
ಅರಬ್ ನಾಡಿನ ಪ್ರವಾಸಕ್ಕೆ ಬಂದು ಆಗಲೇ ಇಪ್ಪತ್ತು ದಿವಸ. ಮೊದಲ ನಾಲ್ಕು ದಿವಸ 5೦೦ ಕಿ. ಮೀ. ದೂರದ ಸೌದಿ ರಾಜಧಾನಿ ರಿಯಾಧ್ ನಲ್ಲಿ ಬೌಲ್ಡ್ವಿನ್ ಸಿಟಿ, ವಂಡರ್ ಗಾರ್ಡನ್, ಬೌಲ್ಡ್ ವಿನ್ ವರ್ಲ್ಡ್ ಮೊದಲಾದ ಅಪೂರ್ವ ಮನೋರಂಜನೆಯ ಸ್ಥಳಗಳನ್ನು ನೋಡಿದ್ದಾಗಿತ್ತು. ನಿನ್ನೆ ಮತ್ತೆ ನಾವಿರುವ ಅಲ್ ಜುಬೇಲ್ ನಿಂದ ಸುಮಾರು 125 ಕಿ. ಮೀ. ದೂರ ದಮ್ಮಾಮ್ ಹತ್ತಿರವಿರುವ “ಪ್ಯಾರಡೈಸ್ ಫಾರ್ಮ್” ನೋಡಲು ಹೋಗಿದ್ದೆವು.
ಕಳೆದ ಮೂರು ವಾರಗಳಲ್ಲಿ ಅಲ್ಲಲ್ಲಿ ಮಳೆಯಾಗಿತ್ತಾದ್ದರಿಂದ ಹವೆಯೇನೋ ಆಹ್ಲಾದಕರವಾಗಿಯೇ ಇತ್ತು. ಮರುಭೂಮಿಯ ಸುಡುಬಿಸಿಲಿನ ಅನುಭವ ನಮಗಿನ್ನೂ ಆಗಿಲ್ಲ. ಈ ಭಾಗದ ಪ್ರವಾಸಕ್ಕೆ ಇದು ಉತ್ತಮ ಕಾಲವೆನಿಸುತ್ತದೆ. ಕೆಲವೆಡೆ ಮಳೆ ನೀರು ಸಂಗ್ರಹವಾಗಿದ್ದುದೂ ಕಂಡುಬಂತು. ದಾರಿಯುದ್ದಕ್ಕೂ ಅಲ್ಲಲ್ಲಿ ಹೊಸ ನಗರಗಳು ನಿರ್ಮಾಣವಾಗುತ್ತಿರುವುದನ್ನೂ ನೋಡಿದೆವು. ಬಹಳ ತೀವ್ರಗತಿಯ ಬೆಳವಣಿಗೆ ಆಗುತ್ತಿದೆ.
ನಾವು ಎರಡು ಕಾರುಗಳಲ್ಲಿ ಎರಡು ಕುಟುಂಬದವರು ಪ್ರವಾಸಕ್ಕೆ ಹೊರಟಿದ್ದೆವು. ದಮ್ಮಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದ ಬಹಳ ದೊಡ್ಡ ಆಧುನಿಕ ನಗರ. ಅಲ್ಲಿಂದ ಸ್ವಲ್ಪಮುಂದೆ ಖೋಬರ್ ಎಂಬ ಇನ್ನೊಂದು ನಗರ. ಅಲ್ಲಿಯೇ ನಾವು ಕ್ಲಾಸಿಕ್ ರೆಸ್ಟೋರೆಂಟ್ ನಲ್ಲಿ ನಮ್ಮ ದಕ್ಷಿಣ ಕರ್ನಾಟಕದ ಬಾಳೆಎಲೆ ಊಟ ಮಾಡಿದ್ದು. ಅರಬ್ ನೆಲ ಈಗ ಸಮೃದ್ಧವಾಗಿ ಎಲ್ಲ ಬಗೆಯ ತರಕಾರಿಗಳನ್ನು ಬೆಳೆಯುತ್ತಾರೆ. ನಮ್ಮ ಹೋಟೆಲ್ ಎದುರಿಗೇ ಒಂದು ದೊಡ್ಡ ತರಕಾರಿ ಹಣ್ಣುಗಳ ಅಂಗಡಿ ಇತ್ತು. ದಿನಾಲು ಅಲ್ಲಿಗೆ ಅವರದೇ ಫಾರ್ಮ ನಿಂದ ತಾಜಾ ತಾಜಾ ತರಕಾರಿ ಬರುತ್ತದಂತೆ. ಹೋಟೆಲ್ ತುಂಬ ಡೀಸೆಂಟ್ ಆಗಿತ್ತು. ಊಟವೂ ಚೆನ್ನಾಗಿತ್ತು.
ಊಟ ಮುಗಿಸಿ ಮೂರು ಗಂಟೆಗೆ ಪ್ಯಾರಡೈಸ್ ಫಾರ್ಮ್ ಸ್ಥಳಕ್ಕೆ ಬಂದೆವು. ಒಬ್ಬರಿಗೆ 30 ರಿಯಾಲ್ ಪ್ರವೇಶ ಟಿಕೆಟ್. ಮಕ್ಕಳಿಗೂ ದೊಡ್ಡವರಿಗೂ ಖುಷಿ ಕೊಡುವಂತಹ ತಾಣ. ತಾಳೆ ಖರ್ಜೂರ ಮರಗಳೇ ತುಂಬಿದ್ದವು. ಬಗೆಬಗೆಯ ತರಕಾರಿ ಬೆಳೆಯುವ ಫಾರ್ಮಗಳಿದ್ದವು. ಅಲ್ಲೇ ಬೆಳೆದ ಸ್ಟ್ರಾಬೆರಿ, ಟೊಮ್ಯಾಟೊ, ಫ್ಲಾವರ್ ಮತ್ತಿತರ ತಾಜಾ ತರಕಾರಿಗಳ ಪ್ರದರ್ಶನ ಮಾರಾಟಮಳಿಗೆಗಳೂ ಇದ್ದವು. ಕೃತಕ ಜಲಪಾತ, ಸರೋವರ, ಮಕ್ಕಳಿಗೆ ಬೋಟಿಂಗ್ , ಹಕ್ಕಿಗಳು, ಪ್ರಾಣಿಗಳು ಏನೆಲ್ಲ ಇದ್ದವು. ಸಾವಿರಾರು ಜನ ಬರುತ್ತಿದ್ದರೂ ಸಮಸ್ಯೆ ಏನಿಲ್ಲ. ವ್ಯವಸ್ಥೆ ಚೆನ್ನಾಗಿಟ್ಟಿದ್ದಾರೆ. ನಿನ್ನೆ ಶುಕ್ರವಾರ. ರಜಾದಿನ ಬೇರೆ. ಹಲವರು ಊಟತಿಂಡಿ ಕಟ್ಟಿಕೊಂಡು ಬರುತ್ತಾರೆ. ಇಂತಹ ಇನ್ನೂ ಕೆಲವು ಸ್ಥಳಗಳು ಸುತ್ತಮುತ್ತ ಇವೆಯಂತೆ.
ಕೆಲವೊಂದು ಬಿಗಿ ನಿಯಮಗಳ ಹೊರತಾಗಿಯೂ ಸೌದಿ ಅರೇಬಿಯಾ ಹೊಸ ಜಗತ್ತಿಗೆ ತನ್ನನ್ನು ತಾನೇ ತೆರೆದುಕೊಳ್ಳುತ್ತ ಹೊರಟಿದೆ. ಮಹಿಳೆಯರೂ ಕೆಲಮಟ್ಟಿಗೆ ಸ್ವಾತಂತ್ರ್ಯದ ಉಸಿರಾಡುತ್ತಿದ್ದಾರೆ. ಅತಿಯಾಗಿಯಲ್ಲವಾದರೂ ಕಾನೂನಿನ ಬಿಗಿ ಬೇಕೇಬೇಕು. ಇಲ್ಲದಿದ್ದರೆ ನಮ್ಮ ದೇಶದ ಹಾಗೆ ಜನ ಮನಸ್ಸಿಗೆ ಬಂದಂತೆ ನಡೆದುಕೊಳ್ಳತೊಡಗುತ್ತಾರೆ. ಇಲ್ಲಿ ಯಾರ ಆಟವೂ ನಡೆಯುವುದಿಲ್ಲ. ಹಾಗಂತ ನಿಯಮ ಪಾಲಿಸಿಕೊಂಡು ಹೋಗುವವರಿಗೆ ಯಾವ ತೊಂದರೆಯೂ ಇಲ್ಲ. ಜನರ ಬದುಕಿಗೆ ಬೇಕಾದ ಎಲ್ಲ ಅನುಕೂಲತೆಗಳೂ, ಸೌಕರ್ಯಗಳೂ ಇವೆ. 13 ದಶಲಕ್ಷದಷ್ಟು ವಿದೇಶೀಯರು ಇಲ್ಲಿ ಕೆಲಸ ಮಾಡುತ್ತಾರೆ. ಬಹಿರಂಗ ಧಾರ್ಮಿಕ ಸ್ವಾತಂತ್ರ್ಯ ಇಲ್ಲ. ಮನೆಯೊಳಗೆ ಏನು ಬೇಕಿದ್ದರೂ ಮಾಡಬಹುದು. ಸ್ವಾತಂತ್ರ್ಯ ಸ್ವೇಚ್ಛೆಯಾಗಲು ಇಲ್ಲಿ ಅವಕಾಶ ಇಲ್ಲ. ರಾಜಕೀಯ ಪಕ್ಷಗಳ ಅಥವಾ ರಾಜಕಾರಣಿಗಳ ಅಬ್ಬರ ಇಲ್ಲ. ಸರಕಾರದ ವಿರುದ್ಧ ಹೋರಾಟ, ಪ್ರತಿಭಟನೆ ನಡೆಯುವುದಿಲ್ಲ. ನಡೆಸಿದರೂ ಅದನ್ನು ಬಹಳ ಉಗ್ರವಾಗಿ ಹತ್ತಿಕ್ಕಲಾಗುವುದು. ಆದ್ದರಿಂದ ವಿರೋಧವಿದ್ದರೂ ಉಸಿರು ಕಟ್ಟಿಕೊಂಡು ಸುಮ್ಮನಿರಲೇಬೇಕು. ಮದ್ಯಪಾನ ಪೂರ್ತಿ ನಿಷೇಧವಿದೆ. ನಮ್ಮಲ್ಲಿ ನಿಷೇಧವಿದ್ದರೂ ಕಳ್ಳ ವ್ಯವಹಾರ ನಡೆಯುತ್ತದೆ. ಇಲ್ಲಿ ಹಾಗಿಲ್ಲ. ಸಿಕ್ಕುಬಿದ್ದರೆ ಕತೆ ಮುಗಿಯಿತು. ಅದಕ್ಕೇ ಇಲ್ಲಿ ಮಹಿಳೆಯರು ಸುರಕ್ಷಿತ. ಕಳ್ಳತನ ಮಾಡಿದರೆ ಕೈ ಕತ್ತರಿಸಿಕೊಳ್ಳಬೇಕಾದೀತು. ಮಾದಕ ವಸ್ತು ಮಾರಾಟ ಮಾಡಿದರೆ ತಲೆ ಕೊಡಬೇಕಾದೀತು. ಅರಸು ಪರಿವಾರದವರೇ ಇರಲಿ, ಮಂತ್ರಿಗಳೇ ಇರಲಿ, ದೊಡ್ಡ ಅಧಿಕಾರಿಗಳೇ ಇರಲಿ, ಯಾರಿಗೂ ವಿನಾಯ್ತಿ ಇಲ್ಲ. ಕಾನೂನಿನೆದುರು ಎಲ್ಲರೂ ಒಂದೇ.
ಎಲ್ ಎಸ್ ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ