ಸುಮಾರು 240 ಪ್ರದರ್ಶನ ತತ್ಕಾಲ್ ಮೂಲಕ ನೀಡಲಾಗುತ್ತದೆ. ಈ ವರ್ಷ ಸುಮಾರು 844 ಹೆಚ್ಚುವರಿ ಬುಕ್ಕಿಂಗ್ ಆಗಿದ್ದು, ಈಗಾಗಲೇ ಸುಮಾರು 7000 ಪ್ರದರ್ಶನೆ ಬುಕ್ಕಿಂಗ್ ಆಗಿದೆ ಎಮದು ಹೇಳಿದರು. 7ನೇ ಮೇಳ ಆರಂಭದಿಂದ ಯಕ್ಷಗಾನ ಪ್ರದರ್ಶನದ ಭಕ್ತರ ಒತ್ತಡವನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ ನಿಭಾಯಿಸುವ ಪ್ರಯತ್ನ ಮಾಡಬಹುದು. ಕಾನೂನಿನ ತೊಡಕಿನಿಂದ ಈಗಿರುವ ರೀತಿಯಲ್ಲಿ ಕಾಲಮಿತಿಯಲ್ಲಿ ಯಕ್ಷಗಾನ ಪ್ರದರ್ಶನ ಮುಂದುವರಿಯಲಿದೆ ಎಂದು ತಿಳಿಸಿದರು.
ಕಟೀಲು ಮೇಳಗಳ ತಿರುಗಾಟ ಸಂಪನ್ನ :
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಪ್ರಸ್ತುತ ಸಾಲಿನ ಕೊನೆಯ ಪ್ರದರ್ಶನ ಭಾನುವಾರ ಮಳೆಯ ನಡುವೆ ದೇವಳ ರಥಬೀದಿಯಲ್ಲಿ ನಡೆಯಿತು. ಸಂಜೆ ಚೌಕಿ ಪೂಜೆಯಾಗಿ ರಾತ್ರಿ ಪಂಚಕಲ್ಯಾಣ; ಹೈಮವತೀ-ಶ್ರೀಮತಿ-ವಿ ದ್ಯುನ್ಮತಿ-ಜಾಂಬವತಿ-ಪದ್ಮಾವತಿ ಯಕ್ಷಗಾನ ಪ್ರದರ್ಶನ ನಡೆದು, ಸೋಮವಾರ ಬೆಳಗ್ಗೆ ಗೆಜ್ಜೆ ಬಿಚ್ಚುವ ಮೂಲಕ ಈ ಸಾಲಿನ ತಿರುಗಾಟ ಸಂಪನ್ನಗೊಂಡಿತು.