ಮಂಗಳೂರು : ಹಿರಿಯ ಸಾಹಿತಿ, ಕಾದಂಬರಿಕಾರ, ಭಾಷಾತಜ್ಞ, ಪ್ರಾಧ್ಯಾಪಕ ಕೆ.ಟಿ.ಗಟ್ಟಿ (ಕೂಡ್ಲು ತಿಮ್ಮಪ್ಪ ಗಟ್ಟಿ) ಅವರು ಸೋಮವಾರ ನಿಧನರಾಗಿದ್ದಾರೆ.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕರ್ನಾಟಕದ ಗಡಿಭಾಗವಾದ ಕೇರಳದ ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದ ಕೆ.ಟಿ.ಗಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯಲ್ಲಿ ನೆಲೆಸಿದ್ದರು.
17 ನೇ ವಯಸ್ಸಿಗೆ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ್ದರು. 25 ವರ್ಷ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು. ಮಣಿಪಾಲದಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಇಥಿಯೋಪಿಯಾದಲ್ಲೂ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಕೆ.ಟಿ.ಗಟ್ಟಿ ಅವರು ಇಂಗ್ಲೆಂಡಿನ ಟ್ರಿನಿಟಿ ಮತ್ತು ಆಕ್ಸಫರ್ಡ್ ಕಾಲೇಜುಗಳಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೋಮ ಪಡೆದಿದ್ದರು.
ಕೂಡ್ಲು ತಿಮ್ಮಪ್ಪ ಗಟ್ಟಿ (ಕೆ.ಟಿ. ಗಟ್ಟಿ) ಒಬ್ಬ ಕಾದಂಬರಿಕಾರ, ಭಾಷಾತಜ್ಞ, ಹಾಗೂ ಶಿಕ್ಷಕರು. ಕಾಸರಗೋಡು ಸಮೀಪದ ಕೂಡ್ಲುವಿನಲ್ಲಿ 1938ರ ಜುಲೈ 22ರಂದು ಜನಿಸಿದರು. ತಂದೆ ಧೂಮಪ್ಪ ಗಟ್ಟಿ ಹಾಗೂ ತಾಯಿ ಪರಮೇಶ್ವರಿ.
ಕಾಸರಗೋಡಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ನಂತರ ಕೇರಳ ವಿಶ್ವವಿದ್ಯಾಲಯದಿಂದ ನಂತರ ಪಿ.ಯು. ಹಾಗೂ ಬಿ.ಎ. ಪದವಿಗಳನ್ನು ಪಡೆದರು. ಅವರು ಕಾಸರಗೋಡಿನ ಕನ್ನಡ ಚಳುವಳಿಯಲ್ಲಿ ಭಾಗವಹಿಸಿದ್ದರು. ಮಾಯಿಪ್ಪಾಡಿಯ ಸರಕಾರಿ ಬೇಸಿಕ್ ಟ್ರೈನಿಂಗ್ ಶಾಲೆಯಿಂದ ಎರಡು ವರ್ಷಗಳ ಶಿಕ್ಷಕರ ತರಬೇತಿ ಪಡೆದ ಅವರು ತಲಚೇರಿಯ ಸರಕಾರಿ ಟ್ರೈನಿಂಗ್ ಕಾಲೇಜಿನಿಂದ ಬಿ.ಎಡ್. ಪದವಿ ಪಡೆದು ಕಾಸರಗೋಡಿನ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇರಿದರು. ಕೇರಳ ವಿಶ್ವವಿದ್ಯಾಲಯದಿಂದ ಪಡೆದ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದ ಅವರು 1986ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆಗೆ ಇಂಗ್ಲಿಷ್ ಉಪನ್ಯಾಸಕರಾಗಿ ಸೇರಿದರು. ಆರು ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾದ ನಂತರ ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿದ್ದರು.
ಧೂಮಪ್ಪ ಗಟ್ಟಿ ಅವರಿಗೆ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದಿತ್ತು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಹೀಗಾಗಿ ಕೆ.ಟಿ.ಗಟ್ಟಿ ಅವರಿಗೆ ಸಾಹಿತ್ಯದ ಒಲವು ಬಾಲ್ಯದಲ್ಲಿ ಬೆಳೆಯಿತು. ಕೆ.ಟಿ.ಗಟ್ಟಿ ಅವರ ಮೊದಲ ಕಾದಂಬರಿ ‘ಶಬ್ದಗಳು’ 1973ರಲ್ಲಿ ಪ್ರಕಟವಾಯಿತು. ಅವರು 48 ಕಾದಂಬರಿಗಳು, 5 ಕಥಾಸಂಕಲನಗಳು, 6 ಪ್ರಬಂಧ ಸಂಕಲನಗಳು, 22 ನಾಟಕಗಳು, 14 ಬಾನುಲಿ ನಾಟಕಗಳು, 2 ಕವನ ಸಂಕಲನಗಳನ್ನು ಬರೆದಿದ್ದಾರೆ. ಅಲ್ಲದೆ, ಆತ್ಮಕಥೆ, ವ್ಯಕ್ತಿಚಿತ್ರ, ಮಕ್ಕಳ ನಾಟಕ ಹಾಗೂ ಪ್ರವಾಸ ಕಥನಗಳನ್ನೂ ಬರೆದಿದ್ದಾರೆ.
ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಬರೆದಿದ್ದಾರೆ.