ಕುಂದಾಪುರ: ಕಳೆದ ಬಾರಿ ಕುಂದಾಪುರ ವಿಧಾನಸಭಾ ಕ್ಷೇತ್ರದ 22 ಶಾಲೆಗಳಲ್ಲಿ ಯಕ್ಷ ಶಿಕ್ಷಣ ನೀಡಿದ್ದು, ಈ ಬಾರಿಯೂ ಅಷ್ಟೇ ಶಾಲೆಗಳಿಂದ ಬೇಡಿಕೆ ಬಂದಿದೆ ಎಂದು ಎಂದು ಶಾಸಕ ಎ. ಕಿರಣ್‌ ಕುಮಾರ್ ಕೊಡ್ಗಿ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರಗಳ ಪ್ರೌಢಶಾಲಾ ಮುಖ್ಯಶಿಕ್ಷಕರು ಮತ್ತು ಎಸ್‌ಡಿಎಂಸಿ ಸಭೆಯಲ್ಲಿ ಅವರು ಮಾತನಾಡಿದರು.

2 ವರ್ಷಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣ ಕಲಿಸುತ್ತಿದ್ದು, ಅವರಿಂದ ಯಕ್ಷಗಾನ ಪ್ರದರ್ಶನಗಳು ನಡೆದಿವೆ. ಯಾರಿಗೂ ಈ ಬಗ್ಗೆ ಒತ್ತಡ ಇಲ್ಲ. ಆಸಕ್ತಿ ಇದ್ದವರು ಮಾತ್ರ ಸೇರಿಕೊಳ್ಳಲಿ. ಮುಖ್ಯಶಿಕ್ಷಕರ ಪಾಲ್ಗೊಳ್ಳುವಿಕೆ ಇಲ್ಲದೆ ಈ ಅಭಿಯಾನ ಯಶಸ್ವಿಯಾಗದು ಎಂದರು.

ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಬೈಂದೂರು ತಾಲ್ಲೂಕಿನಲ್ಲಿ ಕಳೆದ ಬಾರಿ 12 ಶಾಲೆಗಳಲ್ಲಿ ಯಕ್ಷ ಶಿಕ್ಷಣ ನೀಡಿದ್ದು, ಈ ಪೈಕಿ 1 ಶಾಲೆ ಹೊರತಾಗಿಸಿ ಹೆಚ್ಚುವರಿ 7 ಶಾಲೆಗಳಿಂದ ಬೇಡಿಕೆ ಇದೆ. ಕಲಾರಂಗದ ಮೂಲಕ ನಡೆಯುವ ಸಂಸ್ಕಾರದ ಕಲಿಕೆಗೆ ಸಹಭಾಗಿಗಳಾಗಲು ಆಸಕ್ತ ಮನಸ್ಸುಗಳಿಗೆ ಇದೊಂದು ಉತ್ತಮ ಅವಕಾಶ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ, ವಲಯ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಬೈಂದೂರು ವಲಯ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಬೈಂದೂರು ಶಿಕ್ಷಣಾಧಿಕಾರಿ ಶಬನಾ ಅಂಜುಂ, ಕಲಾರಂಗದ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಯಕ್ಷ ಶಿಕ್ಷಣ ಟ್ರಸ್ಟ್ ಖಜಾಂಚಿ ಗಣೇಶ್ ಬ್ರಹ್ಮಾವರ ಭಾಗವಹಿಸಿದ್ದರು. ಕೋಟೇಶ್ವರ ಕೆಪಿಎಸ್ ಪ್ರಾಂಶುಪಾಲ ಚಂದ್ರಶೇಖರ ಶೆಟ್ಟಿ ನಿರ್ವಹಿಸಿದರು.

ಯಕ್ಷಶಿಕ್ಷಣಕ್ಕೆ ₹1 ಕೋಟಿ ವ್ಯಯ

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ ಈವರೆಗೆ ಜಿಲ್ಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಯಕ್ಷಗಾನ ಶಿಕ್ಷಣಕ್ಕೆ ಯಕ್ಷ ಶಿಕ್ಷಣ ಟ್ರಸ್ಟ್ ದಾನಿಗಳ ಮೂಲಕ ಅಂದಾಜು ₹1 ಕೋಟಿ ವ್ಯಯಿಸಿದೆ. 2805 ಮಕ್ಕಳು ಯಕ್ಷಗಾನ ಕಲಿತು ಪ್ರದರ್ಶನ ನೀಡಿದ್ದು 91 ಪ್ರದರ್ಶನ ನೀಡಲಾಗಿದೆ.

ಇದರಲ್ಲಿ 400 ಮಕ್ಕಳು ಹೊರ ಜಿಲ್ಲೆಯವವರು. ಶಾಸಕ ಕಿರಣ್‌ ಕುಮಾರ್ ಕೊಡ್ಗಿ ಅವರು ವೈಯಕ್ತಿಕವಾಗಿ ₹10 ಲಕ್ಷ ನೀಡಿದ್ದು ಸಾಲಿಗ್ರಾಮ ಕುಂದಾಪುರದಲ್ಲಿ ತಲಾ 1 ವಾರದ ಪ್ರದರ್ಶನ ಉಚಿತವಾಗಿ ನಡೆಯುವಂತೆ ಮಾಡಿದ್ದಾರೆ ಎಂದು ತಿಳಿಸಿದರು.

ಯಕ್ಷಶಿಕ್ಷಣ ಸರ್ಕಾರಿ ಕಾರ್ಯಕ್ರಮ ಅಲ್ಲ ಇದರಲ್ಲಿ ಪಾಲ್ಗೊಳ್ಳುವಿಕೆ ಕಡ್ಡಾಯವಲ್ಲ. ಮಕ್ಕಳ ಮನೋದೈಹಿಕ ವಿಕಸನಕ್ಕೆ ಪೂರಕ ಸಂಸ್ಕೃತಿ ಕಲಿಕೆಗೆ ಅವಕಾಶ ನೀಡಿ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಲಾಗುತ್ತದೆ. ಡಿಸೆಂಬರ್ ಒಳಗೆ ಅಭಿಯಾನ ಮುಗಿಸಲಾಗುವುದು. ಒಂದು ಪ್ರದರ್ಶನ ಅವರ ಶಾಲೆಗಳಲ್ಲೂ ನೀಡಿದರೆ ಮಕ್ಕಳಿಗೂ ಪ್ರೋತ್ಸಾಹ ಕೊಟ್ಟಂತಾಗುತ್ತದೆ ಎಂದರು.