ಬೆಳಗಾವಿ : ತಾನು ಜನ್ಮ ನೀಡಿದ್ದ ಮಗನ ಸಾವಿನ ಬಳಿಕ ಆತನ ಅಂತ್ಯಕ್ರಿಯೆಗೆ ಹಣ ಮತ್ತು ಸಂಬಂಧಿಕರಿಲ್ಲದೆ ಆಸ್ಪತ್ರೆಯಲ್ಲಿ ಪರದಾಡಿ ಕೊನೆಗೆ ವೈದ್ಯಾಧಿಕಾರಿಗಳಲ್ಲಿ ಅಂತ್ಯಕ್ರಿಯೆ ನಡೆಸಿಕೊಡುವಂತೆ ಪತ್ರ ಬರೆದು ಬಡ ತಾಯಿಯೋರ್ವಳು ಬೇಡಿಕೊಂಡಿರುವ ಮನಕುಲಕುವ ಘಟನೆಯೊಂದು ಬೆಳಗಾವಿ ನಗರದಲ್ಲಿ ಇಂದು ನಡೆದಿದೆ.
ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ನೀಲವ್ವ ಎನ್ನುವ ಮಹಿಳೆ ತನ್ನ ಹೆತ್ತ ಮಗನಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.
ಆದರೆ ಮಗ ಹಠಾತ್ ಶುಕ್ರವಾರ ತೀರಿಕೊಂಡಿದ್ದಾನೆ. ಮಗನ ಅಂತ್ಯಕ್ರಿಯೆ ಮಾಡಲು ನೀಲವ್ವ ಅವರಿಗೆ ಯಾವ ಸಂಬಂಧಿಕರು ಇಲ್ಲದೆ ಇರುವುದರಿಂದ ಹಾಗೂ ಹಣ ಇಲ್ಲದಿರುವುದರಿಂದ ಒಂದು ದಿನ ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮೃತ ಮಗನ ಶವವನ್ನು ಇರಿಸಲಾಗಿತ್ತು. ಬಳಿಕ ವೈದ್ಯಾಧಿಕಾರಿಗಳಲ್ಲಿ ಪತ್ರ ಒಂದನ್ನು ಬರೆದು ನನ್ನ ಮಗನ ಅಂತ್ಯಕ್ರಿಯೆ ನಡೆಸಿಕೊಡುವಂತೆ ಹೆತ್ತ ಕರಳು ಬೇಡಿಕೊಂಡಿದ್ದಾಳೆ.
ಅದರಂತೆ ವೈದ್ಯಾಧಿಕಾರಿಗಳು ನೀಲವ್ವನ ಮಗನ ಅಂತ್ಯಕ್ರಿಯೆಗಾಗಿ ಅಂಬ್ಯುಲನ್ಸ್ ವ್ಯವಸ್ಥೆ ಮೂಲಕ ಅಂತ್ಯಕ್ರಿಯೆಗಾಗಿ ಸಮಾಜ ಸೇವಕ ಹಾಗೂ ಬೆಳಗಾವಿ ಪಾಲಿಕೆ ಮಾಜಿ ಮೇಯರ್ ವಿಜಯ ಮೋರೆ ಅವರಿಗೆ ಸುದ್ದಿ ತಿಳಿಸಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ವಿಜಯ ಮೋರೆ ಅವರ ಪುತ್ರ ಅಲನ್ ಮೋರೆ ಹಾಗೂ ಗಂಗಾಧರ ಪಾಟೀಲ ಮತ್ತು ಬೆಂಬಲಿಗರು ಮೃತ ಮಗನ ಶವವನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.