*ಡಾ.ಲಕ್ಷ್ಮೀ ಜಿ. ಪ್ರಸಾದ್

 

ಕಂಬಳ…

ತುಳುನಾಡು ಅಂದ ತಕ್ಷಣ ಎಲ್ಲರಿಗೆ ನೆನಪಾಗುವುದು ಕಂಬಳದ ವಿಚಾರ.ಆದರೆ ಕಂಬಳ ಇನ್ನು ಮುಂದೆ ಇತಿಹಾಸದ ಪುಟಕ್ಕೆ ಸೇರಿ ಕೇವಲ ನೆನಪು ಮಾತ್ರವಾಗಿ ಉಳಿಯುತ್ತದೆ !ಪ್ರಾಣಿ ಹಿಂಸೆ ಇದೆ ಎಂಬ ಕಾರಣಕ್ಕೆ ಇದನ್ನು ಪ್ರಸ್ತುತ ನಿಷೇಧಿಸಲಾಗಿದೆ . ಸಾಮಾನ್ಯವಾಗಿ ಕೆಸರುಗದ್ದೆಯಲ್ಲಿ ಕೋಣಗಳ ಓಟದ ಸ್ಪರ್ಧೆಗೆ ಕಂಬಳ ಎನ್ನುತ್ತಾರೆ. ಆದರೆ ಇದು ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ. ಇದೊಂದು ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆಯೂ ಆಗಿದೆ.ಇದರಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆಗಳು ಸೇರಿಕೊಂಡಿವೆ.ಇದೊಂದು ವೈಭವದ ಆಚರಣೆ ಕೂಡ.ಕಂಬಳಕ್ಕೆ ಅದರದ್ದೇ ಆದ ಸಾಂಸ್ಕೃತಿಕ ,ಸಾಮಾಜಿಕ ,ಧಾರ್ಮಿಕ ಮಹತ್ವ ಇದೆ .ಕಂಬಳದಲ್ಲಿ ಕೋಣಗಳನ್ನು ಓಡಿಸುವುದು ಬಹುಮಾನ ಪಡೆಯುವುದು ಒಂದು ಪ್ರತಿಷ್ಠೆಯ ವಿಚಾರ ಕೂಡ .ಕಂಬಳದ ಓಟದ ಕೋಣಗಳನ್ನು ಸಾಕುವುದು ಒಂದು ಘನತೆ ,ಅವುಗಳನ್ನು ಸಾಕಲು ಸಾಕಷ್ಟು ಆರ್ಥಿಕ ಬಲ ಕೂಡ ಬೇಕು .

ಆಕರ್ಷಕ ಕೋಣಗಳ ಓಟ
.ಅದೊಂದು ಬಹಳ ಆಕರ್ಷಕವಾದ ಕೋಣಗಳ ಓಟ .ಕೋಣಗಳನ್ನು ಚೆನ್ನಾಗಿ ಅಲಂಕರಿಸಿ ಕೊಂಬು ವಾಲಗದೊಂದಿಗೆ ಮೆರವಣಿಗೆ ಮಾಡಿ ಕಂಬಳ ಗದ್ದೆಯ ಬಳಿ ಕರೆ ತರುತ್ತಾರೆ .ಚೆನ್ನಾಗಿ ಎಳೆದ ಕೋಣಗಳ ಮೈ ಮಿರಮಿರನೆ ಮಿಂಚುತ್ತದೆ .ಅವುಗಳು ಕೂಡ ಅತ್ಯುತ್ಸಾಹದಿಂದ ಬದಿಯಲ್ಲಿರುವ ಮರವನ್ನು ಕೊಂಬಿನಿಂದ ತಿವಿಯುತ್ತವೆ .ನೆಲದ ಮಣ್ಣನ್ನು ಗೋರಿ ತಲೆ ಹಣೆಯ ಮೇಲೆ ಮೆತ್ತಿಕೊಳ್ಳುತ್ತವೆ ಇವುಗಳನ್ನು ಹಿಡಿತದಲ್ಲಿರಿಸುವುದು ಕೂಡ ಒಂದು ಕಲೆ .ಇವುಗಳ ಮೂಗಿಗೆ ಬಳ್ಳಿ ಸುರಿದು ಮೂಗು ದಾರ ಹಾಕುತ್ತಾರೆ .ಇಲ್ಲವಾದಲ್ಲಿ ಇವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಾಧ್ಯವಿಲ್ಲ .ಕೋಣಗಳನ್ನು ಓಡಿಸುವಾತ ಕೂಡ ಕಿರುಗಚ್ಚೆ ಹಾಕಿ ತಲೆಗೆ ರುಮಾಲು ಸುತ್ತಿ ತಯಾರಾಗಿರುತ್ತಾರೆ ಕೋಣಗಳು ಓದಿಕೊಂಡು ಬರುವಾಗ ಜನರ ಬೊಬ್ಬೆ ಕೇಕೆ ಆನಂದಗಳನ್ನು ನೋಡಿಯೇ ಸವಿಯಬೇಕು .ಕೆಲವೊಮ್ಮೆ ಓಡಿಸುವಾತನ ಹಿಡಿತಕ್ಕೆ ಸಿಕ್ಕದೆ ಯರ್ರಾಬಿರ್ರಿ ಓಡುವ ಕೋಣಗಳು ನೋಡಲು ಸೇರಿದ ಜನರ ಕಡೆ ಓಡಿ ಬಂದು ಜನರನ್ನು ದಿಕ್ಕಾಪಾಲಾಗಿ ಓಡಿಸುವುದೂ ಕೂಡಾ ಉಂಟು!ಕೋಣಗಳು ಓಡುವಾಗ ನೀರು ಎತ್ತರಕ್ಕೆ ಚಿಮ್ಮುವುದನ್ನು ನೋಡುವುದು ಒಂದು ವಿಶಿಷ್ಟ ಅನುಭವನ್ನು ಕೊಡುತ್ತದೆ .
ಕಂಬಳದ ಪ್ರಾಚೀನತೆ
ಉಡುಪಿ ತಾಲೂಕಿನ ಕೆಂಜೂರಿನ ಸಮೀಪದ ಕರ್ಜೆ ಎಂಬಲ್ಲಿ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂಧಿಸಿದ ಕ್ರಿ.ಶ.1200 (ಶಕ ವರ್ಷ 1281)ರ ಶಾಸನದಲ್ಲಿ. “ಸುಗ್ಗಡಿಯ ಕಂಬಳಕ್ಕೆ ಎರಡು ಎತ್ತು ಕರೆತರಬಹುದು” ಎಂದು ಇದರಲ್ಲಿ ಉಲ್ಲೇಖವಿದೆ. ಕ್ರಿ.ಶ.1402ರ ಬಾರಕೂರು ಶಾಸನದಲ್ಲಿ ‘ಆ ಗದ್ದೆಯ ಕೆಳಗಿನ ಕಂಬಳ ಬಗ್ಗೆ’ ಎಂದು ಉಲ್ಲೇಖವಿದೆ. ಕ್ರಿ.ಶ.1421ರ ಬಾರಕೂರು ಶಾಸನದಲ್ಲಿ “ದೇವರು ಸಾವಂತನ ಕಂಬಳ ಗದ್ದೆಯ ಮೇಲೆ” ಎಂದು ಕಂಬಳಗದ್ದೆಯನ್ನು ಉಲ್ಲೇಖಿಸಲಾಗಿದೆ. ಕ್ರಿ.ಶ.1424ರ ಬಾರಕೂರು ಶಾಸನದಲ್ಲಿ “ಹೊತ್ತಾಗಿ ಮಾಡಿದ ಕಂಬಳ ಗದ್ದೆ” ಎಂದಿದೆ. ಕ್ರಿ.ಶ.1437ರ ಉಡುಪಿ ಶಾಸನವು “ಮೂಲವಾಗಿ ಕೊಡಬಾಳು ಕಂಬಳ ಗದ್ದೆ ಕೊಯಿಲ್ ಹದಿನಾರು” ಎಂದಿದೆ. ಕ್ರಿ.ಶ.1482ರ ಕೊಲ್ಲೂರು ಶಾಸನದಲ್ಲಿ “ಅವರಿಗೆ ಒಬ್ಬ ಬಾಳು ಕಂಬಳ ಗದ್ದೆ” ಎಂದು ಉಲ್ಲೇಖವಿದೆ. ಕ್ರಿ.ಶ.1521ರ ಬಾರಕೂರು ಶಾಸನದಲ್ಲಿ ಕಂಬಳ ಗದ್ದೆಯಲಿ ನಡುಹುಣಿ” ಎಂದು ಉಲ್ಲೇಖಿಸಿದೆ. ಕ್ರಿ.ಶ.1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಶಾಸನದಲ್ಲಿ “ನನ್ನ ಕಂಬಲ ಗದ್ದೆಯಿಂದ ನಡೆಸಬಹುದು” ಎಂಬಲ್ಲಿ ಕಂಬಳಗದ್ದೆಯ ಉಲ್ಲೇಖವಿದೆ. ಹೀಗೆ ಕಂಬಳಕ್ಕೆ 800 -9೦೦ ವರ್ಷಗಳ ಇತಿಹಾಸವಿದೆ.
ಕಂಬಳ ಪದದ ನಿಷ್ಪತ್ತಿ
ಕಂಪ ಎಂಬುದಕ್ಕೆ ಕೆಸರು ಎಂಬರ್ಥವಿದೆ. ಆದ್ದರಿಂದ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಪ+ಪೊಲ>ಕಂಬುಲ ಆಯಿತು ಎಂದು ಹೇಳುತ್ತಾರೆ.9 ಕಳ ಎಂಬುದಕ್ಕೆ ಸ್ಪರ್ಧೆಯ ವೇದಿಕೆ, ಕಣ ಎಂಬರ್ಥವಿರುವುದರಿಂದ ಕಂಪದ ಕಳ>ಕಂಬಳ ಆಗಿರಬಹುದು ಎಂದು ಅಮೃತ ಸೋಮೇಶ್ವರ ಹಾಗು ಬಿ.ಎ. ವಿವೇಕ ರೈ ಹೇಳಿದ್ದಾರೆ. ಕಂಬಳ ಗದ್ದೆಯಲ್ಲಿ ಕೊನೆಗೆ ‘ಪೂಕರೆ’ ಎಂಬ ಕಂಬವನ್ನು ನೆಡುವುದರಿಂದ ಕಂಬದ ಕಳ>ಕಂಬಳ ಆಗಿರಬಹುದು ಎಂದು ಚಿತ್ತರಂಜನ ದಾಸ್ ಶೆಟ್ಟಿಯವರು ಹೇಳಿದ್ದಾರೆ.
ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ, ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಕಂಬಳ ಆಗಿರಬಹುದು. ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದಾಗ ಳ>ಡಗಳು ಹಲವೆಡೆ ಪರಸ್ಪರ ಬದಲಾಗಿರುವುದು ಕಂಡುಬರುತ್ತದೆ. ಆದ್ದರಿಂದ ಕಂಪಕಂಡ>ಕಂಬಡ>ಕಂಬಳ ಎಂಬ ನಿಷ್ಪತ್ತಿ ಹೆಚ್ಚು ಹೊಂದುತ್ತದೆ ಎನ್ನಬಹುದು.
ಕಂಬಳದ ಮಹತ್ವ
ತುಳುನಾಡಿನಲ್ಲಿ ಕಂಬಳ ಎನ್ನುವುದು ಘನತೆಯ ವಿಚಾರವಾಗಿತ್ತು. ಅರಸರು ನಡೆಸಲೇ ಬೇಕಾದ ಆಚರಣೆಯಾಗಿತ್ತು. ಕಂಬಳಕ್ಕೆ ಸಂಬಂಧಿಸಿದಂತೆ ಅನೇಕ ಹೋರಾಟಗಳು ನಡೆದಿವೆ ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ.
ಸಾಮಾನ್ಯವಾಗಿ ‘ಕಂಬಳ’ ಎಂದರೆ ‘ಕೋಣಗಳ ಓಟದ ಸ್ಪರ್ಧೆ’ ಎಂದು ಜನರು ಭಾವಿಸುತ್ತಾರೆ. ಆದರೆ ಕಂಬಳ ಎಂದರೆ ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ ಕೇವಲ ಕೋಣಗಳ ಓಟದ ಸ್ಪರ್ಧೆ ಮಾತ್ರ ಅದಾಗಿದ್ದರೆ ಕಂಬಳಕ್ಕೆ ಇಷ್ಟು ಮಹತ್ವ ಇರುತ್ತಿರಲಿಲ್ಲ. ಕಂಬಳಕ್ಕೆ ಸಂಬಂಧಿಸಿದಂತೆ ಹೋರಾಡುವ ಅಗತ್ಯವೂ ಇರುತ್ತಿರಲಿಲ್ಲ. ದಂಡಿಗೆ ಹೋದ ಒಡೆಯರು ಗೆದ್ದು ಬರುವಾಗ ಪೂಕರೆ ಕಂಬವನ್ನು ತಂದರೆಂದು ಹೇಳುವ ಉರಲ್ ಇದೆ .
ಒಡೆಯನ ಅಂತಸ್ತಿಗೆ ಅನುಗುಣವಾಗಿ ಗಣೆ ಹಾಕುವುದು ಕೂಡ ಪೂಕರೆ ಒಡೆತನದ ಸೂಚಕವಾಗಿದೆ ಎಂಬುದನ್ನು ಸಮರ್ಥಿಸುತ್ತದೆ
ಕಂಬಳ ಒಂದು ವಿಶಿಷ್ಟ ಜನಪದ ಆಚರಣೆ. ತುಳುನಾಡಿನಲ್ಲಿ ತುಂಬ ಮಹತ್ವವನ್ನು ಪಡೆದ ಆಚರಣೆಯಾಗಿದೆ. ಈ ಬಗ್ಗೆ ಡಾ. ಪುರುಷೋತ್ತಮ ಬಿಳಿಮಲೆಯವರು “ಕಂಬಳ ಕೇವಲ ಓಟದ ಕೋಣಗಳ ಸ್ಪರ್ಧೆಯೂ ಅಲ್ಲ. ಜನಪದರ ಮನೋರಂಜನೆಯ ಸಾಮಾಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮವುಳ್ಳ ಫಲವಂತಿಕೆಯ ಆಚರಣೆ ಎಂಬುದು ಖಚಿತವಾಗುತ್ತದೆ” ಎಂದು ಹೇಳಿದ್ದಾರೆ. ಪೂಕರೆ ಕಂಬದ ವಿಚಾರದಲ್ಲಿ ಯುದ್ಧ ಕೂಡ ಆಗುತ್ತಿತ್ತು.
ಉಳುವ ಕೋಣಗಳಿಗಿಂತ ಭಿನ್ನವಾಗಿ ಸಾಕುವ ಗಿರ್ದೆರ್ಲು ಎಂದು ಕರೆಯುವ ಕಂಬಳ ಓಟದ ಕೋಣಗಳನ್ನು ಉಳಲು ಉಪಯೋಗಿಸುವುದಿಲ್ಲ. ಇವುಗಳಿಗೆ ಹುರುಳಿಯಂಥ ಉತ್ತಮ ಆಹಾರ ನೀಡಿ ಸಾಕುತ್ತಾರೆ. ಪ್ರತಿದಿನ ಕೋಣಗಳನ್ನು ಸ್ವಲ್ಪ ದೂರ ಓಡಿಸಿ, ನೀರಿಗಿಳಿಸಿ, ಈಜಾಡಿಸಿ ಇವುಗಳಿಗೆ ವ್ಯಾಯಾಮ ಮಾಡಿಸಿ, ಸ್ಪರ್ಧೆಯಲ್ಲಿ ಓಡುವಂತೆ ಬಲಿಷ್ಠವಾಗಿ ತರಬೇತುಗೊಳಿಸುತ್ತಾರೆ.ಕೊಂಬುಗಳಿಗೆ, ಮುಖಕ್ಕೆ, ವಿವಿಧ ಆಭರಣ, ಕನ್ನಡಿ ಇತ್ಯಾದಿ ತೊಡಿಸಿ ಬೆನ್ನಿಗೆ ನಯವಾದ ಆಕರ್ಷಕವಾದ ಬಟ್ಟೆಯನ್ನು ಹೊದಿಸಿ ಕೊರಳಿಗೆ ನೊಗ ಮತ್ತು ಅಡ್ಡಹಲಗೆಯನ್ನು ಹುರಿಹಗ್ಗದಿಂದ ಗಟ್ಟಿಯಾಗಿ ಕಟ್ಟಿ ಮೂಗುದಾರ ಹಾಕಿ ತಲೆಪಟ್ಟ ಕಟ್ಟಿ ಸಿಂಗರಿಸಿದ, ಓಟದ ಕೋಣಗಳನ್ನು ಕಂಬಳಕ್ಕೆ ಕೊಂಬು, ಕಹಳೆ, ಸುಡುಮದ್ದಿನ ವೈಭವದೊಂದಿಗೆ ಮೆರವಣಿಗೆ ಮಾಡಿ ತರುತ್ತಾರೆ.ಕಂಬಳದ ಕೋಣಗಳ ಮೈ ಮಿರಮಿರನೆ ಮಿಂಚುತ್ತದೆ .ಅವುಗಳು ಕೂಡ ಅತ್ಯುತ್ಸಾಹದಿಂದ ಬದಿಯಲ್ಲಿರುವ ಮರವನ್ನು ಕೊಂಬಿನಿಂದ ತಿವಿಯುತ್ತವೆ .ನೆಲದ ಮಣ್ಣನ್ನು ಗೋರಿ ತಲೆ ಹಣೆಯ ಮೇಲೆ ಮೆತ್ತಿಕೊಳ್ಳುತ್ತವೆ.ಇವುಗಳನ್ನು ಹಿಡಿತದಲ್ಲಿರಿಸುವುದು ಕೂಡ ಒಂದು ಕಲೆ .ಇವುಗಳ ಮೂಗಿಗೆ ಬಳ್ಳಿ ಸುರಿದು ಮೂಗು ದಾರ ಹಾಕುತ್ತಾರೆ .ಇಲ್ಲವಾದಲ್ಲಿ ಇವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಾಧ್ಯವಿಲ್ಲ .
ಕೋಣಗಳನ್ನು ಒಂದೊಂದಾಗಿ ಓಡಿಸುವ ಕ್ರಮ ಇಲ್ಲ.ಎರಡು ಕೋಣಗಳನ್ನು ಒಟ್ಟಿಗೆ ನಿಲ್ಲಿಸಿ ಕೊರಳಿಗೆ ನೊಗ ಕಟ್ಟಿಯೇ ಓಡಿಸುವ ಕ್ರಮ ಬೆಳೆದು ಬಂದಿದೆ. ಕೋಣಗಳು ಬಲಿಷ್ಟವಾಗಿರುವಂತೆ ಓಡಿಸುವಾತ ನಿರ್ದೇಶಿಸಿದಂತೆ ಗುರಿಯೆಡೆಗೆ ಸಾಗುವ ವಿಧೇಯತೆಯೂ ಕೋಣಗಳಿಗೆ ಇರ ಬೇಕಾಗುತ್ತದೆ. ಕಣೆ ಹಲಗೆ ಮತ್ತು ಅಡ್ಡ ಹಲಗೆಯ ಓಟದಲ್ಲಿ ಓಡಿಸುವಾತ ಮತ್ತು ಕೋಣಗಳ ಕೌಶಲ್ಯ ಬಹಳ ಮುಖ್ಯವಾದುದು .
ಕೋಣಗಳನ್ನು ಓಡಿಸುವುದು ಸುಲಭದ ವಿಚಾರವಲ್ಲ. ಕೆಲವೊಮ್ಮೆ ಓಡಿಸುವಾತನ ಹಿಡಿತಕ್ಕೆ ಸಿಕ್ಕದೆ ಯರ್ರಾಬಿರ್ರಿ ಓಡುವ ಕೋಣಗಳು ನೋಡಲು ಸೇರಿದ ಜನರ ಕಡೆ ಓಡಿ ಬಂದು ಜನರನ್ನು ದಿಕ್ಕಾಪಾಲಾಗಿ ಓಡಿಸುವುದೂ ಕೂಡಾ ಉಂಟು.ಇದಕ್ಕಾಗಿ ವಿಶೇಷ ಪರಿಣತಿ ಪಡೆದಿರಬೇಕಾಗುತ್ತದೆ. ಕೋಣಗಳನ್ನು ಓಡಿಸುವವರನ್ನು ‘ಗಿಡೆಪುನಾಯೆ’ ಎನ್ನುತ್ತಾರೆ. ಇವರು ಕೋಣಗಳನ್ನು ಓಡಿಸುವ ತಾಂತ್ರಿಕ ಕೌಶಲ್ಯಗಳನ್ನು ತಿಳಿದಿರುವುದು ಮಾತ್ರವಲ್ಲದೆ ಕೋಣಗಳೊಂದಿಗೆ ಆತ್ಮೀಯತೆಯನ್ನು ಬೆಳಸಿಕೊಂಡಿರಬೇಕಾಗುತ್ತದೆ. ಕೋಣಗಳನ್ನು ಓಡಿಸುವಾತ ಕಿರುಗಚ್ಚೆ ಹಾಕಿ ತಲೆಗೆ ರುಮಾಲು ಸುತ್ತಿ ತಯಾರಾಗಿರುತ್ತಾರೆ
ಕೋಣಗಳನ್ನು ಓಡಿಸಲು ಸಿದ್ಧಪಡಿಸಿದ ಜಾಗವನ್ನು ಕಂಬಳಕರೆ ಎನ್ನುತ್ತಾರೆ. ಕೆಲವೆಡೆ ಜೋಡುಕರೆ ಇರುತ್ತವೆ. ಅದನ್ನು ಜೋಡುಕರೆ ಕಂಬಳ ಎನ್ನುತ್ತಾರೆ. ಇದರಲ್ಲಿ ಕಳದ ಮಧ್ಯಭಾಗದಲ್ಲಿ ಉದ್ದಕ್ಕೆ ದಿಣ್ಣೆಯನ್ನು ನಿರ್ಮಿಸಿ ಏಕಕಾಲದಲ್ಲಿ ಎರಡು ಜೊತೆ ಕೋಣಗಳನ್ನು ಓಡಿಸುವ ವ್ಯವಸ್ಥೆ ಇರುತ್ತದೆ. ಸ್ಪರ್ಧೆಯಲ್ಲಿ ನಿರ್ಣಾಯಕರು ಕೋಣಗಳ ಓಟದ ನಿಯಮಗಳಿಗನುಗುಣವಾಗಿ ತೀರ್ಪು ನೀಡುತ್ತಾರೆ. ಕೋಣಗಳ ಯಜಮಾನರ ಹೆಸರುಗಳನ್ನು ಧ್ವನಿವರ್ಧಕದ ಮೂಲಕ ಹೇಳಿದಂತೆ ಕೋಣಗಳು ಸರದಿ ಪ್ರಕಾರ ಓಡುತ್ತವೆ. ಓಡಿ ಬಂದು ಮಂಜೊಟ್ಟಿಯನ್ನು ಏರಿ ನಿಲ್ಲುತ್ತವೆ.ಕೋಣಗಳು ಓಡುವಾಗ ನೀರು ಎತ್ತರಕ್ಕೆ ಚಿಮ್ಮುವುದನ್ನು ನೋಡುವುದು ಒಂದು ವಿಶಿಷ್ಟ ರೋಮಾಂಚಕ ಅನುಭವನ್ನು ಕೊಡುತ್ತದೆ..
ಕಂಬಳ ಕೋಣದ ಅಂಚೆ ಚೀಟಿ
ತನ್ನ ನಾಲ್ಕನೇ ವಯಸ್ಸಿನಿಂದ ಕಂಬಳ ಓಟದಲ್ಲಿ ಓಡುತ್ತಾ 500 ಕ್ಕೂ ಹೆಚ್ಚು ಬಾರಿ ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿರುವ ಕಂಬಳ ಓಟದ ಅನಭಿಷಿಕ್ತ ದೊರೆ ನಾಗರಾಜ ಎಂಬ ಹೆಸರಿನ ಕೋಣ 115 ಬಾರಿ ಬಂಗಾರದ ಪದಕಗಳನ್ನು ಗೆದ್ದು , ತನ್ನನ್ನು ಮಗನಂತೆ ಪೊರೆದ ಒಡೆಯ ಒಡೆಯ ಪಲ್ಯೊಟ್ಟು ಸದಾಶಿವ ಸಾಲಿಯಾನ್ ಅವರಿಗೆ ಕ್ರೀಡಾ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ-2013 ಅನ್ನು ತಂದು ಕೊಟ್ಟಿದೆ.ಕೇಂದ್ರ ಸರಕಾರದ ಅಂಚೆ ಇಲಾಖೆ ಹೊರ ತಂದ ಅಂಚೆ ಚೀಟಿಯಯಲ್ಲಿ ತನ್ನ ಚಿತ್ರದ ಸ್ಥಾನ ಪಡೆದ ಶರವೇಗದ ಸರದಾರ ನಾಗರಾಜನ ಕಂಬಳ ಓಟದ ರೆಕಾರ್ಡ್ ವೇಗ 100 ಮೀಟರ್ ಗೆ 12 ಸೆಕೆಂಡ್ಸ್. ಇದೊಂದು ದಾಖಲೆಯ ಓಟವಾಗಿದೆ .
ಗದ್ದೆಯ ಮದುವೆ
ತುಳುವರಿಗೆ ಗದ್ದೆ ಎಂದರೆ ಬರಿಯ ಬೆಳೆ ಬೆಳೆಯುವ ತಾಣವಲ್ಲ .ಅದನ್ನು ತಮ್ಮಂತೆ ಎಂದು ಭಾವಿಸುವ ಅನನ್ಯ ಆತ್ಮೀಯತೆ ಅವರಿಗೆ ಆದ್ದರಿಂದಲೇ ಇಲ್ಲಿ ಗದ್ದೆಗೂ ಮದುವೆ ಇದೆ.. ಗದ್ದೆಯನ್ನು ಉತ್ತು ಬಿತ್ತನೆಗೆ ತಯಾರು ಮಾಡುವುದನ್ನು ಕಂಬಳ ಕೋರಿ ಎನ್ನುತ್ತಾರೆ .ಕಂಬಳ ಕೋರಿಯಂದು ಗದ್ದೆಯಲ್ಲಿ ಪೂಕರೆ ಕಂಬವನ್ನು ನೆಡುವ ಸಂಪ್ರದಾಯ ಪೂಕರೆ ಕಂಬಳಗಳಲ್ಲಿದೆ ಪೂಕರೆ ಕಂಬಳ ನೇಮಕ್ಕೆ ಬಹಳ ಧಾರ್ಮಿಕ ಮಹತ್ವವಿದೆ. ಸುಮಾರು ಮೂವತ್ತಡಿ ಎತ್ತರದ ಅಡಿಕೆಯ ಮರಕ್ಕೆ ರಂಧ್ರಗಳನ್ನು ಕೊರೆದು ಸಲಿಕೆಗಳನ್ನು ಸಿಕ್ಕಿಸಿ, ಹನ್ನೆರಡು ತ್ರಿಕೋನಾಕಾರದ ನೆಲೆಗಳನ್ನು ಮಾಡಿ ಕಲಶವನ್ನು ಇಟ್ಟು, ಹಳದಿ ಹೂಗಳಿಂದ, ಕೇಪುಳ ಹೂ ಹಾಗೂ ಪಾದೆಯ ಹೂಗಳ ಮಾಲೆಯಿಂದ ಅಲಂಕರಿಸಿದ ಕಂಬವನ್ನು “ಪೂಕರೆ ಕಂಬ” ಎನ್ನುತ್ತಾರೆ. ಪೂಕರೆ ಹಾಕುವುದನ್ನು ‘ಕಂಡೊದ ಮದಿಮೆ’ ಅಂದರೆ ಗದ್ದೆಯ ಮದುವೆ ಎನ್ನುತ್ತಾರೆ. ಇಲ್ಲಿ ಸೇಡಿಯಿಂದ ಸಿಂಗರಿಸಿದ ಗದ್ದೆ ಮದುಮಗಳಾದರೆ, ಪೂಕರೆ ಕಂಬವನ್ನು ಮದುಮಗ ಎಂದು ಪರಿಗಣಿಸುತ್ತಾರೆ. ಪೂಕರೆಯ ಕೆಳಗಿನ ಅಂತಸ್ತನ್ನು ‘ತೊಟ್ಟಿಲಗೆಣೆ’ ಎಂದು ಕರೆಯುತ್ತಾರೆ.ಪೂಕರೆ ಕಂಬವನ್ನು ನಾಗಧ್ವಜ ಎನ್ನುತ್ತಾರೆ.
ಮೌಖಿಕ ಪರಂಪರೆ ಹಾಗೂ ಐತಿಹ್ಯಗಳು
ಕಂಬಳಕ್ಕೆ ಸಂಬಂಧಿಸಿದಂತೆ ಅನೇಕ ಹೋರಾಟಗಳು ನಡೆದಿವೆ ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ. ಕಂಬಳಕ್ಕೆ ಸಂಬಂಧಿಸಿದಂತೆ ‘ಈಜೋ ಮಂಜೊಟ್ಟಿಗೋಣ’ವೆಂಬ ಪಾಡ್ದನ ತುಳುನಾಡಿನಲ್ಲಿ ಪ್ರಚಲಿತವಿದೆ. ಬಲಿಯೇಂದ್ರ ಪಾಡ್ದನದಲ್ಲಿಯೂ ಕಂಬಳದ ಉಲ್ಲೇಖವಿದೆ. ಕೋಟಿ-ಚೆನ್ನಯ ಮತ್ತು ಮಂತ್ರಿ ಬುದ್ಯಂತನ ನಡುವೆ ದ್ವೇಷ ಬೆಳೆಯಲು ಕಂಬಳ ಆಚರಣೆಯ ವಿವಾದವೇ ಮೂಲಕಾರಣ ಆಗಿರುವುದನ್ನು ಕೋಟಿ-ಚೆನ್ನಯ್ಯ ಪಾಡ್ದನ ತಿಳಿಸುತ್ತದೆ.
ಕಾಸರಗೋಡಿನ ಪುಳ್ಕೂರು ಬಾಚ ಎಂಬ ಜಟ್ಟಿ ಕಂಬಳಕೋಣಗಳೊಂದಿಗೆ ಏಕಾಂಗಿಯಾಗಿ ಹೋರಾಡಿ, ಕೋಣಗಳನ್ನು ಹಿಡಿತಕ್ಕೆ ತೆಗೆದುಕೊಂಡು ಜನರನ್ನು ರಕ್ಷಿಸಿದನೆಂಬ ಕಥೆ ಪ್ರಚಲಿತವಿದೆ. ಕಾಂತಾಬಾರೆ-ಬೂದಾಬಾರೆ ಎಂಬ ವೀರರು ಕಟಪಾಡಿ ಕಂಬಳವನ್ನು ಕಾಲಿನಿಂದ ಒದ್ದು ವಕ್ರಗೊಳಿಸಿದರೆಂಬ ಸ್ಥಳೀಯ ಐತಿಹ್ಯವಿದೆ. ಪಣಂಬೂರಿನ ಪೂಕರೆ ಕಂಬಳ ತರಲು ಮುಲ್ಕಿಯಿಂದ ಹೋದ ಪ್ರಸಂಗ ಹಾಗೂ ಮಂಜಣ್ಣ ಪೂಕರೆ ಕಂಬವನ್ನು ಕಿತ್ತು ತಂದ ಐತಿಹ್ಯವು ‘ಅಗೋಳಿ ಮಂಜಣ್ಣ’ ಎಂಬ ಹೆಸರಿನಲ್ಲಿ ಪ್ರಚಲಿತವಿದೆ.
ಕೊಕ್ಕಡ ಕಂಬಳಕ್ಕೆ ಸೆಗಣಿ ಹಾಕಬಾರದು ಎಂದಿದೆ. ಅರಿಬೈಲು ಕಂಬಳ ಗದ್ದೆಯಲ್ಲಿ ಜೊಳ್ಳು ಭತ್ತ ಬಿತ್ತಿದರೂ ಬೆಳೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ವಂಡಾರು ಕಂಬಳ ಗದ್ದೆಯ ಸುತ್ತ ಬದುವಿನ ಸುತ್ತ ಬೆಳ್ತಿಗೆ ಅಕ್ಕಿ ಉದುರಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ವಂಡಾರು ಕಂಬಳದ ದಿನ ಕೋಟೇಶ್ವರದ ನೀರು ಕೆಂಪಗಾಗುತ್ತಿತ್ತು ಎಂಬ ಸ್ಥಳ ಐತಿಹ್ಯವಿದೆ.
ವಂಡಾರು ಕಂಬಳದಲ್ಲಿ ಹಿಂದೆ ನರಬಲಿ ಕೊಡುವ ಪದ್ಧತಿ ಇತ್ತೆಂಬ ಬಗ್ಗೆ ಒಂದು ಐತಿಹ್ಯ ಪ್ರಚಲಿತವಿದೆ: ಹೆಚ್ಚಿನ ಎಲ್ಲಾ ಪೂಕರೆ ಕಂಬಳ ಗದ್ದೆಗೆ ಸಂಬಂಧಿಸಿದಂತೆ ಒಂದು ಸಮಾನ ಆಶಯವುಳ್ಳ ಐತಿಹ್ಯ ಪ್ರಚಲಿತವಿದೆ. ಕಂಬಳ ಕೋರಿಯ ಮೊದಲು ಈ ಗದ್ದೆಗಳಲ್ಲಿ ಕುರುಂಟು ಎಳೆಯುವುದಿಲ್ಲ. ರಾತ್ರಿ ಸಂಕಪಾಲನೆಂಬ ಸರ್ಪ ಬಂದು ಈ ಕೆಲಸ ಮಾಡುತ್ತದೆ ಎಂಬ ಐತಿಹ್ಯ ಹೆಚ್ಚಿನ ಗದ್ದೆಗಳಲ್ಲಿ ಪ್ರಚಲಿತವಿದೆ.
ಭೂತಾರಾಧನೆ
ಕಂಬಳದ ಆಚರಣೆಯಲ್ಲಿ ಮೂರು ಮುಖ್ಯ ಅಂಶಗಳಿವೆ. ಮೊದಲನೆಯದು ಕೋಣಗಳ ಓಟದ ಸ್ಪರ್ಧೆಗೆ ಸಂಬಂಧಿಸಿದ ಅಂಶ. ಎರಡನೆಯದು ಫಲವಂತಿಕೆಯ ಆಚರಣೆಗೆ ಸಂಬಂಧಿಸಿದೆ. ಮೂರನೆಯದು ನಾಗ ಹಾಗೂ ಇತರ ದೈವಗಳ ಆರಾಧನೆಗೆ ಸಂಬಂಧಿಸಿದೆ
ಕಂಬಳ ಕೋರಿಯಂದು ಗದ್ದೆಯ ಅಧಿದೈವ ನಾಗ ಬೆರ್ಮೆರ್ ಹಾಗೂ ಕುಟುಂಬದ ದೈವಗಳಿಗೆ ಆರಾಧನೆ ಇರುತ್ತದೆ.ಕಂಬಳದಲ್ಲಿ ಪೂಕರೆ ಹಾಕುವಾಗ ನಾಗ ಬೆರ್ಮೆರ್ ಒಂದಿಗೆ ಎರು ಬಂಟ ಮತ್ತು ಉರವ ಎಂಬ ದೈವಗಳಿಗೆ ಎಲ್ಲೆಡೆ ಆರಾಧನೆ ಇದೆ.
ಒಂದು ವರ್ಷ ಕೋಳ್ಯೂರು ಕಂಬಳದಲ್ಲಿ ಮೂಲದ ಮಾಣಿ ಕೋಣಗಳನ್ನು ಅಡ್ಡಕ್ಕೆ ಓಡಿಸುವ ಬದಲು ನೀಟಕ್ಕೆ ಓಡಿಸುತ್ತಾನೆ. ಆಗ ಕೋಣಗಳು ಅಲ್ಲಿಯೇ ಮಾಯವಾಗುತ್ತವೆ. ಮೂಲದ ಮಾಣಿ ಓಡಿ ಹೋಗಿ ಗದ್ದೆಯ ಬದಿಯ ತೊರೆಗೆ ಹಾರುತ್ತಾನೆ. ಆ ಜಾಗಕ್ಕೆ ‘ರೆಂಜೆಗುಂಡಿ’ ಎನ್ನುತ್ತಾರೆ. ಓಡುವಾಗ ಆತನ ಮುಟ್ಟಾಳೆ ಒಂದು ಕಡೆ ಬೀಳುತ್ತದೆ. ಆ ಜಾಗವನ್ನು ಮುಟ್ಟಾಳೆಕಲ್ಲು ಎನ್ನುತ್ತಾರೆ. ಕೋಣಗಳು ಮಾಯವಾದ ಜಾಗ ಎಂಬಲ್ಲಿ ಕೋಣಗಳು ಮಲಗಿರುವಂತೆ ಕಾಣುವ ಎರಡು ಬಂಡೆಗಲ್ಲುಗಳಿವೆ. ಈ ಕಲ್ಲನ್ನು ಎರುಮಾಜಿನಕಲ್ಲು (ಕೋಣ ಮಾಯವಾದ ಕಲ್ಲು) ಎನ್ನುತ್ತಾರೆ. ಕಂಬಳಸಂಬಂಧಿ ಈಜೋಮಂಜೊಟ್ಟಿಗೋಣ ಪಾಡ್ದನವು ಸತ್ಯದ ಕಂಬಳಕ್ಕೆ ಇಳಿದ ರೆಂಜಲಡಿಬರಿಕೆಯ ಮೂಲದ ಮಾಣಿ ಬಬ್ಬು ಹಾಗೂ ಕೋಣಗಳು ಮಾಯವಾದ ಕಥೆಯನ್ನು ಹೇಳುತ್ತವೆ.. ಅಂದಿನಿಂದ ಕೋಳ್ಯೂರು ಕಂಬಳದಂದು ಗದ್ದೆಗೆ ಕೋಣಗಳನ್ನು ಇಳಿಸುವುದಿಲ್ಲ. ಬದಲಿಗೆ ಎತ್ತುಗಳನ್ನು ಇಳಿಸುತ್ತಾರೆ. ಇಲ್ಲಿ ಮಾಯವಾದ ಮೂಲದ ಮಾಣಿ ಮತ್ತು ಕೋಣಗಳು ಉರವ ಮತ್ತು ಎರು ಬಂಟ ಎಂಬ ದೈವಗಳಾಗಿ ಕಂಬಳ ಗದ್ದೆಯ ಕೋರಿಯಂದು ಆರಾಧಿಸಲ್ಪಡುತ್ತಾರೆ.
ಕಂಬಳ ಕೋರಿಯಂದು ರಾತ್ರಿ ಒಂಜಿ ಕುಂದು ನಲ್ಪ ದೈವಗಳಿಗೆ ಆರಾಧನೆ ಇರುತ್ತದೆ .ಇಲ್ಲಿ ಕುಟುಂಬದ ,ಗ್ರಾಮದ ಮಾಗಣೆಯ ,ಸೀಮೆಯ ಮೂವತ್ತೊಂಬತ್ತು ದೈವಗಳಿಗೆ ಆರಾಧನೆ ಇರುತ್ತದೆ .
. ಕಂಬಳದ ಪ್ರಕಾರಗಳು
ತುಳುನಾಡಿನಲ್ಲಿ ನಾಲ್ಕು ವಿಧದ ಕಂಬಳಗಳು ಪ್ರಚಲಿತವಿದೆ (1) ಪೂಕರೆ ಕಂಬಳ. (2) ಬಾರೆ ಕಂಬಳ (3) ಅರಸು ಮತ್ತು ದೇವರ ಕಂಬಳ (4) ಆಧುನಿಕ ಕಂಬಳ .ಇವುಗಳಲ್ಲಿ ಆಧುನಿಕ ಕಂಬಳ ಹಾಗೂ ಅರಸು ಮತ್ತು ದೇವರ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಇರುತ್ತದೆ. ಬಾರೆ ಕಂಬಳ, ಅರಸು ಮತ್ತು ದೇವರ ಕಂಬಳ ಹಾಗೂ ಪೂಕರೆ ಕಂಬಳಗಳಲ್ಲಿ ಫಲವಂತಿಕೆಯ ಆಚರಣೆಗಳು ಹಾಗೂ ನಾಗ-ಭೂತಾರಾಧನೆಗಳು ಇವೆ.
ಬಾಳೆ ಕಂಬಳದಲ್ಲಿ ಪೂಕರೆಗೆ ಬದಲಾಗಿ ಕಂಬಳ ಗದ್ದೆಯ ನಡುವೆ ಒಂದು ಬಾಳೆಗಿಡವನ್ನು ನೆಡುತ್ತಾರೆ. ಪೂಕರೆ ಕಂಬಳ ಅಥವಾ ದೇವರ ಮತ್ತು ಅರಸು ಕಂಬಳದಂತೆ ಇದರಲ್ಲಿ ವೈಭವದ ಆಚರಣೆಗಳಿಲ್ಲ. ಬಹಳ ಸರಳವಾದ ಆಚರಣೆ ಇದು. ನಿಶ್ಚಿತ ದಿನದಂದು ಮುಗೇರ ಅಥವಾ ನಲಿಕೆಯವರು ಬಂದು ಹೊಂಡ ತೋಡಿ ಹೊಂಡಕ್ಕೆ ಹಾಲು ಹಾಕಿ ಬಾಳೆ ಗಿಡ ನೆಡುತ್ತಾರೆ. ಒಂದು ನಿಶ್ಚಿತ ಸಮಯದ ನಂತರ ಬಾಳೆಗಿಡವನ್ನು ತೆಗೆಯುತ್ತಾರೆ. “ಹಿಂದೆ ಕಂಬಳ ವೈಭವದಿಂದ ನಡೆಯುತ್ತಿತ್ತು. ಈಗ ಸಾಂಕೇತಿಕವಾಗಿ ಬಾಳೆಗಿಡ ಹಾಕುತ್ತಾರೆ” ಎಂದು ಡಾ. ಗಣನಾಥ ಎಕ್ಕಾರು ಅವರು ಅಭಿಪ್ರಾಯಪಟ್ಟಿದ್ದಾರೆ.
ಅತಿ ವೈಭವದಿಂದ ಆಚರಿಸಲ್ಪಡುವ ಅರಸು ಮತ್ತು ದೇವರ ಕಂಬಳಗಳಲ್ಲಿ ಪೂಕರೆ ಕಂಬಳಗಳ ಎಲ್ಲ ಆಚರಣೆಗಳು ಇದರಲ್ಲಿ ಇರುತ್ತವೆ. ಪೂಕರೆ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಇರುವುದಿಲ್ಲ. ಅರಸು ಮತ್ತು ದೇವರ ಕಂಬಳಗಳಲ್ಲಿ ವೈಭವದ ಧಾರ್ಮಿಕ ಆಚರಣೆಗಳೊಂದಿಗೆ ಅದ್ದೂರಿಯ ಕೋಣಗಳ ಓಟದ ಸ್ಪರ್ಧೆ ಕೂಡ ಇರುತ್ತದೆ. ಅರಸು ಮನೆತನದವರು ಈ ರೀತಿಯ ಕಂಬಳಗಳನ್ನು ನಡೆಸುತ್ತಾರೆ. ಇದು ಅತ್ಯಂತ ಜನಪ್ರಿಯ ಆಚರಣೆಯಾಗಿದೆ.
ಆಧುನಿಕ ಕಂಬಳ ಕೋಣಗಳ ಸ್ಪರ್ಧೆಗಾಗಿಯೇ ಮೀಸಲಾದ ಕಂಬಳ. ಇದರಲ್ಲಿ ಇತರ ಕಂಬಳಗಳಂತೆ ಯಾವುದೇ ಆರಾಧನೆ ಅಥವಾ ಆಚರಣೆಗಳು ಇರುವುದಿಲ್ಲ. ಆಧುನಿಕ ಕಂಬಳಗಳು ಇಂಥದ್ದೇ ದಿನ ನಡೆಯಬೇಕು ಇತ್ಯಾದಿಯಾದ ಕಾಲದ ನಿರ್ಬಂಧ ಇರುವುದಿಲ್ಲ. ಈ ಕಂಬಳಗಳು ನಿಜವಾಗಿ ಗದ್ದೆಯಲ್ಲಿ ಇರುವುದಿಲ್ಲ. ಕೋಣಗಳ ಓಟದ ಸ್ಪರ್ಧೆಗಾಗಿಯೇ ಕೃತಕವಾಗಿ ತಯಾರಿಸಿದ ಕಳದಲ್ಲಿ ಇದು ನಡೆಯುತ್ತದೆ. ಮನೋರಂಜನೆ ಇದರ ಮುಖ್ಯ ಉದ್ದೇಶವಾಗಿರುತ್ತದೆ. ಕಾಂತಾವರದ ಸೂರ್ಯಚಂದ್ರ ಕಂಬಳ, ಬಜಗೋಳಿಯ ಲವ-ಕುಶ ಕಂಬಳ, ಮಂಜೇಶ್ವರದ ಜಯ-ವಿಜಯ ಕಂಬಳ ಮೊದಲಾದುವು ಆಧುನಿಕ ಕಂಬಳಗಳಾಗಿವೆ. ಎಪ್ಪತ್ತರ ದಶಕದ ನಂತರ ಇವು ಪ್ರಸಿದ್ಧಿಗೆ ಬಂದವುಗಳಾಗಿವೆ. ಇದರಲ್ಲಿ ಗೆದ್ದ ಕೋಣಗಳಿಗೆ ಬಂಗಾರದ ಪದಕ, ಪ್ರಶಸ್ತಿಗಳನ್ನು ಕೊಡುತ್ತಾರೆ. ಅರಸು ಮತ್ತು ದೇವರಕಂಬಳಗಳಲ್ಲಿ ಕೂಡ ಕೋಣಗಳ ಓಟದ ಸ್ಪರ್ಧೆ ಇರುತ್ತದೆ.

ಆಧುನಿಕ ಕಂಬಳದ ಓಟದ ಸ್ಪರ್ಧೆಗಳು
ಆಧುನಿಕ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆಯು ಮುಖ್ಯವಾಗಿ ನಾಲ್ಕು ವಿಭಾಗಗಳಲ್ಲಿರುತ್ತವೆ. ಕೋಣಗಳ ಓಟದ ಸ್ಪರ್ಧೆಯಲ್ಲಿ ಸೀನಿಯರ್ ಮತ್ತು ಜೂನಿಯರ್ ಎಂದು ವಯಸ್ಸನ್ನು ಆಧರಿಸಿ ಎರಡು ವಿಭಾಗಗಳಿರುತ್ತವೆ. ಕೋಣಗಳ ವಯಸ್ಸನ್ನು ಹಲ್ಲುಗಳ ಆಧಾರದಲ್ಲಿ ನಿರ್ಧಾರ ಮಾಡುತ್ತಾರೆ.
ಆಧುನಿಕ ಕಂಬಳದ ಸ್ಪರ್ಧೆಯ ನಾಲ್ಕು ವಿಭಾಗಗಳು (1) ಅಡ್ಡಹಲಗೆ (2) ನೇಗಿಲ ಓಟ (3) ಹಗ್ಗದ ಓಟ (4) ಕಣೆ ಹಲಗೆ

ಅಡ್ಡ ಹಲಗೆ:
ಇದನ್ನು ತುಳುವಿನಲ್ಲಿ ಅಡ್ಡಪಲಾಯಿ ಎಂದು ಕರೆಯುತ್ತಾರೆ. ಹೆಸರಿನಲ್ಲಿಯೇ ಸೂಚಿಸಿರುವಂತೆ ಕೋಣಗಳ ಹಿಂಭಾಗದಿಂದ ಎಳೆದುಕೊಂಡು ಹೋಗುವಂತೆ ಒಂದು ಮರದ ಹಲಗೆಯನ್ನು ಕಟ್ಟುತ್ತಾರೆ. ಕೋಣಗಳ ಹೆಗಲಿಗೆ ಕಟ್ಟಿದ ನೊಗಕ್ಕೆ ಉದ್ದವಾದ ಗೋರುಹಲಗೆಯನ್ನು ಕಟ್ಟುತ್ತಾರೆ. ಓಡಿಸುವಾತನು ತನ್ನೆರಡು ಕಾಲುಗಳನ್ನು ಹಲಗೆಯಲ್ಲಿಟ್ಟುಕೊಳ್ಳುತ್ತಾನೆ. ಆಧಾರಕ್ಕಾಗಿ ಕೈಯಲ್ಲಿ ಕೋಣಗಳ ಬಾಲವನ್ನು ಹಿಡಿದಿರುತ್ತಾನೆ. ಇದರಲ್ಲಿ ಓಡಿಸುವಾತನಿಗೆ ಸಾಕಷ್ಟು ಕೌಶಲ್ಯ ಬೇಕು. ಇಲ್ಲವಾದಲ್ಲಿ ಸಮತೋಲನ ತಪ್ಪಿ ಕೆಳಗೆ ಬಿದ್ದುಹೋಗುತ್ತಾರೆ. ಆಗ ಕೋಣಗಳು ದಿಕ್ಕುತಪ್ಪಿ ಚಲ್ಲಾಪಿಲ್ಲಿಯಾಗಿ ಓಡಿ, ನೆರೆದ ಪ್ರೇಕ್ಷಕರನ್ನು ಕೆಡವಿ ಓಡುವ ಪ್ರಸಂಗಗಳೂ ನಡೆಯುತ್ತವೆ. ಆದ್ದರಿಂದ ಆ ವಿಭಾಗದಲ್ಲಿ ಸ್ಪರ್ಧಿಸುವ ಕೋಣಗಳು ಹೆಚ್ಚಿರುವುದಿಲ್ಲ. ಇದರಲ್ಲಿ ಓಟದ ವೇಗದ ಆಧಾರದಲ್ಲಿ ತೀರ್ಪು ನೀಡುತ್ತಾರೆ.
ನೇಗಿಲ ಓಟ:
ತುಳುವಿನಲ್ಲಿ ಇದಕ್ಕೆ ನಾಯೆರ್ದವು (ನಾಯೆರ್=ನೇಗಿಲು) ಎನ್ನುತ್ತಾರೆ. ಇದರಲ್ಲಿ ಕೋಣಗಳ ಹೆಗಲಿನ ನೊಗಕ್ಕೆ ಉಳುವಾಗ ಕಟ್ಟುವಂತೆ ನೇಗಿಲನ್ನು ಕಟ್ಟುತ್ತಾರೆ. ಉಳುಮೆಯ ನೇಗಿಲಿಗಿಂತ ಸರಳವಾದ ಹಗುರವಾದ ನೇಗಿಲನ್ನು ಓಟದಲ್ಲಿ ಬಳಸುತ್ತಾರೆ. ಓಡಿಸುವವನು ನೇಗಿಲನ್ನು ನೆಲದಿಂದ ಮೇಲೆತ್ತದೆಯೇ ಕೋಣಗಳನ್ನು ಓಡಿಸಬೇಕು. ಇದರಲ್ಲಿಯೂ ವೇಗದ ಆಧಾರದಲ್ಲಿ ಬಹುಮಾನ ನೀಡುತ್ತಾರೆ.
ಹಗ್ಗದ ಓಟ:
ತುಳುವಿನ “ಬಲ್ಲುದ ಗಿಡಪುನ” ಹಗ್ಗದ ಓಟವಾಗಿದೆ (ಬಳ್ಳು=ಹಗ್ಗ). ಇದರಲ್ಲಿ ಕೋಣಗಳಿಗೆ ಕಟ್ಟಿದ ನೊಗದ ಮಧ್ಯೆ ಒಂದು ಹಗ್ಗವನ್ನು ಬಿಗಿಯುತ್ತಾರೆ. ಕೋಣ ಓಡಿಸುವಾತ ಆ ಹಗ್ಗವನ್ನು ಹಿಡಿದುಕೊಂಡು ಕೋಣಗಳನ್ನು ಓಡಿಸಬೇಕು. ಈ ಸ್ಪರ್ಧೆಯಲ್ಲಿ ಕೋಣಗಳಷ್ಟೇ ವೇಗದಲ್ಲಿ ಓಡಿಸುವಾತನೂ ಓಡಬೇಕಾಗುತ್ತದೆ. ಈ ಸ್ಪರ್ಧೆಯಲ್ಲಿ ಹಲಗೆ, ನೇಗಿಲಿನಂತಹ ಭಾರದ ನಿರ್ಬಂಧಕಗಳು ಇಲ್ಲದ ಕಾರಣ ಕೋಣಗಳು ಅತ್ಯಂತ ವೇಗವಾಗಿ ಓಡುತ್ತವೆ. ಅನೇಕ ಕೋಣಗಳ ಜೊತೆಯನ್ನು ಒಟ್ಟಿಗೆ ಓಡಿಸುತ್ತಾರೆ. ಯಾವ ಕೋಣಗಳು ಮೊದಲು ಮಂಜೊಟ್ಟಿಯನ್ನು ತಲುಪುತ್ತವೆಯೋ ಆ ಕೋಣಗಳನ್ನು ಗೆದ್ದ ಕೋಣಗಳೆಂದು ಘೋಷಿಸಿ ಬಹುಮಾನ ನೀಡುತ್ತಾರೆ. ಮಂಜೊಟ್ಟಿ ಎಂದರೆ ಓಟದ ಕೋಣಗಳು ಓಡಿ ಬಂದು ಗುರಿ ತಲುಪುವ ಜಾಗ. ಕೋಣಗಳು ಗದ್ದೆಗೆ ಇಳಿಯುವ ಇಳಿಜಾರಾದ ಭಾಗವನ್ನು ಕೂಡ “ಮಂಜೊಟ್ಟಿ” ಎನ್ನುತ್ತಾರೆ.
ಕಣೆ ಹಲಗೆಯ ಓಟ:
ಇದು ಅತ್ಯಂತ ಪ್ರಸಿದ್ಧವಾದ ಕೋಣಗಳ ಓಟದ ಸ್ಪರ್ಧೆ. ಮನಮೋಹಕವಾದುದು ಕೂಡ. ಈ ಸ್ಪರ್ಧೆಯು ವಿಶಿಷ್ಟವಾದುದಾಗಿದೆ. ಇತರ ಕಂಬಳ ಓಟದ ಸ್ಪರ್ಧೆಗಳಲ್ಲಿ ಕೋಣಗಳ ಓಟದ ವೇಗ ಆಧಾರವಾಗಿದೆ. ಆದರೆ ಕಣೆಹಲಗೆ ಓಟದ ಸ್ಪರ್ಧೆಯಲ್ಲಿ ಮೇಲೆ ಕಟ್ಟಿದ ನಿಶಾನೆಗೆ ನೀರು ಹಾರಿಸುವ ಮೂಲಕ ಸ್ಪರ್ಧೆ ನಡೆಯುತ್ತದೆ. ಇದರಲ್ಲಿ ಕಂಬಳ ಗದ್ದೆಯ ಓಟದ ಕಳದ ಎರಡೂ ಬದಿಗಳಲ್ಲಿ ಆರೂವರೆ ಕೋಲು ಹಾಗೂ ಏಳೂವರೆ ಕೋಲು ಎತ್ತರದಲ್ಲಿ ಎರಡು ಮೂರು ಮೀಟರ್ ಅಗಲದ ಬಿಳಿ ಬಟ್ಟೆಯನ್ನು ಕಟ್ಟುತ್ತಾರೆ. ಇದನ್ನು ನಿಶಾನೆ ಎನ್ನುತ್ತಾರೆ. ಯಾವ ಕೋಣಗಳು ನಿಶಾನೆಗೆ ನೀರು ಹಾಯಿಸುತ್ತವೆಯೋ ಅವುಗಳಿಗೆ ಬಹುಮಾನ ನೀಡುತ್ತಾರೆ. ನಿಶಾನೆಯ ಜಾಗಕ್ಕೆ ನೀರು ಹಾಯಿಸಲು ಕೋಣ ಓಡಿಸುವವನಿಗೆ ತುಂಬ ಪರಿಣತಿ ಬೇಕು. ನಿಶಾನೆಯ ಸಮೀಪಕ್ಕೆ ಬಂದಾಗ ಆತ ಹಲಗೆಯ ಮೇಲೆ ಹಾರಿ ನೀರು ಹಾಯುವಂತೆ ಮಾಡುತ್ತಾನೆ. ಒಂದು ಜೊತೆ ಕೋಣಗಳು ಕೂಡ ನಿಶಾನೆಯ ಜಾಗಕ್ಕೆ ನೀರು ಹಾಯಿಸದಿದ್ದರೆ ಯಾರಿಗೂ ಬಹುಮಾನವಿಲ್ಲ. ನಿಶಾನೆಗೆ ನೀರು ಹಾಯಿಸಿದ ಎಲ್ಲ ಕೋಣಗಳಿಗೂ ಬಹುಮಾನ ನೀಡುತ್ತಾರೆ. ಇದು ಮನಮೋಹಕ ಓಟವಾದುದರಿಂದ ಇದಕ್ಕೆ ಮಹತ್ವ ಹೆಚ್ಚು.