12ನೇ ಶತಮಾನದಲ್ಲಿ ಸಾಮಾಜಿಕ ಮತ್ತು ಲಿಂಗ ಸಮಾನತೆಗಾಗಿ ಮತ್ತು ವರ್ಗಬೇಧ ಹಾಗೂ ವರ್ಣಬೇಧ ವಿರುದ್ಧವಾಗಿ ಶೋಷಿತ ವರ್ಗದ ಜನರಲ್ಲಿ ಆತ್ಮಸ್ಥೈರ್ಯವನ್ನು ತುಂಬಿ, ಸಮಾಜೋಧಾರ್ಮಿಕ ಕ್ರಾಂತಿಯನ್ನು ಮಾಡಿದ ಶ್ರೇಯಸ್ಸು ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ. ಜಗತ್ತಿನಲ್ಲಿ ಪ್ರಜಾಪ್ರಭುತ್ವಕ್ಕೆ ಅನುಭವ ಮಂಟಪ ಸ್ಥಾಪನೆ ಮೂಲಕ ಬುನಾದಿಯನ್ನು ಶ್ರೀ ಬಸವೇಶ್ವರರು ಹಾಕಿರುವುದು ಕನ್ನಡಿಗರು ಮತ್ತು ಭಾರತೀಯರ ಹೆಮ್ಮೆಯಾಗಿದೆ. ಇಂತಹ ಅಪೂರ್ವ ವ್ಯಕ್ತಿತ್ವದ ವಿಶ್ವಗುರು ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಎಲ್ಲಾ ಸರ್ಕಾರಿ ಕಛೇರಿಗಳಲ್ಲಿರುವ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಭಾವ ಚಿತ್ರದಲ್ಲಿ ವಿಶ್ವಗುರು ಬಸವಣ್ಣ – ಸಾಂಸ್ಕೃತಿಕ ನಾಯಕ ಎಂದು ಮುದ್ರಿಸಲಾಗುವುದು.
ಇವನಾರವ ಇವನಾರವ ಎಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ
– ಸಾಂಸ್ಕೃತಿಕ ನಾಯಕ ಬಸವಣ್ಣ
345. 12ನೇ ಶತಮಾನದಲ್ಲಿ ಬಸವಾದಿ ಶರಣರು ಸಮ ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿದರು. ಇವರು ತಮ್ಮ ವಚನ ಸಾಹಿತ್ಯದ ಮೂಲಕ ಕಾಯಕ – ದಾಸೋಹದ ತತ್ವವನ್ನು ಪ್ರಸಾರ ಮಾಡಿದರು. ಈ ಹಿನ್ನೆಲೆಯಲ್ಲಿ ಶರಣರ ಜೀವನ ಚರಿತ್ರೆ, ಅವರು ನಡೆದು ಬಂದ ದಾರಿ ಮತ್ತು ವಚನ ಸಾಹಿತ್ಯ ಕುರಿತು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
346. ಬಸವಣ್ಣನವರ ಬದುಕು, ಸಂದೇಶ, ಚಿಂತನೆಯನ್ನು ವ್ಯಾಪಕವಾಗಿ ಪ್ರಚುರಪಡಿಸುವ ನಿಟ್ಟಿನಲ್ಲಿ ಸರ್ವ ಧರ್ಮ ಸಂಸತ್ತನ್ನು ಬಸವ ಜಯಂತಿಯಂದು ಆಯೋಜಿಸಲಾಗುವುದು.
347. ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯ ಅಭಿವೃದ್ಧಿಗೆ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು.
348. ಬಸವಣ್ಣ ಹಾಗೂ ಇತರ ಶರಣರ ವಚನಗಳನ್ನು ವಿಶ್ವಕ್ಕೆ ಪರಿಚಯಿಸುವ ವಚನ ಸಂಗ್ರಹಾಲಯ/ವಚನ ಮಂಟಪವನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುವುದು.
349. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ-50 ಅಭಿಯಾನದಡಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ವರ್ಷಪೂರ್ತಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ.
350. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ಎಲ್ಲಾ ಕಛೇರಿಗಳು, ಅಂಗಡಿ-ಮುಂಗಟ್ಟುಗಳು, ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಅಳವಡಿಸಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದಡಿ ಜಾರಿಗೆ ತರಲಾಗುವುದು.
351. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗಡಿಭಾಗದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡ ಭಾಷೆ ಅಭಿವೃದ್ಧಿ ಮಾಡಲಾಗುವುದು.
352. ತುಳು, ಕೊಡವ, ಬ್ಯಾರಿ ಮತ್ತು ಕೊಂಕಣಿ ಕರ್ನಾಟಕದ ಪ್ರಾದೇಶಿಕ ಭಾಷೆಗಳಾಗಿದ್ದು, ಅವುಗಳ ಅಭಿವೃದ್ಧಿಗಾಗಿ ಅಕಾಡೆಮಿಗಳ ಮೂಲಕ ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಪ್ರೋತ್ಸಾಹಿಸಲಾಗುವುದು.
353. ಅಳಿವಿನಂಚಿನಲ್ಲಿರುವ ಜಾನಪದ ಕಲಾಪ್ರಕಾರಗಳಾದ ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟ, ಕರಗ ಮುಂತಾದವುಗಳ ಪುನರುಜ್ಜೀನಕ್ಕಾಗಿ ತರಬೇತಿ ಮತ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುವುದು.
354. ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರ ಕಲೆ ಮತ್ತು ಸಂಸ್ಕೃತಿಯನ್ನು ಗುರುತಿಸಿ, ಉಳಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಲೆಮಾರಿ ಸಂಸ್ಕೃತಿ ಉತ್ಸವವನ್ನು ಆಯೋಜಿಸಲಾಗುವುದು.
355. ರಂಗಭೂಮಿಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸ್ಥಾಪಿಸಲಾಗಿರುವ ರಂಗಾಯಣಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಉತ್ತೇಜನ ನೀಡಲಾಗುವುದು.
356. ಭಾರತದ ಪ್ರಸಿದ್ಧ ಸಾಮಾಜಿಕ ಮತ್ತು ರಾಜಕೀಯ ಚಿಂತಕರುಗಳಾದ ನಾರಾಯಣ ಗುರುಗಳು, ಜ್ಯೋತಿಬಾ ಫುಲೆ, ಪೆರಿಯಾರ್ ರಾಮಸ್ವಾಮಿ, ರಾಮ ಮನೋಹರ ಲೋಹಿಯಾ ಹಾಗೂ ಬಾಬು ಜಗಜೀವನರಾಮ್ ರವರ ಬರಹಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟಿಸಲಾಗುವುದು.
357. ಸಂತ ಕವಿ ಕನಕದಾಸ ಅಧ್ಯಯನ ಕೇಂದ್ರದ ಮೂಲಕ ತತ್ವಪದ, ಕೀರ್ತನ ಸಾಹಿತ್ಯ ಮತ್ತು ಭಕ್ತಿ ಚಳವಳಿ ಸೇರಿದಂತೆ ಸಾಹಿತ್ಯ ಸಮೀಕ್ಷೆ, ಸಂಗ್ರಹಣೆ, ಪ್ರಕಟಣೆ ಮತ್ತು ಪ್ರಸಾರ ಕಾರ್ಯಗಳನ್ನು ಕೈಗೊಳ್ಳಲು ಒಂದು ಕೋಟಿ ರೂ. ಒದಗಿಸಲಾಗುವುದು.
358. ತತ್ವಪದಕಾರರು ಮತ್ತು ಸೂಫಿಗಳ ಬದುಕು ಮತ್ತು ಸಂದೇಶಗಳ ಅಧ್ಯಯನ ಕೈಗೊಳ್ಳಲು ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಮತ್ತು ಶಿವಯೋಗಿ ಸಿದ್ಧರಾಮೇಶ್ವರರವರ ಬದುಕು-ಬರಹ ಕುರಿತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠಗಳನ್ನು ಸ್ಥಾಪಿಸಲಾಗುವುದು.
359. ತ್ರಿಪದಿಗಳ ಮೂಲಕ ಜೀವನಸಾರವನ್ನು ಹೇಳಿದ ವಚನಕಾರ ಸರ್ವಜ್ಞನ ಸ್ಮಾರಕವನ್ನು ಹಿರೇಕೆರೂರು ತಾಲ್ಲೂಕಿನಲ್ಲಿ ಅಭಿವೃದ್ಧಿಪಡಿಸಲಾಗುವುದು.
360. ಸಾಹಿತ್ಯ, ನಾಟಕ, ಜನಪದ ಕಲೆ, ನೃತ್ಯ, ಸಂಗೀತ ಸೇರಿದಂತೆ ಸಂಸ್ಕೃತಿಯ ವಿವಿಧ ಪ್ರಕಾರಗಳ ತರಬೇತಿ, ಪ್ರದರ್ಶನ ಮತ್ತು ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದ ಅಭಿವೃದ್ಧಿಗಾಗಿ ಅಗತ್ಯ ನೆರವು ನೀಡಲಾಗುವುದು.
361. ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಸ್ಮಾರಕವನ್ನು ನಿರ್ಮಿಸಲಾಗುವುದು.
*ಯುವ ಸಬಲೀಕರಣ ಮತ್ತು ಕ್ರೀಡೆ*
362. ಕಳೆದ ಸಾಲಿನ ಆಯವ್ಯಯದಲ್ಲಿ ಕ್ರೀಡಾಪಟುಗಳಿಗೆ ಪೊಲೀಸ್ ಮತ್ತು ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಹುದ್ದೆಗಳನ್ನು ಮೀಸಲಿಡಲಾಗುವುದೆಂದು ಘೋಷಿಸಲಾಗಿತ್ತು. ಪ್ರಸಕ್ತ ಸಾಲಿನಿಂದ ಇತರೆ ಇಲಾಖೆಗಳ ನೇಮಕಾತಿಯಲ್ಲಿಯೂ ಶೇ.2ರಷ್ಟು ಹುದ್ದೆಗಳನ್ನು ಮೀಸಲಿಡಲಾಗುವುದು.
363. ಬೆಂಗಳೂರಿನ ಉತ್ತರ ತಾಲ್ಲೂಕಿನಲ್ಲಿ ಲಭ್ಯವಿರುವ ಅಂದಾಜು 70 ಎಕರೆ ನಿವೇಶನದಲ್ಲಿ ಅತ್ಯಾಧುನಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಮುಚ್ಛಯವನ್ನು ಒಳಗೊಂಡ ಕ್ರೀಡಾ ನಗರವನ್ನು (Sports City) ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು.
364. ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ 04 ಸ್ಥಳಗಳಲ್ಲಿ ಬಹುಕ್ರೀಡಾ ಸೌಲಭ್ಯಗಳನ್ನೊಳಗೊಂಡ ಅತ್ಯಾಧುನಿಕ ಕ್ರೀಡಾ ಸಂಕೀರ್ಣಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು.
365. ರಾಜ್ಯದ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು Rifle Shooting Association, Hockey Karnataka, Amateur Boxing Association, Archery Association, Athletic Association, Kayaking and Canoeing Academy, Cycling Academy Vijayapura ಹಾಗೂ Fencing Association ಗಳಿಗೆ ಒಟ್ಟಾರೆ 12 ಕೋಟಿ ರೂ. ಅನುದಾನ ನೀಡಲಾಗುವುದು.
366. ರಾಜ್ಯದ ಕ್ರೀಡಾಪಟುಗಳಿಗೆ ಅತ್ಯುನ್ನತ ಸ್ಪರ್ಧಾ ಅವಕಾಶ ಒದಗಿಸಲು ಪ್ರತಿ ವರ್ಷ ಒಂದು ರಾಜ್ಯ ಮಟ್ಟದ ಒಲಿಂಪಿಕ್ಸ್ ಮತ್ತು 14 ವರ್ಷ ವಯೋಮಾನದ ಒಳಗಿನವರಿಗೆ ಮಿನಿ ಒಲಿಂಪಿಕ್ಸ್ಆ ಯೋಜಿಸಲಾಗುವುದು.
367. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗಳಿಸುವ ಕ್ರೀಡಾಪಟುಗಳಿಗೆ 06 ಕೋಟಿ ರೂ., ಬೆಳ್ಳಿ ಪದಕ ಪಡೆಯುವ ಕ್ರೀಡಾಪಟುಗಳಿಗೆ 04 ಕೋಟಿ ರೂ. ಹಾಗೂ ಕಂಚಿನ ಪದಕ ಪಡೆಯುವ ಕ್ರೀಡಾಪಟುಗಳಿಗೆ 03 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗುವುದು.
368. ಏಷಿಯನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ವಿಜೇತ ಕ್ರೀಡಾಪಟುಗಳಿಗೆ 35 ಲಕ್ಷ ರೂ., ಬೆಳ್ಳಿ ಪದಕ ವಿಜೇತ ಕ್ರೀಡಾಪಟುಗಳಿಗೆ 25 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತ ಕ್ರೀಡಾಪಟುಗಳಿಗೆ 15 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು.
369. ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಸಮಯದಲ್ಲಿ ಗಾಯಗೊಂಡಲ್ಲಿ ಅವರ ಚಿಕಿತ್ಸೆಗೆ ನೆರವಾಗಲು ಆರೋಗ್ಯ ವಿಮೆ ಸೌಲಭ್ಯವನ್ನು ರಾಜ್ಯ ಸರ್ಕಾರದ ವತಿಯಿಂದ ಒದಗಿಸಲಾಗುವುದು.
370. ರಾಜ್ಯದ 14 ಸ್ಥಳಗಳಲ್ಲಿ ಮುಂದಿನ ಎರಡು ವರ್ಷದೊಳಗೆ 35 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಕ್ರೀಡಾ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು. ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡವನ್ನು ನಿರ್ಮಿಸಲಾಗುವುದು. ಬಳ್ಳಾರಿಯಲ್ಲಿ ಕ್ರೀಡಾ ವಸತಿ ನಿಲಯದ ಉನ್ನತೀಕರಣ ಹಾಗೂ ಕ್ರೀಡಾ ಸೌಕರ್ಯಗಳ ಅಭಿವೃದ್ಧಿಗಾಗಿ ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯಿಂದ 10 ಕೋಟಿ ರೂ. ಒದಗಿಸಲಾಗುವುದು.