
ಗಣಿತನಗರ: ಜೀವನದಲ್ಲಿ ಯಶಸ್ಸಿಗಿಂತ ಮೌಲ್ಯಗಳಿಗೆ ಬೆಲೆಕೊಡಬೇಕು ಹಾಗೂ ಗೌರವಿಸಬೇಕು, ನಾವು ಬುದ್ದಿವಂತರಾದರೆ ಸಾಲದು, ಪ್ರಜ್ಞಾವಂತರಾಗಬೇಕು ಎಂದು ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ನುಡಿದರು.
ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ “ಮೌಲ್ಯಸುಧಾ”-೩೭ರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತುಮಕೂರಿನ ರಾಮಕೃಷ್ಣ ನಗರದ ರಾಮಕೃಷ್ಣ – ವಿವೇಕಾನಂದ ಆಶ್ರಮದ ಅಧ್ಯಕ್ಷ ಪೂಜ್ಯ ವೀರೇಶಾನಂದ ಸರಸ್ವತಿ ಸ್ವಾಮಿಜಿಯವರು ‘ಸ್ವನಿಯಂತ್ರಣ : ಬಂಧನವೋ? ಸ್ವಾತಂತ್ರ್ಯವೋ ?’ ಎಂಬ ವಿಷಯದ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು.
ಬುದ್ಧಿವಂತಿಕೆ ವೃದ್ಧಿಯಾಗದೆ ಜ್ಞಾನವು ವೃದ್ಧಿಯಾದರೆ ದುಃಖವು ಹೆಚ್ಚಾಗುತ್ತದೆ. ಮಾನವನ ವ್ಯಕ್ತಿತ್ವ ಹಲವಾರು ವಿಚಾರಗಳ ಮಿಶ್ರಣ. ನಕಾರಾತ್ಮಕ ಚಿಂತನೆಯನ್ನು ನಿಯಂತ್ರಿಸಬೇಕು. ಸ್ವನಿಯಂತ್ರಣ ಮಾನವನ ಕರ್ತವ್ಯವಾಗಬೇಕು. ಆತ್ಮಹತ್ಯೆ ಎಂಬುದು ತಾತ್ಕಾಲಿಕ ಸಮಸ್ಯೆಗೆ ಶಾಶ್ವತ ಪರಿಹಾರವೆಂದು ಇಂದಿನ ಸಮಾಜದ ತಪ್ಪು ತಿಳಿವಳಿಕೆಯಾಗಿದೆ. ಪ್ರಯತ್ನವೇ ಪರಮೇಶ್ವರ, ಹೋರಾಡಿ ಸಾಧಿಸುವ ಛಲ ನಮ್ಮದಾಗಬೇಕು. ಅನ್ಯಾಯದ ಮಾರ್ಗದಲ್ಲಿ ಗೆಲ್ಲುವುದಕ್ಕಿಂತ ನ್ಯಾಯಮಾರ್ಗದಲ್ಲಿ ಸೋಲುವುದು ಘನತೆಯಾಗಬೇಕು ಎಂದು ಕಿವಿಮಾತನ್ನಾಡಿದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿಗಳು ಬೋಧಕ- ಬೋಧಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಉಪನ್ಯಾಸಕಿ ಮಂಜುಳಾ ಭಟ್ ಪ್ರಾರ್ಥಿಸಿ, ಉಪನ್ಯಾಸಕ ಸಂತೋಷ್ ನೆಲ್ಲಿಕಾರು ನಿರೂಪಿಸಿ ವಂದಿಸಿದರು.