
ಕುಂದಾಪುರ : ಯಕ್ಷಗಾನದ ತೆಂಕು, ಬಡಗುತಿಟ್ಟುಗಳ ಪ್ರಸಿದ್ಧ ಸ್ತ್ರೀವೇಷಧಾರಿ ಕೋಡಿ ಕೃಷ್ಣ (ಕುಷ್ಟ) ಗಾಣಿಗ (78) ಅವರು ಕೋಡಿಯಲ್ಲಿರುವ ಸ್ವಗೃಹದಲ್ಲಿ ಗುರುವಾರ ನಿಧನರಾದರು.
ಅವರಿಗೆ ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಕೋಡಿ ಕುಷ್ಟ ಗಾಣಿಗ ಅವರು ಅಮೃತೇಶ್ವರೀ, ಮಾರಣಕಟ್ಟೆ, ಕಲಾವಿಹಾರ, ರಾಜರಾಜೇಶ್ವರಿ ಮೇಳ ಹಾಗೂ ಕಟೀಲು ಮೇಳದಲ್ಲಿ ಮೂರುವರೆ ದಶಕಗಳ ಕಾಲ ತಿರುಗಾಟವನ್ನು ಮಾಡಿದ್ದರು.
ಹೆರಂಜಾಲು ವೆಂಕಟರಮಣ ಗಾಣಿಗರಿಂದ ಬಡಗುತಿಟ್ಟಿನ ಹೆಜ್ಜೆಗಾರಿಕೆಯನ್ನು ಹಾಗೂ ಪಡ್ರೆ ಚಂದು ಅವರಿಂದ ತೆಂಕುತಿಟ್ಟಿನ ನಾಟ್ಯಭ್ಯಾಸವನ್ನು ಕಲಿತಿದ್ದ ಅವರು, ದೇವಿ, ನಂದಿನಿ, ಸುಭದ್ರೆ, ಮಂಡೋದರಿ, ದೌಪದಿ, ಕಯಾದು, ಸೀತೆ, ಅಂಬೆ, ದಮಯಂತಿ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದರು.
ಅವರ ಅಂತ್ಯಸಂಸ್ಕಾರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಕೋಡಿಯಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದೇವಿ ಪಾತ್ರಕ್ಕೆ ಹೆಸರುವಾಸಿ :
ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ ಪಾತ್ರದ ಮೂಲಕ ಜನ ಮನ್ನಣೆ ಪಡೆದ ಕುಷ್ಟ ಗಾಣಿಗರು ನಿರ್ವಹಿಸಿದ ಶ್ರೀ ದೇವಿ ಮಹಾತ್ಮ ಪ್ರಸಂಗದ ದೇವಿಯ ಪಾತ್ರವನ್ನು ಇಂದಿಗೂ ಯಕ್ಷಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ.
ಕೋಡಿ ಕೃಷ್ಣ (ಕುಷ್ಟ) ಗಾಣಿಗರು 1947ರ ಸೆಪ್ಟೆಂಬರ್ 6ರಂದು ಲಕ್ಷ್ಮಣ ಗಾಣಿಗ – ಮಂಜಿ ದಂಪತಿಯ ಪುತ್ರರಾಗಿ ಜನಿಸಿದರು. ಬಡಗು ತಿಟ್ಟಿನ ಸುಪ್ರಸಿದ್ಧ ಕಲಾವಿದ ಹೇರಂಜಾಲು ವೆಂಕಟರಮಣ ಗಾಣಿಗರಲ್ಲಿ ಬಡಗುತಿಟ್ಟು ಯಕ್ಷಗಾನ ನಾಟ್ಯಾಭ್ಯಾಸವನ್ನು ಮಾಡಿದ ಅವರು ತೆಂಕು ತಿಟ್ಟಿನ ಮೇಳಕ್ಕೆ ಸೇರುವ ಮುನ್ನ ಬಡಗಿನ ಅಮೃತೇಶ್ವರಿ ಮೇಳದಲ್ಲಿ 3 ವರ್ಷ, ಮಾರಣಕಟ್ಟೆ ಮೇಳಗಳಲ್ಲಿ 2 ವರ್ಷಗಳ ತಿರುಗಾಟವನ್ನು ನಡೆಸಿದ್ದರು.
1968ರಲ್ಲಿ ಕಲ್ಲಾಡಿ ವಿಠಲ ಶೆಟ್ಟರ ನೇತೃತ್ವದಲ್ಲಿ ನಡೆಯುತ್ತಿದ್ದ ಕಲಾವಿಹಾರ ಮೇಳವನ್ನು ಸೇರಿದರು. ಕಲಾವಿಹಾರ ಮೇಳದಲ್ಲಿ 1 ವರ್ಷ, ರಾಜರಾಜೇಶ್ವರಿ ಮೇಳದಲ್ಲಿ 1 ವರ್ಷದ ತಿರುಗಾಟವನ್ನು ನಡೆಸಿದರು. ತೆಂಕುತಿಟ್ಟು ಯಕ್ಷಗಾನ ನಾಟ್ಯಾಭ್ಯಾಸವನ್ನು ಪಡ್ರೆ ಚಂದು ಅವರಿಂದ ಅಭ್ಯಸಿಸಿ, 1970 ರಲ್ಲಿ ಕಟೀಲು ಮೇಳ ಸೇರಿದರು.
ಕಟೀಲು ಮೇಳದಲ್ಲಿ ನಿರಂತರ 21 ವರ್ಷಗಳ ಕಲಾಸೇವೆಯನ್ನು ಮಾಡಿದರು.ಸ್ತ್ರೀ ಪಾತ್ರಗಳಲ್ಲಿ ಅದರಲ್ಲಿಯೂ ಶ್ರೀ ದೇವೀ ಪಾತ್ರದಲ್ಲಿ ಖ್ಯಾತಿ ಗಳಿಸಿದ ಅವರು, ಆ ಪಾತ್ರಕ್ಕೆ ಹೊಸ ಚಿತ್ರಣ ನೀಡಿದ್ದರು. ದೇವಿಯೆಂದರೆ ಅದು ಕುಷ್ಟರ ದೇವಿ ಎನ್ನುವ ಜನಜನಿತವಾದ ಮಾತಿನ ಸೃಷ್ಟಿಕರ್ತರಾದರು. “ಶ್ರೀ ದೇವಿ ಮಹಾತ್ಮ'” ಯಲ್ಲಿ ಶ್ರೀದೇವಿ ಪಾತ್ರ ಅತ್ಯಂತ ಸುಪ್ರಸಿದ್ಧ. ಅಂತೆಯೇ “ಕಟೀಲು ಕ್ಷೇತ್ರಮಹಾತ್ಮ” ಯಲ್ಲಿ ನಂದಿನಿ ಪಾತ್ರಕ್ಕೆ ವಿನೂತನ ಚಿತ್ರಣ ನೀಡಿದವರು ಕುಷ್ಟ ಗಾಣಿಗರು. ಪೆರುವಾಯಿ ನಾರಾಯಣ ಶೆಟ್ಟಿಯವರ ಜಾಬಾಲಿ ಮತ್ತು ಕುಷ್ಟ ಗಾಣಿಗರ ನಂದಿನಿ ಅಪಾರ ಪ್ರಸಿದ್ಧಿ ಪಡೆದಿತ್ತು. ದೇವಿ, ನಂದಿನಿ, ಸುಭದ್ರೆ, ಮಂಡೋದರಿ, ದೌಪದಿ, ಕಯಾದು, ಸೀತೆ, ಅಂಬೆ, ದಮಯಂತಿ, ಮಾಯಾಪೂತನಿ, ಮಾಯಾಶೂರ್ಪನಖಿ, ಚಂದ್ರಮತಿ ಹೀಗೆ ಸ್ತ್ರೀಪಾತ್ರದ ನವರಸಗಳಲ್ಲಿಯೂ ನಿಸ್ಸಿಮರು. ಪುರುಷ ವೇಷಗಳಾದ ಪರಶುರಾಮ, ವಿಷ್ಣು, ಕೃಷ್ಣ ಪಾತ್ರಗಳನ್ನು ಮಾಡುತ್ತಿದ್ದರು. ಸುಮಾರು ಎರಡುವರೆ ದಶಕಗಳ ತಿರುಗಾಟದ ಬಳಿಕ ಅವರು ಮೇಳಕ್ಕೆ ತಿಲಾಂಜಲಿ ನೀಡಿ, ತಂದೆಯವರ ತೆಂಗಿನಕಾಯಿ ವ್ಯಾಪಾರವನ್ನು ಮುನ್ನಡೆಸಿಕೊಂಡು ಹೋದರು.
1991ರಲ್ಲಿ ಯಕ್ಷರಂಗದಿಂದ ನಿವೃತ್ತರಾದ ಕುಷ್ಟ ಗಾಣಿಗರು ಮತ್ತೆ ಯಕ್ಷರಂಗದಲ್ಲಿ ಬಣ್ಣವನ್ನು ಹಚ್ಚಲಿಲ್ಲ.
ದೇವಿ ಪಾತ್ರ :
ಧೀರ, ಗಂಭೀರವಾದ ಶ್ರೀದೇವಿ ಪಾತ್ರ ಪ್ರಸ್ತುತಿ ಅವರದು. ನೋಡಿದಾಕ್ಷಣ ಎದ್ದು ನಿಂತು ಭಕ್ತಿಪರವಶತೆಯಿಂದ ಕೈಮುಗಿಯುವಂಥ ಪಾತ್ರವಾಗಿತ್ತದು. ಅತಿಯೆನಿಸದ ನಾಟ್ಯ ಗಂಭೀರ ಭಾವಾಭಿವ್ಯಕ್ತಿ ಎಷ್ಟು ಬೇಕೋ ಅಷ್ಟೇ ಗಂಭೀರ ಮಾತು, ಖಚಿತ ನಿಲುವು, ಪಾತ್ರೋಚಿತವಾಗಿ ಬದಲಾಗುವ ಬಣ್ಣಗಾರಿಕೆ, ಕಣ್ಣಿನ ನೋಟ… ಇವೆಲ್ಲವೂ ವಿಶಿಷ್ಟ ಎಂದು ಅವರ ಪಾತ್ರಗಳನ್ನು ನೋಡಿದವರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಕೋಪಾವೇಶದ ಸಂದರ್ಭದಲ್ಲೂ ಚೀರಾಟವಿಲ್ಲದ, ಅತಿಯಾದ ಆವೇಶವಿಲ್ಲದ ಸಂತುಲಿತ ನಾಟ್ಯ ಅವರ ವಿಶೇಷತೆ. ಇದು ಮಾದರಿ ಕೂಡ.
ಕುಷ್ಟ ಗಾಣಿಗರ ಶ್ರೀದೇವಿ ಮತ್ತು ಬಣ್ಣದ ಕುಟ್ಯಪ್ಪು ಅವರ ಮಹಿಷಾಸುರ ಅಂದಿನ ಕಾಲದಲ್ಲಿ ಪ್ರಸಿದ್ಧವಾಗಿತ್ತು. ದೇವಿ ಕೌಶಿಕೆಯಾಗುವ ಬಳಿಕದ ರಾಕ್ಷಸರನ್ನೆಲ್ಲ (ಧೂಮ್ರಾಕ್ಷ, ಚಂಡಮುಂಡ, ರಕ್ತಬೀಜ, ನಿಶುಂಭ, ಶುಂಭ) ವಧಿಸಿದ ಬಳಿಕ ಅವರು ಮುಖದ ಕೆಂಬಣ್ಣವನ್ನು ಕೊಂಚ ಕೊಂಚವೇ ಗಾಢವಾಗಿಸುತ್ತಿದ್ದರು. ಕೊನೆಯಲ್ಲಿ ಶಾಂತಳಾಗು ತಾಯೇ ಎಂದು ದೇವೇಂದ್ರ
ಭಿನ್ನವಿಸಿಕೊಂಡಾಗ, ನಿಧಾನವಾಗಿ ಶಾಂತ ಮುಖಭಾವವನ್ನು ತೋರ್ಪಡಿಸುವುದು ಅವರ ವೈಶಿಷ್ಟವಾಗಿತ್ತು.ಕಟೀಲು ಮೇಳದ ಹೆಸರು ಬಂದಾಗ ಮತ್ತು ದೇವಿಮಹಾತ್ಮ ಪ್ರಸಂಗದ ಹೆಸರು ಕೇಳಿದಾಗ, ಕೃಷ್ಣ ಗಾಣಿಗರ ದೇವಿ ಪಾತ್ರವೇ ನೆನಪಾಗುವಷ್ಟರ ಮಟ್ಟಿಗೆ ಅವರು ಪಾತ್ರಚಿತ್ರಣ ನೀಡಿದ್ದರು ಮತ್ತು ಅದು ಅನುಕರಣೀಯ ಕೂಡ.