ಬೆಂಗಳೂರು :
“ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಒಂದು ದಿನವೂ ಕೇಂದ್ರ ಸರ್ಕಾರದ ಬಳಿ ಸಭೆ ಮಾಡದ ಬಿಜೆಪಿ ನಾಯಕರು ನಮ್ಮ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯಿಸಿದರು.
ಮನಮೋಹನ್ ಸಿಂಗ್ ಅವರ ಅವಧಿಗಿಂತ ಈಗ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ;
“ಬಿಜೆಪಿ ನಾಯಕರು ಈ ಹಿಂದಿನ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ, ಈಗ ಅವರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಅವರು ಒಪ್ಪಿಕೊಂಡಂತೆ ಅಲ್ಲವೇ?
ಮನಮೋಹನ್ ಸಿಂಗ್ ಅವರ ಸರ್ಕಾರ ಹೋಗಿ 10 ವರ್ಷಗಳಾಗಿವೆ. ಅವರಿಗೆ ಜ್ಞಾನ ಇರಬೇಕು. ದೇಶದಲ್ಲಿ ವಿದ್ಯಾವಂತರಿಲ್ಲದಿದ್ದರೂ ಪ್ರಜ್ಞಾವಂತರು ಇರಬೇಕು. 10 ವರ್ಷಗಳಿಂದ ದೇಶ ನಿಮ್ಮ ಕೈಗೆ ಅಧಿಕಾರ ಕೊಟ್ಟಿದೆ. ಮಾತೆತ್ತಿದರೆ ಡಬಲ್ ಇಂಜಿನ್ ಎಂದು ಹೇಳುತ್ತಿದ್ದರು. ಇವರು ಒಂದು ದಿನ ರಾಜ್ಯದ ಬರಗಾಲದ ಬಗ್ಗೆ ಮಾತನಾಡಲಿಲ್ಲ.
ಒಂದು ದಿನವೂ ರಾಜ್ಯದ ಹಿತದ ಬಗ್ಗೆ ಕೇಂದ್ರ ಸರ್ಕಾರದ ಬಳಿ ಮಾತನಾಡಿಲ್ಲ. ಈಗ ಮಾತೆತ್ತಿದರೆ ರಾಜ್ಯ ಸರ್ಕಾರ ಬರ ಪರಿಹಾರ ನೀಡಲಿಲ್ಲ ಎನ್ನುತ್ತಿದ್ದಾರೆ.
ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಪ್ರತಿ ರೈತರ ಖಾತೆಗೆ 2 ಸಾವಿರ ಹಾಕಿದ್ದೇವೆ. ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ.
ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿರುವುದರಲ್ಲಿ ಅನುಮಾನವಿಲ್ಲ. ನೀರಾವರಿ ಇಲಾಖೆ ವಿಚಾರಕ್ಕೆ ಬಂದರೆ ಕಳೆದ ವರ್ಷ ಬಜೆಟ್ ನಲ್ಲಿ 5,300 ಕೋಟಿ ಘೋಷಣೆ ಮಾಡಿದ್ದರೋ ಇಲ್ಲವೋ? ಅದರ ಹಣವನ್ನು ಬಿಡುಗಡೆ ಮಾಡಿದ್ದಾರಾ? ಮೆಟ್ರೋ ವಿಚಾರದಲ್ಲಿ ಏನಾದರೂ ಕ್ರಮ ಕೈಗೊಂಡಿದ್ದಾರಾ? ಇಲ್ಲ.
ಈಗ ರಾಜ್ಯದ ಪರವಾಗಿ ಧ್ವನಿ ಎತ್ತದೆ ಬೇರೆ ದಾರಿ ಇಲ್ಲ. ಹೀಗಾಗಿ ನಮ್ಮ ಪ್ರತಿಭಟನೆಗೆ ಕೈಜೋಡಿಸುವಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೂ ಆಹ್ವಾನ ನೀಡುತ್ತೇನೆ.”
ನಿಮ್ಮ ಜೊತೆ ಕೇರಳ ಹಾಗೂ ತೆಲಂಗಾಣ ರಾಜ್ಯ ಕೂಡ ಪ್ರತಿಭಟನೆ ಮಾಡಲಿದೆಯೇ ಎಂದು ಕೇಳಿದಾಗ, “ನಾವು ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳು ಅವರು ಹೋರಾಟ ಮಾಡುತ್ತಾರೆ” ಎಂದು ತಿಳಿಸಿದರು.
ಹೈ ಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕಾಗಿ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪೆರೇಡ್ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅವರು ಏನಾದರೂ ಆರೋಪ ಮಾಡಲಿ. ಅವರು ನಮ್ಮ ನೆನೆಸಿಕೊಳ್ಳುತ್ತಿರಲಿ” ಎಂದು ತಿಳಿಸಿದರು.
ಎಲ್ಲಾ ಗ್ಯಾರಂಟಿಗಿಂತ ಮೋದಿ ಗ್ಯಾರಂಟಿ ಶ್ರೇಷ್ಠ ಎಂಬ ವಿಜಯೇಂದ್ರ ಹೇಳಿಕೆ ಬಗ್ಗೆ ಕೇಳಿದಾಗ, “ಅವರರಗೆ ಏಳು ತಿಂಗಳಿಗೆ ಲಾಟರಿ ಹೊಡೆದು ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರ ತಂದೆಯ ಆಸ್ತಿ ಪಾಲು ಸಿಕ್ಕಂತೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಹೀಗಾಗಿ ಅವರು ಮಾತನಾಡುತ್ತಿದ್ದಾರೆ. ನಾನು ಅವರ ಉತ್ಸಾಹಕ್ಕೆ ಧಕ್ಕೆ ತರುವುದಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ಮೋದಿ ಅವರು ಏನೆಲ್ಲಾ ಮಾತಾಡಿದ್ದರು. ಈಗ ಗ್ಯಾರಂಟಿ ಹೆಸರಲ್ಲಿ ಪ್ರಚಾರ ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.