
ಪುತ್ತೂರು: ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ ಸರಕಾರಿ ಮೆಡಿಕಲ್ ಕಾಲೇಜು ಬಳಿಯಲ್ಲೇ ಆಯುರ್ವೆದ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವ ಬಗ್ಗೆ ಕಳೆದ ಕೆಲದಿನಗಳ ಹಿಂದೆ ಪುತ್ತೂರು ಶಾಸಕ ಅಶೋಕ್ ರೈ ಅವರು ಸರಕಾರಕ್ಕೆ ಮನವಿ ಮಾಡಿದ್ದು ಈ ಮನವಿಗೆ ಸ್ಪಂದಿಸಿದ ಸರಕಾರ ಆಯುರ್ವೆದ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಂಬಂದಿಸಿದಂತೆ ಆಯುಷ್ ಇಲಾಖೆಗೆ ಶಿಫಾರಸ್ಸು ಮಾಡಿದೆ.
ಸರಕಾರಿ ಮೆಡಿಕಲ್ ಕಾಲೇಜಿಗೆ ಈಗಾಗಲೇ ಜಾಗ ಗುರುತಿಸಲಾಗಿದ್ದು, ಇದರಲ್ಲಿ ಸುಮಾರು ೪೦ ಎಕ್ರೆ ಜಾಗವಿದ್ದು ಈ ಪೈಕಿ ೨೦ ಎಕ್ರೆ ಜಾಗ ಸರಕಾರಿ ಮೆಡಿಕಲ್ ಕಾಲೇಜಿಗೆ ಬಳಕೆಯಾಗುತ್ತದೆ. ಇದೇ ಜಾಗದಲ್ಲಿ ೫ ಎಕ್ರೆ ಜಾಗವನ್ನು ಆಯುರ್ವೆದ ಮೆಡಿಕಲ್ ಕಾಲೇಜಿಗೆ ನಿಗಧಿ ಮಾಡಲಾಗಿದೆ. ಆಯುರ್ವೆದ ಮೆಡಿಕಲ್ ಕಾಲೇಜು ಆಗಬೇಕೆಂದು ಬಹು ಬೇಡಿಕೆ ಇದ್ದು ಇದಕ್ಕೆ ಸರಕಾರ ಮತ್ತು ಆರೋಗ್ಯ ಇಲಾಖೆ ಮುತುವರ್ಜಿವಹಿಸಬೇಕು ಎಂದು ಆಗ್ರಹಿಸಿ ಶಾಸಕ ಅಶೋಕ್ ರೈ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಲ್ಲಿ ಮನವಿ ಮಾಡಿಕೊಂಢಿದ್ದರು.
ಆರೋಗ್ಯ ಸಚಿವಾಲಯ ಆಯುಷ್ ಇಲಾಖೆಗೆ ಈ ಬಗ್ಗೆ ಶಿಫಾರಸ್ಸು ಪತ್ರವನ್ನು ಕಳುಹಿಸಿದೆ. ಪುತ್ತೂರಿನಲ್ಲಿ ಆಯುರ್ವೆದ ಮೆಡಿಕಲ್ ಕಾಲೇಜಿನ ಮೊದಲ ಹಂತದ ಕಾರ್ಯ ಪೂರ್ಣಗೊಂಡಂತಾಗಿದ್ದು ಮುಂದಿನ ದಿನಗಳಲ್ಲಿ ಆಯುರ್ವೆದ ಮೆಡಿಕಲ್ ಕಾಲೇಜು ಮಂಜೂರು ಪ್ರಕ್ರಿಯೆ ನಡೆಯಲಿದೆ.
ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾದ ಬಳಿಕ ಆಯುರ್ವೆದ ಮೆಡಿಕಲ್ ಕಾಲೇಜಿಗೂ ಬೇಡಿಕೆ ಹೆಚ್ಚಾಗಿತ್ತು. ಈ ನಿಟ್ಟಿನಲ್ಲಿ ಮೆಡಿಕಲ್ ಕಾಲೇಜು ಪಕ್ಕದಲ್ಲೇ ಆಯುರ್ವೆದ ಮೆಡಿಕಲ್ ಕಾಲೇಜು ಆಗಬೇಕೆಂಬ ಉದ್ದೇಶದಿಂದ ನಾನು ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದೆ. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು ಆಯುಷ್ ಇಲಾಖೆಗೆ ಈ ಬಗ್ಗೆ ಶಿಫಾರಸ್ಸು ಪತ್ರವನ್ನು ಕಳುಹಿಸಿದ್ದಾರೆ. ಬನ್ನೂರಿನಲ್ಲಿ ಸುಮಾರು ೩೦ ಕೋಟಿ ರೂ ವೆಚ್ಚದಲ್ಲಿ ಈ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ. ಜನತೆಯ ಬೇಡಿಕೆಯನ್ನು ಒಂದೊಂದಾಗಿ ಈಡೇರಿಸಲಾಗುತ್ತಿದ್ದು ಪುತ್ತೂರು ಕ್ಷೇತ್ರಕ್ಕೆ ಇನ್ನಷ್ಟು ಕಾಲೇಜು, ಉದ್ಯಮಗಳನ್ನು ತರುವ ಉದ್ದೇಶ ಇದೆ. ಈ ಮೂಲಕಪುತ್ತೂರು ಅಭಿವೃದ್ದಿ ಮಾಡುವ ಕನಸು ಇದೆ ಅದು ನನಸಾಗಬೇಕು-
ಅಶೋಕ್ ರೈ ಶಾಸಕರು ಪುತ್ತೂರು
—
ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ, ಕ್ಷೇತ್ರ ವ್ಯಾಪ್ತಿಯ
೧೩ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಸರಕಾರದಿಂದ ಆದೇಶ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ೧೩ ವಿವಿಧ ಸರಕಾರಿ ಹಿ ಪ್ರಾ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ನಡೆಸಲು ಸರಕಾರದಿಂದ ಅನುಮತಿ ದೊರಕಿದ್ದು ಈ ಬಗ್ಗೆ ಆದೇಶ ಹೊರಡಿಸಲಾಗಿದೆ.
ಪುತ್ತೂರು ತಾಲೂಕಿನ ವಿವಿಧ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳಿಲ್ಲದ ಕಾರಣಕ್ಕೆ ಬಹು ಕಡೆಗಳಿಂದ ತರಗತಿ ಆರಂಭಕ್ಕೆ ಬೇಡಿಕೆ ಬಂದಿತ್ತು. ಪೋಷಕರಿಂದ ಬಂದ ಬೇಡಿಕೆಯನುಸಾರವಾಗಿ ಶಾಸಕ ಅಶೋಕ್ ರೈ ಅವರು ಆಂಗ್ಲ ಮಾಧ್ಯಮ ತರಗತಿಗೆ ಅನುಮತಿ ನೀಡುವಂತೆ ಶೈಕ್ಷಣಿಕ ವರ್ಷ ಆರಂಭಕ್ಕೆ ಮೊದಲು ಮನವಿ ಮಾಡಿ ಸರಕಾರಕ್ಕೆ ಆಗ್ರಹಿಸಿದ್ದರು.
ಅದರಂತೆ ಸರಕಾರಿ ಹಿ ಪ್ರಾ ಶಾಲೆ ಕೈಕಾರ, ನರಿಮೊಗರು, ಭಕ್ತಕೋಡಿ, ಕೆಮ್ಮಾಯಿ, ಪೆರ್ಲಂಪಾಡಿ, ನೆಟ್ಟಣಿಗೆ ಮುಡ್ನೂರು, ಪಾಪೆಮಜಲು, ಮುಂಡೂರು, ಪಾಣಾಜೆ, ವಿಟ್ಲ ಚಂದಳಿಕೆ, ಕೆದಿಲ, ಪಾಟ್ರಕೋಡಿ ಹಾಗೂ ಬೊಳಂತಿಮೊಗ್ರು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಅನುಮತಿ ನೀಡಿ ಸರಕಾದ ಆದೇಶವನ್ನು ಹೊರಡಿಸಿದೆ.
ಒಂದನೆ ತರಗತಿ ಆರಂಭ
ಸರಕಾರದ ಆದೇಶದಂತೆ ೧೩ ಶಾಲೆಗಳಲ್ಲಿ ಈ ಬಾರಿಯ ಶೈಕ್ಷಣಿಕ ವರ್ಷದಿಂದಲೇ ಒಂದನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಈ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ತರಗತಿಗಳು ನಡೆಯುತ್ತಿದ್ದವು. ಯುಕೆಜಿ ಮುಗಿಸಿದ ವಿದ್ಯಾರ್ಥಿಗಳನ್ನು ಒಂದನೇ ತರಗತಿಗೆ ದಾಖಲಾತಿ ಮಾಡಿದ್ದರೂ ಸರಕಾರದಿಂದ ಆದೇಶ ಬಂದಿರಲಿಲ್ಲ ಮತ್ತು ಇಲಾಖೆಯಿಂದ ಅನುಮತಿಯೂ ದೊರೆತಿರಲಿಲ್ಲ. ಈ ಬಗ್ಗೆ ಪೋಷಕರು ಶಾಸಕ ಅಶೋಕ್ ರೈ ಅವರಲ್ಲಿ ಮನವಿ ಮಾಡಿಕೊಂಡಿದ್ದರು.
ಸರಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಪ್ರಾರಂಭಿಸುವುದು ಇಂದಿನ ಅನಿವಾರ್ಯತೆಯಾಗಿದೆ. ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಯುವುದು ಇಂದಿನ ಕಾಲದ ಬೇಡಿಕೆಯಾಗಿದೆ. ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಇಲ್ಲ ಎಂಬ ಕಾರಣಕ್ಕೆ ಅನೇಕ ಮಂದಿ ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳಿಸುವಂತಾಗಿತ್ತು. ನಮ್ಮ ಸರಕಾರಿ ಶಾಲೆಗಳಲ್ಲಿ ಈಗಾಗಲೇ ಎಲ್‌ಕೆಜಿ, ಯುಕೆಜಿ ತರಗತಿಗಳು ನಡೆಯುತ್ತಿದೆ. ಮೊದಲ ಹಂತದಲ್ಲಿ ೧೩ ಶಾಲೆಗಳಿಗೆ ಅನುಮತಿ ಸಿಕ್ಕಿದೆ. ಶೀಘ್ರವೇ ಶಿಕ್ಷಕರ ನೇಮಕಾತಿಯೂ ನಡೆಯಲಿದೆ. ಬಡವರ ಮಕ್ಕಳೂ ಅದರಲ್ಲಿ ಸರಕಾರಿ ಶಾಲೆಯ ಮಕ್ಕಳು ಅಂಗ್ಲ ಮಾಧ್ಯಮದಿಂದ ವಂಛಿತರಾಗಬಾರದು. ಎಲ್ಲಾ ಮಕ್ಕಳೂ ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಯಬೇಕು-
ಅಶೋಕ್ ರೈ ಶಾಸಕರು, ಪುತ್ತೂರು