ಬೆಂಗಳೂರು :
ಎಲ್ ನಿನೋ ಪರಿಣಾಮದಿಂದ ಭಾರತವು ಈ ವರ್ಷ ವಿಪರೀತ ಬೇಸಿಗೆಯ ಶಾಖವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಹವಾಮಾನಶಾಸ್ತ್ರಜ್ಞರು ಹೇಳಿದ್ದಾರೆ, ಜೂನ್ ವೇಳೆಗೆ ಎಲ್ ನಿನೋ ಪರಿಸ್ಥಿತಿಗಳು ಕ್ರಮೇಣ ತಟಸ್ಥ ಸ್ಥಿತಿಗೆ ಪರಿವರ್ತನೆಗೊಳ್ಳುತ್ತವೆ ಮತ್ತು ಸೆಪ್ಟೆಂಬರ್ ವೇಳೆಗೆ ಲಾ ನಿನಾಕ್ಕೆ ಇದು ದಾರಿ ಮಾಡಿಕೊಡುತ್ತವೆ ಎಂದು ಹವಾಮಾನ ಶಾಸ್ತ್ರಜ್ಷರು ಭವಿಷ್ಯ ನುಡಿದಿದ್ದಾರೆ.
ಎಲ್ ನಿನೋ ತಟಸ್ಥ ಸ್ಥಿತಿಗೆ ಪರಿವರ್ತನೆಯಾಗುವುದನ್ನು ಏಪ್ರಿಲ್-ಜೂನ್ (73% ಅವಕಾಶ) ವರೆಗೆ ನಿರೀಕ್ಷಿಸಲಾಗಿದೆ. ಈ ವರ್ಷ ಬೇಸಿಗೆ ಹೆಚ್ಚು ಕಠಿಣವಾಗಿರುತ್ತದೆ ಎಂದು ನಾವು ನಿರೀಕ್ಷಿಸಬಹುದು. ಶಾಖದ ಅಲೆಗಳು ಆಗಾಗ್ಗೆ ಹೆಚ್ಚಾಗುತ್ತವೆ ಮತ್ತು ತೀವ್ರವಾಗಿರುತ್ತವೆ. ವಸಂತ ಋತುವು ಬಹಳ ಕಡಿಮೆ ಇರುತ್ತದೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ, ಎಲ್ ನಿನೊ ಕಠಿಣ ಬೇಸಿಗೆ ಮತ್ತು ದುರ್ಬಲ ಮಾನ್ಸೂನ್ಗೆ ಸಂಬಂಧಿಸಿದೆ. ಲಾ ನಿನಾ ಬಲವಾದ ಮಾನ್ಸೂನ್ ಮತ್ತು ಸರಾಸರಿಗಿಂತ ಹೆಚ್ಚಿನ ಮಳೆ ಮತ್ತು ಶೀತ ಚಳಿಗಾಲಕ್ಕೆ ಸಂಬಂಧಿಸಿದೆ.
ಗಣನೀಯವಾಗಿ ಹೆಚ್ಚು ಉಷ್ಣದ ಬೇಸಿಗೆಯನ್ನು ನಿರೀಕ್ಷಿಸುವ ಇನ್ನೊಂದು ಕಾರಣವೆಂದರೆ ಎತ್ತರದ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಹಿಮದ ಹೊದಿಕೆ ಇರುವುದು ಎಂಬ ಕಾರಣವನ್ನೂ ನೀಡಲಾಗಿದೆ.
ಕರ್ನಾಟಕದಲ್ಲಿ ಬಿರು ಬೇಸಿಗೆಯ ಪರಿಚಯ ಫೆಬ್ರವರಿಯಲ್ಲೇ ಆಗುತ್ತಿದ್ದು, ಬೆಂಗಳೂರಿನಲ್ಲಿ ತಾಪಮಾನ ಮಂಗಳವಾರ 32 ಡಿಗ್ರಿಗೆ ಏರಿಕೆಯಾಗಿದೆ.
ಮಾರ್ಚ್ 1 ಅನ್ನು ಅಧಿಕೃತವಾಗಿ ಬೇಸಿಗೆಯ ಆರಂಭವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಫೆಬ್ರವರಿ ಮೂರನೇ ವಾರದ ನಂತರ ಬೇಸಿಗೆಯ ಆರಂಭದ ಲಕ್ಷಣಗಳು ಕಾಣು ಆರಂಭವಾಗುತ್ತದೆ. ಆದರೆ, ಈ ವರ್ಷ ಫೆಬ್ರವರಿ ಮೊದಲನೇ ವಾರದಲ್ಲಿಯೇ ಬೇಸಿಗೆಯ ಆರಂಭಿಕ ಲಕ್ಷಣಗಳು ಗೋಚರಿಸಲಾರಂಭಿಸಿದೆ. ಇದಕ್ಕೆ ಎಲ್ ನೀನೋ ಕಾರಣವೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕರ್ನಾಟಕದಲ್ಲಿ ಫೆಬ್ರವರಿ ಮೊದಲನೇ ವಾರ ಮುಗಿಯುವ ವೇಳೆಗೆ ಹಲವು ಜಿಲ್ಲೆಗಳಲ್ಲಿ ತಾಪಮಾನದ ಹೆಚ್ಚಳವು ಬೇಸಿಗೆಯ ಪರಿಚಯ ನೀಡುತ್ತಿವೆ. ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ತಾಪಮಾನ 32 ಡಿಗ್ರಿಗೆ ಏರಿಕೆಯಾಗಿದೆ.
ರಾಜ್ಯದಲ್ಲಿ ಬೇಸಿಗೆ ಅವಧಿಗಿಂತ ಮುಂಚೆಯೇ ಕಾಣಿಸಿಕೊಳ್ಳಲು ಎಲ್ ನಿನೊ ಕಾರಣ ಎಂದು ಹೇಳಲಾಗಿದೆ. ಎಲ್ ನಿನೋ ಈ ಹಿಂದೆ ರಾಜ್ಯದ ಮಳೆ ಕೊರತೆ ಕಾರಣವಾಗಿತ್ತು. ಬೇಸಿಗೆ ಕಾಲ ಇನ್ನೂ ಆರಂಭವಾಗಿಲ್ಲ. ಆದರೂ, ಈಗಾಗಲೇ ಬೇಸಿಗೆಯ ರೀತಿಯಲ್ಲಿ ಬಿಸಿಲು ಹೆಚ್ಚಾಗಿದೆ. ಬೆಂಗಳೂರಿನಲ್ಲಿ ತಾಪಮಾನ 2 ಡಿಗ್ರಿಗಳಷ್ಟು (33.3°) ಹೆಚ್ಚಾಗಿದೆ. ಉತ್ತರ ಒಳಭಾಗ ಮತ್ತು ಕರಾವಳಿ ಕರ್ನಾಟಕದಲ್ಲಿಯೂ ತಾಪಮಾನ ಸಾಮಾನ್ಯಕ್ಕಿಂತ 2° ಹೆಚ್ಚಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33.1° ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 18.1° ಸೆಲ್ಸಿಯಸ್ ಇದೆ. ಇದು, ಈ ಸಮಯದಲ್ಲಿ ಸರಾಸರಿ ಗರಿಷ್ಠ ತಾಪಮಾನ 30.9° ಸೆಲ್ಸಿಯಸ್ ಮತ್ತು ಕನಿಷ್ಠ 17.6° ಸೆಲ್ಸಿಯಸ್ ಆಗಿರಬೇಕಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.