
ವನಸುಮದೊಲೆನ್ನ ಜೀವನವು ವಿಕಸಿಸುವಂತೆ ಮನವನಗೊಳಿಸು ಗುರುವೇ ಹೇ ದೇವ
ಜನಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಲಿಕೆಗೆ ಬಾಯಿಬಿಡದೆ ….ಹೌದು ಡಿ ವಿಜಿ ಅವರ ಕವನದ ಸಾಲುಗಳು ಮನಸುಮದ ಹಾಗೆ ಇರುವಂತೆ ಮನವನ್ನು ಅನುಗೊಳಿಸಬೇಕು. ಪರಿಮಳವನ್ನು ಬೀರಿಯೂ ಎಳೆಯ ಮರೆಯಲ್ಲಿದ್ದು ಸಂತಸವನ್ನು ಕಾಣುವ ಮನವನ್ನು ನೀಡು ಎಂದು ದೇವರನ್ನು ಪ್ರಾರ್ಥಿಸುವ ಈ ಕವನ ಸದಾ ಎಲ್ಲರ ಬಾಯಲ್ಲಿ ಹರಿದಾಡುತ್ತದೆ. ಮನಸುಮವು ಹೊಗಳಿಕೆಯನ್ನು ಬಯಸಿದಿರಬಹುದು. ಹೊಗಳಿಕೆ ಅದಕ್ಕೆ ಬೇಡವೂ ಕೂಡ . ಡಿವಿಜಿಯವರಂತಹ ಋಷಿಪ್ರಾಯರಾದ ಕವಿ ವ್ಯಕ್ತಿತ್ವದ ವರೆಗೆ ಮಾತ್ರ ಇದು ಸಾಧ್ಯ. ವನಸುಮ ಅಥವಾ ಅಂತಹ ವ್ಯಕ್ತಿತ್ವವನ್ನು ಅಳವಡಿಸಿಕೊಂಡಿರುವ ವ್ಯಕ್ತಿಗಳು ಬಯಸದೆ ಇದ್ದರೂ ಮನಸು ವನಸುಮದ ಪರಿಮಳವನ್ನು ಆಸ್ವಾದಿಸಿ ಶಹಬ್ಬಾಸ್ ಎಂದು ಹೊಗಳಲು ಅಡ್ಡಿಯಿಲ್ಲ. ಮೇರು ವ್ಯಕ್ತಿತ್ವದವರು ಹೊಗಳಿಕೆ ಬಯಸದೇ ಇರಬಹುದು. ಆದರೆ ಸಾಮಾನ್ಯ ಮನುಷ್ಯ ಮಾಡಿದ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದಕ್ಕೆ ಸಂಭ್ರಮಿಸಿದರೆ ತಪ್ಪಿಲ್ಲ.ಅದು ಮನುಷ್ಯ ಸಹಜ ಗುಣ.
ಪ್ರಶಂಸೆ ಹಲವು ಧನಾತ್ಮಕ ಅಂಶಗಳನ್ನು ಹೊಂದಿದೆ ಕಲಿಯುವ ವಿದ್ಯಾರ್ಥಿಗೆ ನೀಡುವ ಪ್ರಶಂಸೆ ಅವನ ಕಲಿಕೆಗೆ ಪ್ರೇರಣೆ ನೀಡುತ್ತದೆ. ಕೆಲಸವನ್ನು ಅತ್ಯುತ್ತಮವಾಗಿ ಮಾಡಿ ಮುಗಿಸಿದವರಿಗೆ ಪ್ರಶಂಸೆಯು ಮುಂದಿನ ಕೆಲಸಕ್ಕೆ ಟಾನಿಕ್ ನೀಡಿದಂತಾಗುತ್ತದೆ. ನಿಜವಾದ ಪ್ರಶಂಸೆ ತಪ್ಪಲ್ಲ . ಸ್ವಾರ್ಥವನ್ನು ಇಟ್ಟುಕೊಂಡು ಮಾಡಿದ ಪ್ರಶಂಸೆ ಮಾತ್ರ ಕೆಟ್ಟದ್ದು. ಒಬ್ಬ ಕಲಾವಿದನಿಗೆ ಪ್ರೇಕ್ಷಕರ ಚಪ್ಪಾಳೆಯ ಪ್ರಶಂಸೆ, ಒಬ್ಬ ವಿದ್ಯಾರ್ಥಿಗೆ ಶಿಕ್ಷಕನ ಪ್ರೋತ್ಸಾಹವೇ ಪ್ರಶಂಸೆ. ಒಬ್ಬ ಉದ್ಯೋಗಿಗೆ ಅವನ ಸಹೋದ್ಯೋಗಿಗಳು ಅಥವಾ ಅಧಿಕಾರಿಗಳು ನೀಡುವ ಮೆಚ್ಚುಗೆ ಪ್ರಶಂಸೆ, ಒಬ್ಬ ಉದ್ಯಮಿಗೆ ಅವನ ಉದ್ಯೋಗಿಗಳು ಮತ್ತು ಸಮಾಜವು ನೀಡುವ ಹೊಗಳಿಕೆ ಪ್ರಶಂಸೆ. ಇವೆಲ್ಲವರೂ ಅವರವರ ಮುಂದಿನ ಕಾರ್ಯ ಚಟುವಟಿಕೆ ಕಾರ್ಯ ಬದ್ಧತೆ ಮತ್ತು ಶುದ್ಧತೆಗೆ ಸಹಾಯವನ್ನು ಮಾಡುತ್ತದೆ . ಸಾಧನೆಗೆ ಪ್ರೇರಣೆಯನ್ನು ನೀಡುತ್ತದೆ .
ಕೆಲವರು ಇನ್ನೊಬ್ಬರ ಬಗ್ಗೆ ಅಡ್ಡ ಪರಿಣಾಮದ ಮಾತುಗಳನ್ನು ಆಡುವುದು ಬಿಟ್ಟರೆ ಮೆಚ್ಚುಗೆಯ ಮಾತುಗಳು ಬರುವುದೇ ಇಲ್ಲ. ಋಣಾತ್ಮಕ ಅಂಶವನ್ನು ಪಟ್ಟಿ ಮಾಡಿ ಎತ್ತಿ ಆಡುತ್ತಾರೆ ಹೊರತು ಧನಾತ್ಮಕ ಅಂಶಗಳನ್ನು ಒಂದು ಶಬ್ದದಲ್ಲೂ ಹೇಳುವುದಿಲ್ಲ. ಪೂರ್ಣ ಅಲಂಕಾರ ಮಾಡಿ ಕೊನೆಗೊಂದು ದೃಷ್ಟಿ ಬೊಟ್ಟನ್ನು ,ಕಪ್ಪು ಚುಕ್ಕಿಯನ್ನು ಇಡುವುದು ಇಂಥವರಿಗಾಗಿಯೇ ಇರಬಹುದು. ಸರಿ ಇಲ್ಲದ್ದನ್ನೇ ಮಾತನಾಡುತ್ತಾರೆ ಹೊರತು ಸರಿ ಇರುವ ಬಗ್ಗೆ ಮಾತನಾಡುವುದಿಲ್ಲ ಇದರಿಂದ ಅವರು ಬೆಳೆಯುವುದಿಲ್ಲ. ಬೇರೆಯವರನ್ನು ಬೆಳೆಯಲು ಬಿಡುವುದಿಲ್ಲ. ಹಾಗಾಗಿ ಒಬ್ಬರ ಸಾಧನೆಯನ್ನು ನಿಸ್ವಾರ್ಥವಾಗಿ ನೈಜವಾಗಿ ಪ್ರಶಂಸಿದರೆರ ತಪ್ಪಿಲ್ಲ. ಆ ಪ್ರಶಂಸೆಯನ್ನು ಅವರು ಬಯಸದೇ ಇರಬಹುದು ಬಯಸುತ್ತಾರೋ ಇಲ್ಲವೋ ಎನ್ನುವುದು ಮುಖ್ಯವಲ್ಲ.ಹೊಗಳುವಿಕೆಯಲ್ಲಿ ಮುಖಸ್ತುತಿ ಇರಬಾರದು. ಹೊಗಳುವಿಕೆ ಮತ್ತು ತೆಗಳಿಕೆಯನ್ನು ಸಮಾನವಾಗಿ ಸ್ವೀಕರಿಸುವವರು ಮಾತ್ರ ಸಾಧಕರಾಗುತ್ತಾರೆ. ಹಾಗಾಗಿ ಹೊಗಳಿಕೆ ಅವರಿಗೆ ಅಗತ್ಯವಿಲ್ಲದಿರಬಹುದು ಅಥವಾ ಅಗತ್ಯ ಇಲ್ಲದಿದ್ದಂತೆ ನಟಿಸಬಹುದು. ತಾನು ಹೊಗಳಿಕೆ ಮೆಚ್ಚುವುದಿಲ್ಲ ಎನ್ನುವವ ಒಳಗೊಳಗೆ ತೆಗಳಿಕೆಗಿಂತ ಹೊಗಳಿಕೆಗೆ ಖುಷಿ ಪಡುವವರ ಸಂಖ್ಯೆ ಹೆಚ್ಚು. ತಾನು ಹೊಗಳಿಕೆ ಮೆಚ್ಚುವುದಿಲ್ಲ ಎನ್ನುವನಾದರೆ ಒಂದೋ ಅವನು ದೇವನಾಗಿರಬೇಕು .ಇಲ್ಲವೇ ಅವರ ಹೊಗಳಿಕೆಯ ಸಾಧನೆ ಆಕಸ್ಮಿಕವಾಗಿರಬೇಕು ಅಷ್ಟೇ. ಹೊಗಳಿಗೆಕೆ ಪಡುವ ಸಂಭ್ರಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು.ಹೊಗಳಿಕೆಯನ್ನೇ ಇಷ್ಟಪಡದವರು ಈ ಪ್ರಪಂಚದಲ್ಲಿ ಇರಲು ಸಾಧ್ಯವಿಲ್ಲ. ಹೊಗಳಿಕೆ ಉತ್ಪ್ರೇಕ್ಷೆಯಾಗಿರಬಾರದು. ಮುಜುಗರಕ್ಕೆ ಒಳಗಾಗುವಂತಿರಬಾರದು. ನೈಜತೆ ಇರಬೇಕು. ಪ್ರಶಂಸೆಯ ನಂತರ ತಿದ್ದುಪಡಿಗಳಿದ್ದರೆ ಹೇಳಬಹುದು. ಮೊದಲು ಒಳ್ಳೆಯದನ್ನು ಹೇಳಿ ನಂತರ ಸರಿಯಾಗಬೇಕಾದನ್ನು ಹೇಳಬಹುದು. ಒಂದು ಮಾತಿದೆಯಲ್ಲ ಹೊಗಳಿಕೆಯನ್ನು ನಾಲ್ಕು ಜನರು ಇರುವಾಗ ಮಾಡು. ತೆಗಳುವುದಿದ್ದರೆ, ಬುದ್ದಿ ಹೇಳುವುದಿದ್ದರೆ ಒಬ್ಬನಿರುವಾಗ ಹೇಳು ಎಂಬ ನೀತಿಯನ್ನು ಅನುಸರಿಸಬಹುದು.
ಹಾಗಾಗಿ ಪ್ರಶಂಸೆ ಖಂಡಿತವಾಗಿಯೂ ಕೆಟ್ಟದಲ್ಲ. ಪ್ರಶಂಸೆ ಪಡೆಯಬೇಕಾದ ಪ್ರಶಂಸೆ ಪಡೆಯಬೇಕಾದವನಿಗಿರುವ ಅರ್ಹತೆ ಪ್ರಶಂಸೆ ಮಾಡಬೇಕಾದವನಿಗೂ ಇರಬೇಕು. ಪ್ರಶಂಸೆ ಸುಮ್ಮನೆ ಮಾಡಲು ಸಾಧ್ಯವಿಲ್ಲ. ‘ಪರೋಪಕಾರವೇ ಪುಣ್ಯ ಪರಪೀಡನೆಯೇ ಪಾಪ’ ಎಂದು ಒಪ್ಪುವುದಾದರೆ ಪ್ರಶಂಸೆಯು ಒಂದು ಪರೋಪಕಾರ . ಪರ ನಿಂದೆಯೇ ಮಹಾ ಪಾಪ. ಇರುವಷ್ಟು ದಿನ ಮೆಚ್ಚುವಂದದಿ ಬಾಳು ಇನ್ನೊಬ್ಬರನ್ನು ಮೆಚ್ಚುತ್ತ ಬಾಳು. ಕಚ್ಚುವುದು ಬೇಡವಯ್ಯ
ಮಂಜುನಾಥ ಕುಲಾಲ್ ಶಿವಪುರ
‘ಒಲುಮೆ’ ಮುಳ್ಳುಗುಡ್ಡೆ
5761129900791090