ಬೆಂಗಳೂರು : ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಆರ್.ಅಶೋಕ್ ಅವರು ಸದನದಲ್ಲಿ ಪ್ರಸ್ತಾಪಿಸಿದ ಮಾತಿಗೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಅವರು ಅಂಕಿ ಅಂಶಗಳ ಸಮೇತ ತಮ್ಮ ಅವಧಿಯ ಸಾಧನೆಗಳನ್ನು ಬಿಚ್ಚಿಟ್ಟರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ವಿವರಿಸಿದರು.
ಬಿಜೆಪಿಯವರು ಎಂದಾದರೂ ಜಿಲ್ಲೆ, ತಾಲ್ಲೂಕುಗಳಲ್ಲಿರುವ ಹಿಂದುಳಿದ ವರ್ಗಗಳ, ಎಸ್ ಸಿ, ಎಸ್ ಟಿ ಹಾಸ್ಟೆಲ್ ಗಳಿಗೆ ಭೇಟಿ ನೀಡಿದ್ದಾರಾ? ಈ ಸಮುದಾಯದ ವಿದ್ಯಾರ್ಥಿಗಳ ಕಷ್ಟಗಳನ್ನು ಕೇಳಿದ್ದಾರಾ? ಅವರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರಾ? ಎಂದು ಪ್ರಶ್ನಿಸಿ ತಾವು ಸಿಎಂ ಆದಾಗಿನ ಮತ್ತು ಬಿಜೆಪಿ ಅವಧಿಯಲ್ಲಿ ಹಿಂದುಳಿದ ಸಮುದಾಯಗಳ ಏಳಿಗೆಗೆ ಬಿಡುಗಡೆ ಮಾಡಲಾದ ಹಣ, ಅನುದಾನದ ಅಂಕಿ ಅಂಶಗಳನ್ನು ಸದನದ ಮುಂದೆ ಬಿಚ್ಚಿಟ್ಟರು.
2013 ರಿಂದ 2018 ರವರೆಗೆ ಪ್ರತೀ ವರ್ಷ ವಸತಿ ನಿಲಯಗಳ ಭೋಜನಾ ವೆಚ್ಚವನ್ನು ಹೆಚ್ಚಿಸಲಾಗಿದೆ. 2014 ರಲ್ಲಿ ಮೆಟ್ರಕ್ ಪೂರ್ವ ಹಾಸ್ಟೆಲ್ ವಿದ್ಯಾರ್ಥಿಗಳ ಭೋಜನಾ ವೆಚ್ಚ ತಲಾ 750 ರಿಂದ 900ಕ್ಕೆ ಹೆಚ್ಚಿಸಿದ್ದು, ಮೆಟ್ರಿಕ್ ನಂತರದ ಭೋಜನಾ ವೆಚ್ಚ ತಲಾ 850 ರಿಂದ 1000 ಕ್ಕೆ ಹೆಚ್ವಿಸಲಾಯಿತು. ಈ ಮೊತ್ತ 2017-18 ಕ್ಕೆ ಕ್ರಮವಾಗಿ ಮೆಟ್ರಿಕ್ ಪೂರ್ವಕ್ಕೆ 1400 ಕ್ಕೆ, ಮೆಟ್ರಿಕ್ ನಂತರದ್ದು 1500 ಕ್ಕೆ ತಲುಪಿತು ಎಂದು ದಾಖಲೆಗಳನ್ನು ತೋರಿಸಿದರು.
ಆದರೆ ಬಿಜೆಪಿ 2019 ರಿಂದ 2022 ರ ವರೆಗೆ ಒಂದೇ ಒಂದು ರೂಪಾಯಿಯನ್ನೂ ಹೆಚ್ವಿಸಲಿಲ್ಲ. ನಾವು ಒಟ್ಟು ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು ತಲಾ ವಿದ್ಯಾರ್ಥಿಗೆ 650ರೂ ಹೆಚ್ಚಿಸಿದ್ದನ್ನು ವಿವರಿಸಿದರು.
ಹಾಗೆಯೇ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ನಾವು ಕೊಟ್ಟಿದ್ದು 408.02 ಕೋಟಿ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ 880.65 ಕೋಟಿ ಸೇರಿ ಒಟ್ಟು 1288.67 ಕೋಟಿ ಕೊಟ್ಟೆವು.
ಆದರೆ ಬಿಜೆಪಿ ಸರ್ಕಾರ ತಮ್ಮ ಅವಧಿಯಲ್ಲಿ ಕೊಟ್ಟ ವಿದ್ಯಾರ್ಥಿ ವೇತನ ಕೇವಲ 650.78 ಕೋಟಿ ಮಾತ್ರ ಎಂದು ದಾಖಲೆ ತೋರಿಸಿ ಹೇಳಿದರು.
ವಿದ್ಯಾಸಿರಿ ಯೋಜನೆಗೆ ಕಾಂಗ್ರೆಸ್ ಅವಧಿಯಲ್ಲಿ 431.68 ಕೋಟಿ ಕೊಟ್ಟರೆ, ಬಿಜೆಪಿ ತನ್ನ ಅವಧಿಯಲ್ಲಿ ಕೊಟ್ಟಿದ್ದು 197.62 ಕೋಟಿ ಮಾತ್ರ.
ನಮ್ಮ ಅವಧಿಯಲ್ಲಿ ಹೊಸದಾಗಿ 308 ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಹೊಸ ಹಾಸ್ಟೆಲ್ ಗಳನ್ನು ತೆರೆದು 30800 ವಿದ್ಯಾರ್ಥಿಗಳಿಗೆ ಹೊಸದಾಗಿ ಅವಕಾಶ ಒದಗಿಸಿದೆವು. ಬಿಜೆಪಿ ತನ್ನ ಅವಧಿಯಲ್ಲಿ ಕೇವಲ 5 ಹಾಸ್ಟೆಲ್ ಗಳನ್ನು ಮಾತ್ರ ತೆರೆದು ಕೇವಲ 500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿತು ಎಂದು ಅಂಕಿ ಅಂಶ ಬಿಚ್ಚಿಟ್ಟು ಬಿಜೆಪಿ ಸದಸ್ಯರ ಕಡೆಗೆ ನೋಡಿದರು. ಕಾಂಗ್ರೆಸ್ ಸದಸ್ಯರು ಟೇಬಲ್ ಗುದ್ದಿ ಸ್ವಾಗತಿಸಿದರು.
ಕಾಂಗ್ರೆಸ್ ಸರ್ಕಾರದ 2013-18 ರ ಅವಧಿಯಲ್ಲಿ 328 ಮೊರಾರ್ಜಿ ವಸತಿ ಶಾಲೆಗಳನ್ನು ತೆರೆದು 82000 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ , ಶಿಕ್ಷಣ ಒದಗಿಸಿತು. ಬಿಜೆಪಿ 14 ವಸತಿ ಶಾಲೆ ತೆರೆದು 3500 ವಿದ್ಯಾರ್ಥಿಗಳಿಗೆ ಅವಕಾಶವಾಯಿತು ಎನ್ನುತ್ತಾ ಹೀಗೇ ಪ್ರತೀ ಇಲಾಖೆಯ ಅಂಕಿ ಅಂಶಗಳು ನನ್ನ ಕೈಯಲ್ಲಿವೆ. ಎಲ್ಲವನ್ನೂ ಹೇಳುವುದಕ್ಕೆ ಸಮಯ ಆಗುವುದಿಲ್ಲ ಎಂದು ವಿವರಿಸಿದರು.