ಬೆಂಗಳೂರು : ಬಂಜಾರ ಸಮುದಾಯ ಸ್ವಾಭಿಮಾನಿಗಳಾಗಿ, ಸ್ವತಂತ್ರವಾಗಿ ಒಂದು ಕಡೆ ನೆಲೆಸಿ ಅಭಿವೃದ್ಧಿ ಕಾಣುವಂತೆ ಪ್ರೇರೇಪಿಸಿದವರು ಸಂತ ಸೇವಾಲಾಲ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಮೊದಲು ಆದೇಶಿದ್ದೇ ನಮ್ಮ ಸರ್ಕಾರ. ಬಾಕಿ ಉಳಿದಿರುವ ತಾಂಡಾಗಳನ್ನೂ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಎನ್ನುವ ಸ್ಪಷ್ಟ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದೇನೆ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ನಮ್ಮ ಸರ್ಕಾರ ಇದ್ದಾಗಲೇ ಸರ್ಕಾರವೇ ಸೇವಲಾಲ್ ಜಯಂತಿ ಆಚರಿಸಲು ಆದೇಶಿಸಿದ್ದೆವು. ಸೇವಾಲಾಲ್ ಅವರು ಒಂದು ಜಾತಿ, ಸಮುದಾಯಕ್ಕೆ ಸೇರಿದವರಲ್ಲ. ಅವರು ಮನುಷ್ಯ ಸಮಾಜದ ಬೆಳಕು. ಬಂಜಾರ ಸಮುದಾಯ ವಿದ್ಯಾವಂತರಾಗಿ, ಸ್ವಾಭಿಮಾನಿಗಳಾಗಿ ಬದುಕಲು ಪ್ರೇರಣೆ ಆದ ದಾರ್ಶನಿಕ ಸೇವಾಲಾಲ್ ಅವರನ್ನು ಸರ್ಕಾರವೇ ಮುಂದೆ ಗೌರವಿಸಬೇಕು ಎನ್ನುವ ಉದ್ದೇಶದಿಂದಲೇ ಕಾಂಗ್ರೆಸ್ ಸರ್ಕಾರ ಸೇವಲಾಲ್ ದಿನಾಚರಣೆಯನ್ನು ಆರಂಭಿಸಿತು ಎಂದು ವಿವರಿಸಿದರು.

ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿಗೆ ಈ ಸರ್ಕಾರದಲ್ಲೂ ಅಗತ್ಯ ಅನುದಾನ ಒದಗಿಸಲಾಗುವುದು. ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೂ ಅಗತ್ಯ ಅನುದಾನ ನೀಡಿದ್ದೆ ಎಂದರು.ವಾಸಿಸಿರುವವನೇ ಮನೆಯ ಒಡೆಯ ಎನ್ನುವ ಕಾನೂನು ತಂದಿದ್ದು ನಮ್ಮ ಸರ್ಕಾರ. ಇದರಿಂದ ತಾಂಡಾಗಳಲ್ಲಿ ನೆಲೆಸಿದ್ದ ಬಂಜಾರ ಸಮುದಾಯಕ್ಕೆ ಸಾಕಷ್ಟು ಅನುಕೂಲವಾಯಿತು ಎಂದರು.

ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅವರ ದಿವ್ಯ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.