
ಉಡುಪಿ ತಾಲೂಕಿನ ಪೆರ್ಡೂರಿನಲ್ಲಿರುವ ಇತಿಹಾಸ ಪ್ರಸಿದ್ಧ ಅನಂತಪದ್ಮನಾಭ ದೇವಾಲಯದಲ್ಲಿ ಪುರಾಣೋಕ್ತ ಕಥಾನಕದ ನಿರೂಪಣಾ ಶಿಲ್ಪಗಳಿರುವ ಅಪರೂಪದ ದೀಪದ ಕುರಿತಾಗಿ ಶಿರ್ವದ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಮತ್ತು “ಆದಿಮ ಕಲಾ ಟ್ರಸ್ಟ್ (ರಿ.), – ಉಡುಪಿ” ಇದರ ಸ್ಥಾಪಕ ಸದಸ್ಯ ಪ್ರೊ. ಟಿ. ಮುರುಗೇಶಿ ಅವರು ಪತ್ರಿಕಾ ವರದಿಯನ್ನು ನೀಡಿದ್ದು, ಕಾಲಮಾನವನ್ನು ನೀಡುವ ಸಂದರ್ಭದಲ್ಲಿ ದೇವಾಲಯದ ಒಳಪ್ರಾಕಾರದಲ್ಲಿನ ಶಾಸನವನ್ನು ಆಧಾರವಾಗಿರಿಸಿಕೊಂಡಿರುತ್ತಾರೆ. ವಿದ್ವಾಂಸರ ಪ್ರಕಾರ ಈ ಶಾಸನವು ಬಸವಣ್ಣರಸ ಬಂಗನ (*ಬಸವಂಣರಸರಾದ ಬಂಗ* ಎಂದಾಗಬೇಕು, ಸಾಮಾನ್ಯ ವರ್ಷ 1456) ಕಾಲಕ್ಕೆ ಸೇರಿದ್ದು, ಈತನು ದೇವಾಲಯಕ್ಕೆ ಎರಡು ಕಂಚಿನ ದೀಪವನ್ನು ನೀಡಿರುವುದು ಶಾಸನದಲ್ಲಿ ದಾಖಲಾಗಿರುವುದರಿಂದ ಇದು 15ನೇ ಶತಮಾನದ ದೀಪವೆಂದು ನಿರ್ಣಯಿಸಲಾಗಿದೆ ಎಂದು ಹೇಳುತ್ತಾರೆ.
ವಿದ್ವಾಂಸರು ಉಲ್ಲೇಖಿಸಿರುವ ಈ ಶಾಸನವು S.I.I., Vol-27, No- 368 ರಲ್ಲಿ ಪ್ರಕಟವಾಗಿದ್ದು, ಈ ಶಾಸನದ ಮಾಹಿತಿಯಂತೆ *”…ದೇವರ ಎರಡು ನಂದಾಬೆಳಕಿಗೆ ಎರಡು ಕಂಚಿನ ಠಾಣ ದೀವಿಗೆಯ ಕಂಭವನು ಸಮರ್ಪಿ…’* ಎಂದು ಉಲ್ಲೇಖಿಸಿರುವುದು ಸ್ಪಷ್ಟವಾಗುತ್ತದೆ. ದೇವರ ನಂದಾದೀಪಕ್ಕೆ ಎರಡು ನಿಲ್ಲಿಸುವ ಕಂಚಿನ ದೀಪಕಂಭವನ್ನು ಕೊಟ್ಟಿರುವುದು ಶಾಸನದಲ್ಲಿ ಉಲ್ಲೇಖಗೊಂಡಿರುವುದರಿಂದ, ಇವುಗಳು ದೇವಾಲಯದಲ್ಲಿ ಇರುವ/ಇದ್ದಿರಬಹುದಾದ ಸಾಧ್ಯತೆಯಿದೆ.
ಶಾಸನ ಉಲ್ಲೇಖಿತ ಕಂಚಿನ ಠಾಣ ದೀವಿಗೆಯ ಕಂಭ ಎಂದರೆ ನಿಲ್ಲಿಸುವ ದೀಪಕಂಭ, ಅರ್ಥಾತ್ ಆಡುಭಾಷೆಯಲ್ಲಿ “ಕಾಲುದೀಪ”. ಹಾಗಾಗಿ ವಿದ್ವಾಂಸರು/ಸಂಶೋಧಕರು ಹೇಳಿರುವ ಈ ಕಲಾತ್ಮಕದ ದೀಪವು ತೂಗುದೀಪವಾಗಿರುವುದರಿಂದ, ಇದಕ್ಕೂ ಮತ್ತು ಶಾಸನೋಕ್ತ ದೀಪಕ್ಕೂ ಯಾವುದೇ ಹೊಂದಾಣಿಕೆಯಾಗದಿರುವುದರಿಂದ ಈ ದೀಪದ ಕಾಲಮಾನವನ್ನು ಪುನರ್ ಪರಿಶೀಲಿಸುವುದು ಅಧ್ಯಯನ ದೃಷ್ಟಿಯಿಂದ ಅಗತ್ಯವಾಗಿದೆ.
*ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ & ವಿಶಾಲ್ ರೈ ಕೆ*
(ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿಗಳು)