ಬೆಳ್ತಂಗಡಿ : ಹಿಂದೂಗಳು ಕಟ್ಟುವ ತೆರಿಗೆ ಹಣ ಹಿಂದೂಗಳ ಅಭಿವೃದ್ಧಿಗೆ ಮಾತ್ರ ಉಪಯೋಗವಾಗಬೇಕು. ಈ ಹಣ ಬೇರೆ ಧರ್ಮಗಳ ಜನರಿಗೆ ಸೇರುವುದು ಹಿಂದೂಗಳಿಗೆ ಆಗುವ ಅನ್ಯಾಯ. ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ ಪೂಂಜ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಈ ನೀತಿ ಈ ಆರ್ಥಿಕ ವರ್ಷದಿಂದಲೇ ಜಾರಿಯಾಗಬೇಕು ಎಂದು ಅವರು ಹೇಳಿದ್ದಾರೆ. ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುವ ಮೂಲಕ ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ಕೇಂದ್ರ ಸರಕಾರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿದೆ. ಆದರೆ ಶಾಸಕ ಹರೀಶ ಪೂಂಜ ಅವರ ಉದ್ದೇಶ ಬೇರೆ ಇದೆ. ನಾವು ಮಾತನಾಡುವ ವಿಷಯದಲ್ಲಿ ಸತ್ಯಾಂಶ ಇದ್ದು ಹರೀಶ ಪೂಂಜ ಅದನ್ನು ಒಪ್ಪಿಕೊಳ್ಳಲಿ. ಅದನ್ನು ಬಿಟ್ಟು ಮೊಂಡುವಾದ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.
ಆದರೆ, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರು, ಹರೀಶ ಪೂಂಜ ಅವರ ಸಾಮಾಜಿಕ ಜಾಲತಾಣದ ಪೋಸ್ಟಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ದೇಶ ರಾಮರಾಜ್ಯ ಆಗಬೇಕು. ಎಲ್ಲರಿಗೂ ಸಮಾನತೆ ಸಿಗಬೇಕು. ಅಂಬೇಡ್ಕರ್ ರಚಿಸಿದ ಸಂವಿಧಾನದ ಪ್ರಕಾರ ಎಲ್ಲವೂ ನಡೆಯಬೇಕು. ಈ ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ಕಟ್ಟುತ್ತಿದ್ದಾರೆ. ಹಿಂದೂಗಳ ತೆರಿಗೆ ಹಣ ಬಳಸಿ ಅಲ್ಪಸಂಖ್ಯಾತರಿಗೆ ಕೋಟಿ ಕೋಟಿ ಹಣ ನೀಡಲಾಗುತ್ತದೆ. ಈ ಬಾರಿ ಬಜೆಟ್ ನಲ್ಲಿ 10 ಸಾವಿರ ಕೋಟಿ ರೂಪಾಯಿ ಹಣವನ್ನು ಮುಸ್ಲಿಮರ ಅಭಿವೃದ್ಧಿಗೆ ತೆಗೆದಿಡುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ತೆರಿಗೆ ಹಣವನ್ನು ಎಲ್ಲರಿಗೂ ಒಂದೇ ರೀತಿ ಹಂಚಬೇಕು ಎಂದು ಅವರು ತಿಳಿಸಿದ್ದಾರೆ.
ಸಮರ್ಥನೆ :
ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂದು ಹೇಳಿಕೆ ಕೊಟ್ಟಿದ್ದ ಬೆಳ್ತಂಗಡಿ ಶಾಸಕ ಹರೀಶ ಪೂಂಜಾ, ನನ್ನ ಹೇಳಿಕೆಯನ್ನು ನಾನು ಸಮರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ಸಾಮಾನ್ಯ ರೀತಿ ಖಂಡನೆ ಮಾಡಿದರೆ ಅವರಿಗೆ ಅರ್ಥ ಆಗಲ್ಲ. ಹಾಗಾಗಿ ಈ ರೀತಿಯ ಹೇಳಿಕೆ ನೀಡಿ ಮನವರಿಕೆ ಮಾಡಲು ಪ್ರಯತ್ನಿಸಿದ್ದೇನೆ. ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂಬುವುದನ್ನು ನಾನು ಸಮರ್ಥನೆ ಮಾಡುತ್ತೇನೆ ಎಂದಿದ್ದಾರೆ.
ಹಿಂದೂಗಳ ತೆರಿಗೆಯನ್ನು ಹಿಂದೂಗಳಿಗೆ ಅಭಿವೃದ್ಧಿ ಮಾಡಿ ಅಂತಾ ಕೇಳೋದ್ರಲ್ಲಿ ತಪ್ಪೇನಿದೆ? ಉತ್ತರ- ದಕ್ಷಿಣ ಭಾರತ ಅಂತಾ ವಿಭಜನೆ ಮಾಡಲು ಕಾಂಗ್ರೆಸ್ ಹೊರಟಿದೆ. ಹಿಂದೂಗಳ ತೆರಿಗೆಯನ್ನು ಲೆಕ್ಕ ಹಾಕೋಕೆ ಕಷ್ಟವೇ ಇಲ್ಲ. ಪ್ರತಿಯೊಬ್ಬನ ಹೆಸರಿನ ಮುಂದೆ ಅವನ ಧರ್ಮವೂ ಉಲ್ಲೇಖವಾಗಿರುತ್ತದೆ. ಸಿಂಗಲ್ ಟ್ಯಾಪ್ ನಲ್ಲಿ ತೆರಿಗೆಯನ್ನು ವಿಭಾಗಿಸಬಹುದಾಗಿದೆ. ಕಾಂಗ್ರೆಸ್ ತೆರಿಗೆ ವಿಚಾರ ಒಂದು ಕ್ಷುಲ್ಲಕ ವಿಚಾರವಾಗಿದ್ದು, ಈ ವಿಚಾರವನ್ನು ಇಟ್ಟುಕೊಂಡು ದೇಶ ವಿಭಜನೆಯನ್ನು ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ವಿರುದ್ದ ಹರೀಶ್ ಪೂಂಜಾ ಕಿಡಿ ಕಾರಿದ್ದಾರೆ.