ನೂರು ವರ್ಷಗಳತನಕವೂ ತಮ್ಮ ಜೀವನೋತ್ಸಾಹವನ್ನು ಒಂದೇ ರೀತಿ ಉಳಿಸಿಕೊಂಡು ಬಂದಿದ್ದ ಪಾಟೀಲ ಪುಟ್ಟಪ್ಪನವರು ಕನ್ನಡ ನಾಡುನುಡಿಗಳ ರಕ್ಷಣೆಯ ಕುರಿತಾಗಿ ತಮ್ಮ ಲೇಖನಿ ಮತ್ತು ಉಪನ್ಯಾಸಗಳ ಮೂಲಕ ನಿರಂತರ ಹೋರಾಟ ನಡೆಸಿಕೊಂಡುಬಂದವರಾಗಿದ್ದರು. ಕನ್ನಡ, ಕನ್ನಡಿಗರು ಮತ್ತು ಕರ್ನಾಟಕಗಳ ಮಾಹಿತಿಯ ವಿಷಯದಲ್ಲಿ ಅವರೊಂದು ಜೀವಂತ ವಿಶ್ವಕೋಶವೇ ಆಗಿದ್ದರು. ಅದ್ಭುತ ಪ್ರಪಂಚ ಜ್ಞಾನವುಳ್ಳವರಾಗಿದ್ದ ಅವರು ಪತ್ರಿಕಾರಂಗದಲ್ಲಿ ಎಲ್ಲರಿಗೂ ಒಂದು ಉತ್ತಮ ಮಾದರಿಯೆಂಬಂತೆ ಕಾರ್ಯ ನಿರ್ವಹಿಸಿದರು. ಆರು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿ , ಪಂಚಪತ್ರಿಕೆಗಳ ಸಂಪಾದಕರಾಗಿ ಅವರು ಪತ್ರಿಕಾ ರಂಗದಲ್ಲಿ ಅಪರೂಪದ ಸಾಧಕರೆನಿಸಿದ್ದಾರೆ.
೧೯೨೧ ರ ಜನೆವರಿ ೧೪ ರಂದು ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ಕುರುಬಗೊಂಡ ಎಂಬ ಗ್ರಾಮದಲ್ಲಿ ಜನಿಸಿದ ಪುಟಪ್ಪ ನವರು ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳೆರಡರಲ್ಲೂ ಪಾಲ್ಗೊಂಡವರಾಗಿದ್ದರು. ೧೯೫೪ ರಲ್ಲಿ ಬೆಳಗಾವಿಯ ಆರ್. ಎಲ್. ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಅವರು ಲಾಸ್ ಎಂಜಿಲ್ಸ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದುಬಂದ ಅವರು ಆರಂಭದಲ್ಲಿ ಹುಬ್ಬಳ್ಳಿಯ ವಿಶಾಲ ಕರ್ನಾಟಕ ಮತ್ತು ನವಯುಗ ಪತ್ರಿಕೆಗಳಲ್ಲಿ ಕೆಲಸ ಮಾಡಿದ ನಂತರ ೧೯೫೪ ರಲ್ಲಿ ತಮ್ಮದೇ ಆದ ಪ್ರಪಂಚ ವಾರಪತ್ರಿಕೆ, ೧೯೫೯ ರಲ್ಲಿ ವಿಶ್ವವಾಣಿ ದಿನಪತ್ರಿಕೆಗಳನ್ನು ಹೊರತಂದರಲ್ಲದೇ ಸಂಗಮ ಎಂಬ ಡೈಜೆಸ್ಟ್ (೧೯೫೬), ಮನೋರಮಾ ಎಂಬ ಸಿನಿಮಾ ಪತ್ರಿಕೆ (೧೯೬೧) , ಸ್ತ್ರೀ ಎಂಬ ಮಹಿಳಾ ಮಾಸಿಕಗಳನ್ನೂ ಕೆಲಕಾಲ ನಡೆಸಿ ಪಂಚಪತ್ರಿಕೆಗಳ ಪಿತಾಮಹ ನೆನಿಸಿದರು. ಪತ್ರಿಕಾರಂಗದಲ್ಲಿ ಅವರು ತಮ್ಮದೇ ಆದ ವಿಶಿಷ್ಟ ಶೈಲಿ ಮತ್ತು ವಿಚಾರಗಳಿಂದ ಪ್ರಸಿದ್ಧರಾಗಿದ್ದರು. ಅವರಲ್ಲಿ ಜಾಗತಿಕವಾಗಿ ಅಗಾಧ ಮಾಹಿತಿಯಿತ್ತು. ಪ್ರಪಂಚದಲ್ಲಿ ಅವರು ಜಗತ್ತಿನ ವಿವಿಧ ದೇಶಗಳ ಮತ್ತು ವ್ಯಕ್ತಿಗಳ ಕುರಿತು ಹಾಗೂ ಬಗೆಬಗೆಯ ಶೀರ್ಷಿಕೆಗಳ ಮೂಲಕ ನೀಡುತ್ತಿದ್ದ ವಿಷಯಗಳಿಂದಾಗಿ ಆ ವಾರಪತ್ರಿಕೆ ನಾಡಿನಾದ್ಯಂತ ಬಹಳ ದೊಡ್ಡ ಪ್ರಮಾಣದ ಓದುಗರನ್ನು ಹೊಂದಿತ್ತು. ಅವರು ಪ್ರಪಂಚದಲ್ಲಿ ಬರೆಯುತ್ತಿದ್ದ ಕೆಲವು ಉದ್ಬೋಧಕ ಮತ್ತು ಶ್ರೇಷ್ಠ ವಿಚಾರಗಳಿಂದ ಕೂಡಿದ ವಾಕ್ಯಗಳನ್ನು ಓದುಗರು ಕಂಠಪಾಠ ಮಾಡಿಕೊಂಡು ಇಂದಿಗೂ ನೆನಪಿಸಿಕೊಳ್ಳುತ್ತಾರೆನ್ನುವದು ಅವರ ಲೇಖನಿ ಶಕ್ತಿ ಮತ್ತು ವೈಚಾರಿಕ ಸಾಮರ್ಥ್ಯಕ್ಕೆ ಸಾಕ್ಷಿ ಉತ್ತಮ ವಾಗ್ಮಿ ಮತ್ತು ಉತ್ತಮ ಬರಹಗಾರರಾಗಿದ್ದರು ಅವರು ತಮ್ಮ ಆಳವಾದ ಅಧ್ಯಯನ ಹಾಗೂ ಅಪಾರ ನೆನಪಿನ ಶಕ್ತಿಯಿಂದ ಜನರನ್ನು ಸೆಳೆಯಬಲ್ಲವರಾಗಿದ್ದರು. ಕನ್ನಡ ನಾಡುನುಡಿಗಳ ಕುರಿತಾಗಿ, ಗಡಿಭಾಷಾ ವಿವಾದದಂತಹ ವಿಷಯದಲ್ಲಿ ಅವರು ಕನ್ನಡಿಗರ ಪರವಾಗಿ ಅಂಕಿಅಂಶ ಮತ್ತಿತರ ಮಾಹಿತಿಗಳೊಡನೆ ಪ್ರತಿಪಾದಿಸುತ್ತಿದ್ದ ರೀತಿ ಅನನ್ಯವಾಗಿತ್ತು.ಕನ್ನಡಿಗರಿಗೆ ಆಗುವ ಅನ್ಯಾಯವನ್ನೆಂದೂ ಸಹಿಸದ ಅವರು ಅಂತಹ ಸಂದರ್ಭಗಳಲ್ಲಿ ತಕ್ಷಣ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದರು.
೧೯೬೨ ಮತ್ತು ೧೯೬೮ ರಲ್ಲಿ ರಾಜ್ಯಸಭೆಗೆ ಎರಡು ಸಲ ನಾಮಕರಣಗೊಂಡ ಹಿರಿಮೆ ಅವರದು. ಅಲ್ಕಿಯೂ ಅವರು ತಮ್ಮ ಮಾತುಗಾರಿಕೆಯಿಂದ ಎಲ್ಲರ ಮೇಲೆ ಪ್ರಭಾವ ಬೀರಿದ್ದರು. ೧೯೮೫ ರಲ್ಲಿ ಕರ್ನಾಟಕ ಸರಕಾರ ಕನ್ನಡದ ಹಿತಾಸಕ್ತಿ ರಕ್ಷಣೆಗಾಗಿ ಕನ್ನಡ ಕಾವಲು ಸಮಿತಿ ರಚಿಸಿದಾಗ ಅದರ ಮೊದಲ ಅಧ್ಯಕ್ಷರಾಗಿ ಪಾಟೀಲ ಪುಟ್ಟಪ್ಪನವರನ್ನೇ ನೇಮಿಸಲಾಯಿತು. ಆಗ ಅವರು ರಾಜ್ಯದ ಎಲ್ಲೆಡೆ ಸಂಚರಿಸಿ ಕನ್ನಡದ ಅಭಿವೃದ್ಧಿಗೆ ತುಂಬ ಕೆಲಸ ಮಾಡಿದರು.
ಪಾಪು ಎಂದೇ ಎಲ್ಲರಿಗೂ ಪರಿಚಿತರಾಗಿದ್ದ ಅವರನ್ನು ೨೦೦೩ ರಲ್ಲಿ ಬೆಳಗಾವಿಯಲ್ಲಿ ಜರುಗಿದ ೭೦ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಲಾಯಿತಲ್ಕದೇ ಹಂಪಿ ವಿ.ವಿ. ದ ನಾಡೋಜ, ಪತ್ರಿಕಾರಂಗದ ಪ್ರತಿಷ್ಠಿತ ಟೀಯೆಸ್ಸಾರ್ ಪ್ರಶಸ್ತಿ, ಕವಿವಿ ಗೌರವ ಡಾಕ್ಟರೇಟ್, ನೃಪತುಂಗ ಪ್ರಶಸ್ತಿ ಮೊದಲಾದ ಮಾನ್ಯತೆಗಳೂ ಅವರನ್ನು ಅರಸಿಕೊಂಡುಬಂದವು.
ಅವರ ೨೦ ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದ್ದು , ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ೫೦ ವರ್ಷಗಳ ದೀರ್ಘ ಕಾಲ ಕಾರ್ಯ ನಿರ್ವಹಿಸಿದ ದಾಖಲೆ ಅವರದು. ೨೦೨೦ ರ ಮಾರ್ಚ ೧೬ ರಂದು ಪಾಟೀಲ್ ಪುಟ್ಟಪ್ಪನವರು ನಿಧನ ಹೊಂದಿದರು.
ನಾನೂ ಅವರ ಶಿಷ್ಯನಾಗಿದ್ದೆನೆಂಬುದು ಹೆಮ್ಮೆಯ ವಿಷಯ.
– ಎಲ್. ಎಸ್. ಶಾಸ್ತ್ರಿ