ಮಂಗಳೂರು : ಯಕ್ಷರಂಗದ ಹಾಸ್ಯ ಲೋಕದಲ್ಲಿ ಮೆರೆದಿದ್ದ ಮುಖ್ಯಪ್ರಾಣ ಕಿನ್ನಿಗೋಳಿ (84) ಇನ್ನಿಲ್ಲ. ಶನಿವಾರ ಕಿನ್ನಿಗೋಳಿಯಲ್ಲಿ ನಿಧನರಾಗಿದ್ದಾರೆ.

ಬಡಗು ಹಾಗು ತೆಂಕು ಮೇಳಗಲ್ಲಿ ಅವರು ಸುಮಾರು 58 ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.

ಮುಖ್ಯಪ್ರಾಣ ಅವರು ಐದನೆಯ ತರಗತಿ ವರೆಗೆ ಕಲಿತು ತೆಂಕು ತಿಟ್ಟಿನ ಹೆಸರಾಂತ ಹಾಸ್ಯಗಾರ ಮಿಜಾರು ಅಣ್ಣಪ್ಪನವರ ಮಾರ್ಗದರ್ಶನದಲ್ಲಿ ಪಾತ್ರಾಭಿನಯ ಪಡೆದುಕೊಂಡಿದ್ದರು. ಮೊದಲು ಕಲಾವಿದರಾಗಿ ಕಟೀಲು ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮೇಳದಲ್ಲಿ ಸೇವೆ ಆರಂಭಿಸಿದರು. ನಂತರ ಇರಾ ಸೋಮನಾಥೇಶ್ವರ, ಸಾಲಿಗ್ರಾಮ, ಕದ್ರಿ ಮೇಳಗಳಲ್ಲಿ ಪಾತ್ರ ನಿರ್ವಹಣೆ ಮಾಡಿ ಅನೇಕ ಪ್ರಶಸ್ತಿ ಸಮ್ಮಾನಗಳನ್ನು ತಮ್ಮದಾಗಿಸಿಕೊಂಡಿದ್ದರು.

ಕಿನ್ನಿಗೋಳಿಯ ಗೋಳಿಜೋರದ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘದಲ್ಲಿ ಹವ್ಯಾಸಿ ವೇಷಧಾರಿಯಾಗಿ ತೊಡಗಿಕೊಂಡರು. ಯಕ್ಷಗಾನ ಕಲಾಧ್ಯಯನವನ್ನು ಗುರು ಮುಖೇನ ಕಲಿತ ಇವರಿಗೆ ಕವಿ ವಿದ್ವಾಂಸ, ಶಿಮಂತೂರು ನಾರಾಯಣ ಶೆಟ್ಟಿ ಗುರುಗಳು.

ಸೀತಾರಾಮ ಶೆಟ್ಟಿಗಾರ್‌, ಸೂರಪ್ಪ ಶೆಟ್ಟಿಗಾರ್‌ ಅವರುಗಳಿಂದ ಅರ್ಥಗಾರಿಕೆ ಹಾಗೂ ನಾಟ್ಯಾಭ್ಯಾಸ ಮಾಡಿದ ಇವರು ಬ್ರಹ್ಮಾವರ ರಾಮನಾಯಿರಿ ಅವರಿಂದ ಬಡಗು ತಿಟ್ಟಿನ ನಾಟ್ಯವನ್ನು ಅಭ್ಯಾಸ ಮಾಡಿದರು. ಕಟೀಲು, ಇರಾ ಸೋಮನಾಥೇಶ್ವರ, ಸುಬ್ರಹ್ಮಣ್ಯ, ಮಂತ್ರಾಲಯ ಮೇಳ, ಸಾಲಿಗ್ರಾಮ, ಪೆರ್ಡೂರು, ಕುಮಟ, ಕದ್ರಿ, ಮಂದಾರ್ತಿ ಮೇಳಗಳಲ್ಲಿ 56 ವರ್ಷಗಳ ತಿರುಗಾಟ ನಡೆಸಿದ್ದಾರೆ.

ಕೊನೆಯಲ್ಲಿ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಮತ್ತೆ ಸೇವೆ ಸಲ್ಲಿಸಿದ್ದರು. ರಂಗ ಸನ್ನಿವೇಶವನ್ನು ಸಾಕ್ಷಾತ್ಕರಿಸಿ ಪಾತ್ರಕ್ಕೆ ಒಪ್ಪುವ ಉತ್ತಮ ನಾಟ್ಯ ಹಾಗೂ ಅಭಿನಯವನ್ನು ಮಾಡಿ ಪಾತ್ರ ಪೋಷಣೆ ನೀಡಿ ಪೌರಾಣಿಕ ಮತ್ತು ಕಾಲ್ಪನಿಕ ಪ್ರಸಂಗಗಳೆರಡರಲ್ಲೂ ಜನಪ್ರಿಯರಾಗಿದ್ದರು.

ಸೂಪರ್ ಹಿಟ್ ಪ್ರಸಂಗ ಕಾಳಿಂಗ ನಾವಡ ವಿರಚಿತ ನಾಗಶ್ರೀ ಯ ಕೈರವ, ಕಾಂಚನಶ್ರೀಯ ಪ್ರೇತ,ಚೆಲುವೆ ಚಿತ್ರಾವತಿಯ ಅಡುಗೂಲಜ್ಜಿ, ಶೂದ್ರ ತಪಸ್ವಿನಿಯ ರಂಗಾಚಾರಿ, ಸ್ವಪ್ನ ಸಾಮ್ರಾಜ್ಯದ ಶೂರಸೇನ, ಕಲಿ ಕ್ರೋಧನದ ಮಡಿವಾಳ ಮೊದಲಾದ ವೇಷಗಳು ಮುಖ್ಯಪ್ರಾಣರಿಗೆ ಖ್ಯಾತಿ ತಂದುಕೊಟ್ಟಿದ್ದವು.

ಶ್ರೀಕೃಷ್ಣ ಲೀಲೆಯ ನಾರದ, ವಿಜಯ, ರಜಕ, ಭೀಷ್ಮ ವಿಜಯದ ವೃದ್ಧ ಬ್ರಾಹ್ಮಣ, ಭೀಷ್ಮೋತ್ಪತ್ತಿಯ ಕಂದರ, ಪಟ್ಟಾಭಿಷೇಕದ ಮಂಥರೆ, ಶೂರ್ಪನಖಾ ವಿವಾಹದ ವಿದ್ಯುಜ್ಜಿಹ, ಶನೀಶ್ವರ ಮಹಾತ್ಮೆಯ ಶನಿಪೀಡಿತ ರಾಜಾ ವಿಕ್ರಮ ಮೊದಲಾದ ಪೌರಾಣಿಕ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿ ಪ್ರಸಿದ್ಧರಾದವರಿವರು.ದಮಯಂತಿ ಪುನಃ ಸ್ವಯಂವರದ ಬಾಹುಕ, ದೇವಿ ಮಹಾತ್ಮೆಯಲ್ಲಿ ಚಾರಕ ಮತ್ತು ಸುಗ್ರೀವ ಮೊದಲಾದ ಪಾತ್ರಗಳಲ್ಲಿಯೂ ಖ್ಯಾತಿ ಗಳಿಸಿದ್ದರು.