ವಿಜಯಪುರ: ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಸಾಲುಗಳನ್ನು ಬದಲಾಯಿಸಿರುವುದಕ್ಕೆ ಸಾಹಿತಿಗಳು, ರಾಜಕಾರಣಿಗಳು ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಗ್ರಾಮದ ಮೊರಾರ್ಜಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ‘ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ’ ಎಂಬ ಬರಹದ ಬದಲು, ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಬರಹವನ್ನು ಬದಲಾವಣೆ ಮಾಡಲಾಗಿದೆ.

ಇದಕ್ಕೆ ಪ್ರತಿಪಕ್ಷ ನಾಯಕ ಆ‌ರ್. ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ತೀವ್ರ ವಿರೋಧ ವ್ಯಕಪಡಿಸಿದಾರೆ.

ಈ ಬೆಳವಣಿಗೆ ಬೆನ್ನಲ್ಲೇ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲೀಕ ಮಾನವರ ಸ್ಪಷ್ಟನೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಒಟ್ಟು 23 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. ಈ ಪೈಕಿ ಘಾಳಪೂಜಿ ಹಾಗೂ ಮತ್ತೊಂದು ಶಾಲೆಯಲ್ಲಿ ಮಾತ್ರ ಬರಹ ಬದಲಾವಣೆಯಾಗಿದೆ. ಇತರೆ ಶಾಲೆಗಳಲ್ಲಿ ಬದಲಾವಣೆ ಮಾಡಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರು ಬರಹ ಬದಲಾವಣೆ ಮಾಡಲು ಟೆಲಿಗ್ರಾಂ ಗ್ರೂಪ್‌ನಲ್ಲಿ ಸೂಚನೆ ನೀಡಿದ್ದರು. ಆದರೆ ಕುವೆಂಪು ಅವರ ಬರಹ ಬದಲಾವಣೆಗೆ ಸರ್ಕಾರದ ಸುತ್ತೋಲೆ ಹಾಗೂ ಆದೇಶ ಇಲ್ಲ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಟೆಲಿಗ್ರಾಂ ಗ್ರೂಪ್‌ನಲ್ಲಿ ಬಂದಿರೋ ಸೂಚನೆ ಮೇರೆಗೆ ವಸತಿ ಶಾಲೆಯ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ. ನಮಗೆ ಕುವೆಂಪು ಅವರ ಕುರಿತು ಅವರ ಸಾಹಿತ್ಯದ ಕುರಿತು ಅಪಾರ ಗೌರವವಿದೆ. ಕುವೆಂಪು ಅವರಿಗೆ ಅಗೌರವ ತರುವ ಉದ್ದೇಶ ನಮ್ಮದಲ್ಲ ಎಂದು ಪುಂಡಲೀಕ ಮಾನವರ ಹೇಳಿದ್ದಾರೆ.

ಮೊರಾರ್ಜಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಧೈರ್ಯವಾಗಿ ಪ್ರಶ್ನೆ ಮಾಡಲಿ ಎಂಬ ಉದ್ದೇಶದಿಂದ ಬರಹ ಬದಲಾವಣೆ ಮಾಡಲಾಗಿದೆ. ಪ್ರಶ್ನೆ ಮಾಡುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಮಕ್ಕಳ ಶಿಕ್ಷಣ ವಸತಿ ಊಟ ಸೇರಿದಂತೆ ವಸತಿ ಶಾಲೆಯ ಎಲ್ಲಾ ವಿಚಾರಗಳ ಕುರಿತು ಪ್ರಶ್ನೆ ಮಾಡಲಿ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಲು ಪೋಷಕರು ಧೈರ್ಯವಾಗಿ ಮಾತನಾಡಲಿ ಎಂಬ ಉದ್ದೇಶವಷ್ಟೇ ಬರಹ ಬದಲಾವಣೆ ಹಿಂದಿದೆ ಎಂದು ಪುಂಡಲೀಕ ಮಾನವರ ಸ್ಪಷ್ಟಪಡಿಸಿದ್ದಾರೆ.

ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂಬ ಬರಹ ಬರೆದಿದ್ದು ತಪ್ಪು ಎಂದು ಸಾಹಿತಿಗಳು, ಬುದ್ದಿ ಜೀವಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪು ಅವರಿಗೆ ಮಾಡಿದ ಅವಮಾನವೆಂದು ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ವಿಜಯಪುರ ಜಿ. ಮುದ್ದೇಬಿಹಾಳ ತಾಲೂಕಿನ ಘಾಳಪೂಜೆ ಮೊರಾರ್ಜಿ ವಸತಿ ಶಾಲೆಯಲ್ಲಿ ನೂತನವಾಗಿ ಹಾಕಲಾಗಿದ್ದ ಘೋಷವಾಕ್ಯವನ್ನು ಬದಲಾವಣೆ ಮಾಡಲಾಗಿದೆ. ಮತ್ತೆ “ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ” ಎಂದು ಹಾಕಲಾಗಿದೆ. ವಿವಾದವಾಗುತ್ತಿದ್ದಂತೆಯೇ ಹೊಸದಾಗಿ ಹಾಕಲಾಗಿದ್ದ ಘೋಷವಾಕ್ಯವನ್ನು ತೆರವುಗೊಳಿಸಲಾಗಿದೆ.

ಈ ಕುರಿತು ಪ್ರಾಂಶುಪಾಲ ದುಂಡಪ್ಪ ಪ್ರತಿಕ್ರಿಯೆ ನೀಡಿ, ಮುಖ್ಯ ಕಾರ್ಯದರ್ಶಿಗಳ‌ ಮೌಖಿಕ ಸೂಚನೆಯಂತೆ ಘೋಷವಾಕ್ಯವನ್ನು ಬದಲಾಯಿಸಿದೆ. ಇದು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಘೋಷವಾಕ್ಯ ಮೊದಲಿನಂತೆಯೇ ಬದಲಾವಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಈ ಮೊದಲು ಪೇಪರ್‌ ಮೂಲಕ ಬದಲಿಸಲಾಗಿತ್ತು. ಈಗ ಆ ಪೇಪರ್‌ ಬರಹವನ್ನು ತೆಗೆಯಲಾಗಿದೆ.