ಬೆಳಗಾವಿ : ವಿದ್ಯಾರ್ಥಿಗಳಿಗೆ ಪದವಿಯ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನ ದೊರೆತಲ್ಲಿ ಅದು ಅವರ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡುತ್ತದೆ ಎಂದು ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಧಾರವಾಡ ಕ್ಯಾಂಪಸ್ ನ ನಿರ್ದೇಶಕ ಪ್ರೊ. ಮಂಜುನಾಥ ಘಾಟೆ ಅಭಿಪ್ರಾಯಪಟ್ಟರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯವು ಜುಲೈ 8ರಿಂದ 12ರವರೆಗೆ ವಿವಿಧ ಪದವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಐದು ದಿನದ ಓರಿಯೆಂಟೇಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಪದವಿಯು ಕಲಿಕೆ, ವೈಯಕ್ತಿಕ ಬೆಳವಣಿಗೆ ಮತ್ತು ಕೌಶಲ್ಯ ಅಭಿವೃದ್ಧಿಯ ನಿರ್ಣಾಯಕ ಹಂತವಾಗಿದೆ. ಈ ಅವಧಿಯು ಅವರ ಭವಿಷ್ಯದ ಯಶಸ್ಸಿಗೆ ಅಡಿಪಾಯವನ್ನು ಹಾಕುತ್ತದೆ. ಜೊತೆಗೆ ಗಟ್ಟಿಯಾದ ವ್ಯಕ್ತಿತ್ವವನ್ನು ರೂಪಿಸುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಗಮನವನ್ನು ಬೇರೆಡೆ ಹರಿಸದೇ ಸಂಪೂರ್ಣವಾಗಿ ಶೈಕ್ಷಣಿಕ ಚಟುವಟಿಕೆ , ಸಾಮಾಜಿಕ ಸಂವಹನ ಮತ್ತು ಹೊಸ ಅನುಭವಗಳ ಅನ್ವೇಷಣೆಯತ್ತ ಗಮನಹರಿಸಬೇಕು ಎಂದರು.

ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಕ್ರೈಂನ ಭೀಕರತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿವಿಧ ರೀತಿಯ ಸೈಬರ್ ಅಪರಾಧಗಳು, ಅವುಗಳ ಪರಿಣಾಮ ಮತ್ತು ಆನ್‌ಲೈನ್‌ನಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ವಿವರಿಸಿದರು.

ಆನ್‌ಲೈನ್ ಪ್ರಪಂಚವನ್ನು ಸುರಕ್ಷಿತವಾಗಿ ನ್ಯಾವಿಗೇಟ್ ಮಾಡಲು ಸೈಬರ್ ಕ್ರೈಮ್‌ಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆನ್‌ಲೈನ್ ಸಂವಹನ, ವ್ಯವಹಾರ ನಡೆಸುವಾಗ ಅತ್ಯಂತ ಜಾಗರೂಕತೆಯಿಂದ ಇರಬೇಕು. ಅಲ್ಲಿ ನಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವಾಗ ಹೆಚ್ಚು ಗೌಪ್ಯತೆಯನ್ನು ಕಾಪಾಡಬೇಕು. ಸ್ವಲ್ಪ ಯಾಮಾರಿದರೂ ಬದುಕು ದುರಂತಮಯವಾಗುತ್ತದೆ ಎಂದು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ. ಎಂ ಜಿ ಹೆಗಡೆ ಅವರು ವಿದ್ಯಾರ್ಥಿಗಳ ಜೀವನದಲ್ಲಿ ಪದವಿ ಹಂತವು ಅತ್ಯಂತ ನಿರ್ಣಾಯಕವಾದುದು. ಇಲ್ಲಿ ಪಡೆದುಕೊಳ್ಳುವ ಶಿಕ್ಷಣ, ವಿವಿಧ ಜ್ಞಾನ ಶಿಸ್ತುಗಳು ಜೊತೆಗೆ ವ್ಯಕ್ತಿತ್ವ ವಿಕಸನವು ಅವರ ಭವಿಷ್ಯಕ್ಕೆ ಗಟ್ಟಿಯಾದ ಭೂಮಿಕೆಯನ್ನು ಒದಗಿಸುತ್ತದೆ. ಸಂವಹನ, ಕೌಶಲ್ಯಗಳು ಮತ್ತು ಭಾವನಾತ್ಮಕ ಯೋಗಕ್ಷೇಮದಂತಹ ಅಗತ್ಯ ಕೌಶಲ್ಯಗಳನ್ನು ಇಲ್ಲಿ ನೀಡುವುದು ತುಂಬಾ ಅವಶ್ಯಕ. ಭವಿಷ್ಯದ ಶೈಕ್ಷಣಿಕ ಮತ್ತು ವೃತ್ತಿಜೀವನದ ಯಶಸ್ಸಿಗೆ ಇವು ಅತ್ಯಗತ್ಯ. ವಿದ್ಯಾರ್ಥಿಗಳು ತಮ್ಮಲ್ಲಿರುವ ಶಕ್ತಿ -ಸಾಮರ್ಥ್ಯವನ್ನು , ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಲಿದೆ. ಬೇರೆ ಬೇರೆ ಕಾಲೇಜು ಮತ್ತು ವಿಭಿನ್ನ ಪರಿಸರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬಂದಿದ್ದಾರೆ. ಅವರಲ್ಲಿ ಭವಿಷ್ಯದ ಮುನ್ನೋಟವನ್ನು ತುಂಬಿ ಬೌದ್ಧಿಕ ಜಗತ್ತಿಗೆ ಅವರನ್ನು ಆಹ್ವಾನಿಸುವುದು ಮುಖ್ಯ. ಹಾಗಾಗಿ ಇಂತಹ ಒಂದು ವಿಭಿನ್ನ ಶಿಬಿರವನ್ನು ಅವರಿಗಾಗಿ ಹಮ್ಮಿಕೊಂಡಿದ್ದೇವೆ. ಈ ಐದು ದಿನಗಳು ಅವರಲ್ಲಿ ಧೈರ್ಯ -ಸ್ಥೈರ್ಯ ತುಂಬಿ ಗಮ್ಯದ ಕಡೆಗೆ ದಾರಿ ತೋರಿಸಲಿದೆ. ಕಲಿಕೆಯು ಕೇವಲ ಒಂದು ಆಯ್ಕೆ ಆಗದೇ ಇವತ್ತಿನ ದಿನಮಾನದ ಜೀವನದ ಅತ್ಯಗತ್ಯ ಭಾಗ ಎಂದು ವಿದ್ಯಾರ್ಥಿಗಳು ತಿಳಿಯಬೇಕು ಎಂದರು.

ಅರ್ಥಶಾಸ್ತ್ರದ ಸಹ ಪ್ರಾಧ್ಯಾಪಕ ಡಾ. ಅರ್ಜುನ ಜಂಬಗಿ ಉಪಸ್ಥಿತರಿದ್ದರು.
ಉಪನ್ಯಾಸಕಿ ಆಸ್ಮಾ ದಾದಿಬಾಯಿ ನಿರೂಪಿಸಿದರು, ಲಾವಣ್ಯ ಗುಂಜಾಳ ಪ್ರಾರ್ಥಿಸಿದರು. ಜಯಶ್ರೀ ಉಪರಿ ವಂದಿಸಿದರು. ಬಿಎ, ಬಿಎಸ್ಸಿ, ಬಿಬಿಎ, ಬಿಕಾಂ, ಬಿಸಿಎ ಪ್ರಥಮ ವರ್ಷದ 652 ವಿದ್ಯಾರ್ಥಿಗಳು ಹಾಜರಿದ್ದರು.