ಹೆಬ್ರಿ : ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವತಿಯಿಂದ ಅಕ್ಷರ ಸಾಹಿತ್ಯ ಸಂಘ ಅಸ್ತಿತ್ವಕ್ಕೆ ಬಂದಿದೆ.

ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಅಕ್ಷರ ಸಾಹಿತ್ಯ ಸಂಘ, ಚಾಣಕ್ಯ ಸಂಸ್ಥೆ ಹೆಬ್ರಿ ಹಾಗೂ ಜೇಸಿಐ ಹೆಬ್ರಿ ಇವರ ಸಹಭಾಗಿತ್ವದಲ್ಲಿ ಅಕ್ಷರ ಯಾನ – ಪತ್ರಿಕಾ ರಂಗದ ಪರಿಚಯ ಮತ್ತು ವರದಿ ತಯಾರಿಕೆ ತರಬೇತಿ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ದಿನಾಂಕ 11-7-2025 ರಂದು ನಡೆಯಿತು.

ಎಸ್. ಡಿ.ಎಂ.ಸಿ ಅಧ್ಯಕ್ಷ ವಿಜಯೇಂದ್ರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ,ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಕರ್ತವ್ಯ ನಿರತ ಪರ್ತಕರ್ತರ ಸಂಘದ ಉಪಾಧ್ಯಕ್ಷರು ಹಾಗೂ ವರದಿಗಾರರಾಗಿರುವ ಉದಯ ಕುಮಾರ ಶೆಟ್ಟಿ. ಮುಖ್ಯ ಅತಿಥಿಗಳಾಗಿ ಹೆಬ್ರಿ ಜೇಸಿಐ ನ ಅಧ್ಯಕ್ಷ ಸೋನಿ ಪಿ ಶೆಟ್ಟಿ, ಉಪ ಪ್ರಾಂಶುಪಾಲ ದಿವಾಕರ ಮರಕಾಲ ಎಸ್, ಅಕ್ಷರ ಸಾಹಿತ್ಯ ಸಂಘದ ಅಧ್ಯಕ್ಷೆ ರಕ್ಷಿತಾ, ಕಾರ್ಯದರ್ಶಿ ಸಂಜನಾ ಉಪಸ್ಥಿತರಿದ್ದರು.

ಅಕ್ಷರ ಸಾಹಿತ್ಯ ಸಂಘದ ಮಾರ್ಗದರ್ಶಕ ಶಿಕ್ಷಕ ಮಂಜುನಾಥ ಕುಲಾಲ ಸ್ವಾಗತಿಸಿ, ನಿರೂಪಿಸಿ, ಧನ್ಯವಾದವಿತ್ತರು.

ಸಂಪನ್ಮೂಲ ವ್ಯಕ್ತಿ ಉದಯ ಕುಮಾರ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಪತ್ರಿಕಾ ರಂಗದ ಪರಿಚಯದೊಂದಿಗೆ ಪತ್ರಿಕೆಗಳಿಗೆ ವರದಿಯನ್ನು ತಯಾರಿಸುವ ಬಗ್ಗೆ ಮಾಹಿತಿ ನೀಡಿದರು. ಅವರು ಮಾತನಾಡಿ ಪತ್ರಿಕೆಗಳು ಪ್ರಜ್ಞಾವಂತ ಸಮಾಜದ ಜೀವನಾಡಿ ಇದ್ದಂತೆ. ಸುದ್ದಿಗಳ ಮೂಲಕ ಪತ್ರಿಕೆಗಳು ಜನರಿಗೆ ಜ್ಞಾನ ಮತ್ತು ಅರಿವನ್ನು ನೀಡುತ್ತವೆ. ಹೇಗೆ ಏನು ಎಲ್ಲಿ ಯಾವಾಗ ಏಕೆ ಯಾರು ಮುಂತಾದವುಗಳು ಪೂರ್ಣ ಮಾಹಿತಿ ವರದಿಯಲ್ಲಿರಬೇಕು. ಸ್ಥಳೀಯ ಮತ್ತು ರಾಜ್ಯ ರಾಷ್ಟ್ರದ ಸಾಮಾನ್ಯ ಜ್ಞಾನ ಮಾಹಿತಿಗಳನ್ನು ತಿಳಿದುಕೊಂಡಿರಬೇಕು. ವರದಿಗಾರಿಕೆಯೂ ಒಂದು ಕಲೆ. ಸಭೆ ಸಮಾರಂಭಗಳ ಮಾಹಿತಿ ಮಾತ್ರವಲ್ಲ.ಉತ್ತಮ ವಿಷಯಗಳ ಮಾಹಿತಿ ವರದಿಗಳು ಜನರನ್ನು ತಲುಪಬೇಕು. ಜನರ ಕಷ್ಟಗಳಿಗೆ ಸ್ಪಂದಿಸುವಂತಹ ವರದಿ ಮತ್ತು ಮಾಹಿತಿಗಳಿಂದ ಉಪಯೋಗವಾಗುತ್ತದೆ ಎಂದರು.

ಉಪಪ್ರಾಂಶುಪಾಲ ದಿವಾಕರ ಎಸ್. ಮರಕಾಲ ಮಾತನಾಡಿ, ಸಾಹಿತ್ಯ ಸಂಘಗಳ ಮೂಲಕ ವಿದ್ಯಾರ್ಥಿಗಳಿಗೆ ಸಾಹಿತ್ಯದ ಅರಿವಿನ ಜೊತೆಗೆ ಪ್ರಸ್ತುತ ವಿಷಯಗಳ ಬಗ್ಗೆ ಮಾಹಿತಿ ಮತ್ತು ತರಬೇತಿ ಅಗತ್ಯ ಎಂದರು.