ಏಳನೇ ಶತಮಾನದ ನಂತರ ಹಂತಹಂತವಾಗಿ ಅರಬ್ ಪ್ರದೇಶಗಳ ಶಿಕ್ಷಣ ಕ್ಷೇತ್ರದಲ್ಲಿ ನಿಧಾನವಾಗಿ ಸಂಚಲನ ಆರಂಭವಾಗಿ ಇಂದು ಅದು ಸಾಕಷ್ಟು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಮಹಿಳೆಯರಿಗೂ ಶೈಕ್ಷಣಿಕ ಕ್ಷೆತ್ರದ ಬಾಗಿಲು ಮುಕ್ತವಾಗಿದೆ. ಒಂದು ಕಾಲದಲ್ಲಿ ಯುರೋಪ್ ಕತ್ತಲ ಯುಗದಲ್ಲಿದ್ದಾಗಲೇ ಇಸ್ಲಾಮಿಕ್ ಜಗತ್ತು ಕಲಿಕಾ ಕೇಂದ್ರವಾಗಿತ್ತೆಂಬುದು ಗಮನಿಸಬೇಕಾದ ಅಂಶ. ಖಗೋಳ ಶಾಸ್ತ್ರ, ಭೌತಶಾಸ್ತ್ರ, ತತ್ವಶಾಸ್ತ್ರ, ಕಲೆ, ವೈದ್ಯಕೀಯ ಕ್ಷೇತ್ರ ಗಳಿಗೆ ಮಹತ್ವದ ಕೊಡುಗೆ ನೀಡಿತ್ತು. ಅದನ್ನು ಸುವರ್ಣಯುಗ ಎನ್ನಲಾಗುತ್ತದೆ. ಮುಸ್ಲಿಂ ವಿದ್ವಾಂಸರು, ವಿಜ್ಞಾನಿಗಳು ಪ್ರವರ್ತಿಸಿದ ವಿಧಾನಗಳು ಆಧುನಿಕ ವಿಜ್ಞಾನದ ಅಡಿಪಾಯ ನಿರ್ಮಿಸಿದರು. ೧೮ ನೇ ಶತಮಾನದವರೆಗೂ ಯುರೋಪಿಯನ್ ವಿಶ್ವವಿದ್ಯಾಲಯಗಳು ಅದನ್ನೇ ಅನುಸರಿಸಿಕೊಂಡು ಬಂದರು.
ಆಧುನಿಕ ಔಪಚಾರಿಕ ಪ್ರಾಥಮಿಕ ಶಿಕ್ಷಣ ಬೆಳವಣಿಗೆ ಕಾಣತೊಡಗಿದ್ದು ೧೯೩೦ ರ ದಶಕದ ನಂತರವೇ. ೧೯೫೧ ರ ವೇಳೆಗೆ ಸೌದಿಯಲ್ಲಿ ೨೨೬ ಶಾಲೆಗಳಿದ್ದವು. ೩೦ ಸಾವಿರ ವಿದ್ಯಾರ್ಥಿಗಳು ಇದ್ದರು. ೧೯೫೪ ರಲ್ಲಿ ಶಿಕ್ಷಣ ಸಚಿವಾಲಯ ಸ್ಥಾಪನೆಯಾಯಿತು. ೧೯೫೭ ರಲ್ಲಿ ಮೊದಲ ವಿವಿ. ಆರಂಭವಾಯಿತು. ಬಾಲಕಿಯರ ಮೊದಲ ಸರ್ಕಾರಿ ಶಾಲೆ ೧೯೬೪ ರಲ್ಲಿ ಸುರುವಾಯಿತು. ಇಂದು ಅಲ್ಲಿ ವಿಶ್ವದ ಅತಿ ದೊಡ್ಡ ಮಹಿಳಾ ವಿಶ್ವವಿದ್ಯಾಲಯವಿದೆ. ಸೌದಿಯ ಆರು ದಶಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಅರ್ಧದಷ್ಟು ಮಹಿಳೆಯರು.
ಸೌದಿಯಲ್ಲಿ ಶಿಕ್ಷಣ ಎಲ್ಲ ಹಂತಗಳಲ್ಲೂ ಉಚಿತ. ಶುಲ್ಕರಹಿತ. ಪಠ್ಯಗಳೂ ಉಚಿತ. ಶಿಶುವಿಹಾರದ ನಂತರ ಆರು ವರ್ಷ ಪ್ರಾಥಮಿಕ, ೩ ವರ್ಷ ಮಧ್ಯಂತರ- ಪ್ರೌಢಶಾಲೆ. ಮಧ್ಯಂತರದ ನಂತರ ಮುಂದಿನ ನಿರ್ಧಾರ ಮಕ್ಕಳದು. ವಯಸ್ಕರ ಸಿಕ್ಷಣ , ಅಂಗವಿಕಲರ ಶಿಕ್ಷಣಗಳಿಗೂ ವಿಶೇಷ ಗಮನ ನೀಡಲಾಗುತ್ತಿದೆ. ೧೯೫೭ ರಲ್ಲಿ ಮೊದಲ ವಿವಿ. ೨೧ ವಿದ್ಯಾರ್ಥಿಗಳಿಂದ ಆರಂಭವಾಗಿದ್ದು ಇಂದು ೬೫ ಸಾವಿರ ವಿದ್ಯಾರ್ಥಿಗಳನ್ನು ಹೊಂದಿದೆ. ಅತಿದೊಡ್ಡ ವಿವಿ. ಕಿಂಗ್ ಅಬ್ದುಲ್ಲಜೀಜ ವಿವಿ ೭೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಮದೀನಾದಲ್ಲಿ ೧೯೬೧ ರಲ್ಲೇ ಇಸ್ಲಾಮಿಕ್ ಶಿಕ್ಷಣದ ವಿವಿ ಸ್ಥಾಪನೆಯಾಗಿದ್ದು ೧೦೦ ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು ಅಲ್ಲಿ ಇಸ್ಲಾಂ ಅಧ್ಯಯನ ನಡೆಸುತ್ತಾರೆ. ಇತರ ಎಲ್ಲ ಪ್ರಕಾರಗಳ ಶಿಕ್ಷಣವೂ ಇಂದು ಸೌದಿಯಲ್ಲಿ ಲಭ್ಯ. ತಾಂತ್ರಿಕ, ವೈಜ್ಞಾನಿಕ, ವೈದ್ಯಕೀಯ, ಕೃಷಿ, ಪೆಟ್ರೋಲಿಯಂ, ಪಶುವೈದ್ಯ, ವಾಸ್ತುಶಿಲ್ಪ, ಉದ್ಯಮ ಇತ್ಯಾದಿ ವಿಷಯಗಳಿಗೆ ಮೀಸಲಾದ ಪ್ರತ್ಯೇಕ ವಿವಿಗಳಿವೆ.
ಈಗಿನ ಸೌದಿ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ಮಹತ್ವ ನೀಡುತ್ತದೆಂದರೆ ಸರಕಾರದ ದ್ವಿತೀಯ ಆದ್ಯತೆ ಶಿಕ್ಷಣ ಕ್ಷೇತ್ರಕ್ಕೆ. ಅದಕ್ಕಾಗಿ ಬಜೆಟ್ ಒಟ್ಟು ಮೊತ್ತದಲ್ಲಿ ನಲ್ಲಿ ಶೇ ೮.೮ ರಷ್ಟು ಮೊತ್ತ ಮೀಸಲಾಗಿಡಲಾಗುತ್ತದೆ. ವಿದೇಶಗಳಲ್ಲಿ ವಾಸಿಸುವ ಸೌದಿಗಳಿಗಾಗಿ ಬ್ರಿಟನ್, ಯುಎಸ್. , ಜರ್ಮನಿ ಮೊದಲಾದೆಡೆ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗಿದೆ. ಜಾಗತಿಕ ವಿಶ್ವವಿದ್ಯಾಲಯಗಳ ಅಗ್ರ ಪಂಕ್ತಿಯಲ್ಲಿ ಬರಲು ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ವಿಷನ್-೨೦೩೦ ರಲ್ಲೂ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯವಾದ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಪ್ರತಿಯೊಂದಕ್ಕೂ ಶಿಕ್ಷಣದ ತಳಹದಿ ಗಟ್ಟಿಯಾಗಬೇಕೆಂಬುದನ್ನು ಸೌದಿ ಸರಕಾರ ಅರಿತುಕೊಂಡು ಆ ಪ್ರಕಾರ ಉತ್ತೇಜನ ನೀಡುತ್ತಿದೆ. ಇಂದು ಮಹಿಳೆಯರು ಬಹಳ ದೊಡ್ಡ ಸಂಖ್ಯೆಯಲ್ಲಿ ಶಿಕ್ಷಣ ಕ್ಷೆತ್ರದಲ್ಲಿ ಕಾಲಿಡುತ್ತಿದ್ದು ಎಲ್ಲ ಕ್ಷೇತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಆ ದೇಶದ ಶೀಘ್ರಗತಿಯ ಬೆಳವಣಿಗೆಗೆ ಹಾದಿ ಮಾಡಿಕೊಡುತ್ತಿದೆ .
✒️ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಬೆಳಗಾವಿ