ವೇಣೂರು :
ವೇಣೂರಿನಲ್ಲಿ 21ನೇ ಶತಮಾನದ ಮೂರನೇ ಮಹಾಮಸ್ತಕಾಭಿಷೇಕಕ್ಕೆ ಸಕಲ ಸಿದ್ದತೆಗಳು ಅಂತಿಮಗೊಂಡಿದೆ. ಇಂದಿನಿಂದ (ಫೆ.22) ವಿರಾಟ್ ವಿರಾಗಿಗೆ ಮಹಾಮಜ್ಜನ ಕಾರ್ಯ ನೆರವೇರಲಿದೆ.
ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂಬ ಸಂದೇಶ ಮಸ್ತಕಾಭಿಷೇಕದೊಂದಿಗೆ ಪಸರಿಸಲಿದೆ.
ಇಂದಿನಿಂದ ಮಾರ್ಚ್ 18 ತನಕ ಲೋಕಕಲ್ಯಾಣಾರ್ಥವಾಗಿ ಜನ ಸಮುದಾಯದಲ್ಲಿ ಧಾರ್ಮಿಕ ಪ್ರವೃತ್ತಿಯ ಸಂರಕ್ಷಣೆಗಾಗಿ ನಡೆಯುವ ಮಹಾಮಸ್ತಕಾಭಿಷೇಕ ಯುಗಳಮುನಿ ಪರಮಪೂಜ್ಯ ಶ್ರೀ ಅಮೋಘ ಕೀರ್ತಿ ಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರ ಕೀರ್ತಿ ಮಹಾರಾಜ ಅವರ ಪಾವನ ಸಾನ್ನಿಧ್ಯದಲ್ಲಿ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಆರಂಭಗೊಳ್ಳಲಿದೆ.
ಕಾರ್ಯಕ್ರಮದಲ್ಲಿ ಮೂಡುಬಿದಿರೆ, ಶ್ರವಣಬೆಳಗೊಳ, ನರಸಿಂಹರಾಜಪುರ, ಲಕ್ಕವಳ್ಳಿ, ಹೊಂಬುಜ ಆರತೀಪುರ, ಸೋಂದ, ಅರಹಂತಗಿರಿ, ಕನಕಗಿರಿ ಕಂಬದಹಳ್ಳಿ, ಕಾರ್ಕಳ, ಶ್ರೀ ಕ್ಷೇತ್ರ ಗಾಂದಣಿ, ವರೂರು, ಕೊಲ್ಲಾಪುರ, ಜಿನಕಂಚಿ ಮೊದಲಾದ ಜೈನ ಮಠಗಳ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ.
ಸಂಜೆ 6:45ರಿಂದ ಮಹಾಮಸ್ತಕಾಭಿಷೇಕ:
ಫೆ. 22 ರಿಂದ ಮಾ.1ರ ತನಕ ಪ್ರತಿದಿನ ಸಂಜೆ ಗಂಟೆ 6:45 ರಿಂದ ಶ್ರೀಬಾಹುಬಲಿಸ್ವಾಮಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಜಲ, ಸೀಯಾಳ, ಹಾಲು, ಇಕ್ಷುರಸ, ಕಲ್ಕರಸ, ಅರಿಶಿಣ ಹುಡಿ, ಕಷಾಯ, ಗಂಧ, ಕೇಸರಿ, ದಿ ಚಂದನ, ಅಷ್ಟಗಂಧ ಮೊದಲಾದ ದ್ರವ್ಯಗಳ ಅಭಿಷೇಕದ ಬಳಿಕ ಪುಷ್ಪವೃಷ್ಠಿ ನಡೆಯಲಿದೆ.
ಪ್ರಥಮ ನಾಲ್ಕು ದಿನ108 ಕಲಶ, ಬಳಿಕ ಮೂರು ದಿನ 216 ಕಲಶ, ಎಂಟನೇ ದಿನ 504 ಕಲಶಗಳಿಂದ ಮಹಾಮಸ್ತಕಾಭಿಷೇಕ ಸೇವಾಕರ್ತೃಗಳಿಂದ ನಡೆಯಲಿದ್ದು, 9ನೇ ದಿನ 1008 ಕಲಶಗಳೊಂದಿಗೆ ಸಮಿತಿ ವತಿಯಿಂದ ನಡೆಯಲಿದೆ.
ಪೂರ್ವಭಾವಿ ತಯಾರಿ: ಸರ್ಕಾರದ ವತಿಯಿಂದ ಮಹಾಮಸ್ತಕಾಭಿಷೇಕ ಬಗ್ಗೆ ರಸ್ತೆ ದುರಸ್ತಿ, ಆಕರ್ಷಕ ದೀಪಾಲಂಕಾರ, ಅಭಿವೃದ್ಧಿ ಕಾಮಗಾರಿ, ನವೀಕರಣ ಇತ್ಯಾದಿ ಬಹುತೇಕ ಪೂರ್ಣಗೊಂಡಿದೆ. ಸಮಿತಿ ವತಿಯಿಂದ ಧಾರ್ಮಿಕ ವಿಧಿ ವಿಧಾನಗಳಿಗೆ ಬೇಕಾದ ಅಗತ್ಯ ತಯಾರಿಗಳು ನಡೆಯುತ್ತಿವೆ. ಈ ಶತಮಾನದ ಮೂರನೇ ಮಹಾಮಸ್ತಕಾಭಿಷೇಕಕ್ಕೆ ವೇಣೂರು ಸಂಪೂರ್ಣ ಸಿದ್ದಗೊಂಡಿದೆ.
ಪ್ರತಿದಿನ ಸುಮಾರು 20 ಸಾವಿರ ಮಂದಿಗೆ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಇದರ ಜತೆ ಹೊರ ಭಾಗಗಳಿಂದ ಆಗಮಿಸುವ ಜನರಿಗೆ ವಸತಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಟ್ಟಳಿಗೆ ಕಾಮಗಾರಿ ಪೂರ್ಣಗೊಂಡಿದ್ದು ಈಗಾಗಲೇ ಸಾವಿರಾರು ಮಂದಿ ವೀಕ್ಷಣೆ ನಡೆಸಿದ್ದಾರೆ. ಹಲವು ಸುತ್ತಿನ ಪೂರ್ವಭಾವಿ ಸಭೆಗಳು ಈಗಾಗಲೇ ನಡೆದಿದ್ದು ಅಗತ್ಯ ಇಲಾಖೆಗಳ ಅಧಿಕಾರಿ ವರ್ಗ ವ್ಯವಸ್ಥೆಗಳನ್ನು ಕೈಗೊಂಡಿದೆ.
ಇತಿಹಾಸ :
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ವೇಣೂರು ಪೇಟೆ ಮಧ್ಯದಲ್ಲೇ ತಾಲೂಕು ಕೇಂದ್ರವಾದ ಬೆಳ್ತಂಗಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹಾದು ಹೋಗುತ್ತದೆ. ವೇಣೂರು ಏಳೂರು ಏನೂರಾಗಿ ಇದೀಗ ವೇಣೂರಾಯಿತು…ಇದು ವೇಣೂರ ಹೆಸರಿನ ಹಿಂದಿರುವ ಇತಿಹಾಸ.ಫಲ್ಗುಣೀ ನದೀ ದಂಡೆಯಲ್ಲಿ ಲಭಿಸಿದ ಶಿಲಾ ಲೇಖವೊಂದು ವೇಣೂರನ್ನು `ಏನೂರು’ ಎಂದು ಕರೆದ ಬಗ್ಗೆ ಉಲ್ಲೇಖಿಸಲ್ಪಟ್ಟಿದೆ. ಏಳು ಊರುಗಳು ಕರಗಿ ಹೋಗಿ `ಏನೂರು’ ಆಯಿತು.ಮುಂದೆ ವೇಣೂರು ಎಂದು ಕರೆಯಲ್ಪಟ್ಟಿತು ಎಂಬುದು ಇದರ ಹಿಂದಿರುವ ಕಥೆ.ಏಳು ಊರು ಮಾಗಣೆಯ ಊರು “ಏನೂರು ಪತ್ತನ” ಪಟ್ಟಣವಾಗಿದ್ದು, ಕ್ರಮೇಣ ವೇಣೂರು ಪಟ್ಟಣ ಆಗಿದೆ ಎನ್ನುವ ವಾದವೂ ಇದೆ.ವೇಣೂರು ಎಂದು ಕರೆಯಲ್ಪಡುವ ಈ ಊರಿನಲ್ಲಿ 400ವರುಷಗಳ ಹಿಂದೆ 770 ಜೈನ ಕುಟುಂಬಗಳು ವಾಸಿಸುತ್ತಿದ್ದವು ಎಂಬ ಮಾಹಿತಿ `ಜೈನಾಚಾರ’ ಎಂಬ ಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಿದೆ.ಆ ಸಂದರ್ಭದಲ್ಲಿ ವೇಣೂರು ಬೃಹತ್ ವ್ಯಾಪಾರ ಕೇಂದ್ರವಾಗಿಯೇ ಗುರುತಿಸಲ್ಪಟ್ಟಿತು. ಸೆಟ್ಟಿಗಾರರು, ಯೆಳಮೆಗಳು, ಹಲರು ಮೊದಲಾದ ಹೆಸರಿನಿಂದ ಕರೆಯಲ್ಪಡುತ್ತಿದ್ದ ವ್ಯಾಪಾರಿ ಸಂಘಗಳು ವೇಣೂರಿನಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದವು.
ಬಾಹುಬಲಿ ಮೂರ್ತಿ
ಬದಲಾಯಿಸಿ
ವೇಣೂರಿನ ವಿಶೇಷ ಆಕರ್ಷಣೆಯೆಂದರೆ ಬಾಹುಬಲಿ ಮೂರ್ತಿ . ಅಜಿಲ ಮನೆತನದ ತಿಮ್ಮರಾಜನು ಚಾರುಕೀರ್ತಿಗಳ ಉಪದೇಶದಿಂದ 1604ರಲ್ಲಿ ಸ್ಥಾಪಿಸಿದ ಎಂದು ಶಾಸನ ಹೇಳುತ್ತದೆ. 35 ಅಡಿ ಎತ್ತರ.ವಿಗ್ರಹ ಬಲ ಬದಿಯಲ್ಲಿರುವ ಸಂಸ್ಕೃತ ಶಾಸನದಲ್ಲಿ ಚಾಮುಂಡವಂಶದ ತಿಮ್ಮರಾಜನು ಹಾಗೂ ಮೂಡುಬಿದಿರೆಯ ತನ್ನ ಗುರುಗಳಾದ ಚಾರುಕೀರ್ತಿ ಮಹಾ ಸ್ವಾಮೀಜಿ ಜೈನ ಮಠ ಮೂಡುಬಿದಿರೆ ಯವರ ಅಪ್ಪಣೆಯ ಪ್ರಕಾರ ಭುಜಬಲಿಯ ಪ್ರತಿಮೆಯನ್ನು ಶಾಲಿವಾಹನಶಕ 1525 ನೇ ಶೋಭಕೃತ್ಸಂವತ್ಸರ ಪಾಲ್ಗುಣಮಾಸ, ಶುಕ್ಲಪಕ್ಷ, ದಶಮೀತಿಥಿ, ಗುರುವಾರ, ಪುಷ್ಯಾನಕ್ಷತ್ರ, ಮಿಥುನಲಗ್ನ (ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.40 ರಒಳಗೆ)’ (ಕ್ರಿ.ಶ. 1604 ನೇ ಮಾರ್ಚ್ 1ನೇ ತಾರೀಕು ಗುರುವಾರ) ಪ್ರತಿಷ್ಠಾಪಿಸಿದ.ಎಲ್ಲ ಬಾಹುಬಲಿ ವಿಗ್ರಹಗಳೂ ಗುಡ್ಡ- ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದರೆ, ವೇಣೂರಿನ ಈ ಬಾಹುಬಲಿ ಮೂರ್ತಿ ಮಾತ್ರ ಭೂಮಟ್ಟದಲ್ಲಿಯೇ ಇದೆ. ಆದ್ದರಿಂದ ಸುಲಭದಲ್ಲಿ ಬಾಹುಬಲಿ ದರ್ಶನ ಮಾಡಬಹುದಾದ ಅಪರೂಪದ ಕ್ಷೇತ್ರ ಇದಾಗಿದೆ. ವೇಣೂರಿನಲ್ಲಿ ಶ್ರೀ ಆದೀಶ್ವರ ಸ್ವಾಮಿ ಬಸದಿ, ಶಾಂತೀಶ್ವರ ಸ್ವಾಮಿ ಬಸದಿ, 24 ತೀರ್ಥಂಕರರ ಬಸದಿ, ಅಕ್ಕಂಗಳ ಬಸದಿ, ಭಿನ್ನಾಣಿ ಬಸದಿ ಎಂಬ 7 ಜಿನ ಚೈತ್ಯಾಲಯಗಳಿವೆ
ಕಾರ್ಕಳ ದ ಗೋಮಟ ವಿಗ್ರಹಮಾಡಿದ “ವೀರ ಶಂಭು ಕಲ್ಕುಡ” ಕುಟುಂಬದವರನ್ನು ಕರೆಯಿಸಿ ವೇಣೂರಿನ ಸಮೀಪದ (ಕಂಬಳ ನಡೆಯುವ ಸ್ತಳದ ಹತ್ತಿರ ) ಕಲ್ಯಾಣಿ ಎಂಬ ಸ್ಥಳದಲ್ಲಿ ಏಕಶಿಲೆಯಿಂದ ಗೋಮಟೇಶ್ವರ ಮೂರ್ತಿಯನ್ನು ಕೆತ್ತಿಸಿದನು.ತುಳುನಾಡಿನ ಶಿಲ್ಪಿ ವೀರ ಶಂಭು ಕಲ್ಕುಡನು ವೇಣೂರು ಬಾಹುಬಲಿ ಮೂರ್ತಿಯನ್ನು ಒಂದು ಕೈ,ಒಂದು ಕಾಲಿನಿಂದ,ಒಂದು ರಾತ್ರಿ ಬೆಳಗಾಗುವುದರೊಳಗೆ ನಿರ್ಮಿಸಿ ಸ್ಥಾಪಿಸಿದ ನೆಂದು ತುಳುನಾಡಿನ ಸಂದಿ,ಪಾಡ್ದನಗಳಲ್ಲಿ ಹೇಳಲ್ಪಡುತ್ತದೆ.
ಗೋಮಟೇಶ್ವರ ಮೂರ್ತಿ
ಈ ಗೋಮಟೇಶ್ವರ ಮಹಾ ಮೂರ್ತಿಗೆ 1928,1956,2000,2012 ನೇ ಇಸವಿಯಲ್ಲಿ ಮಹಾಮಸ್ತಕಾಭಿಷೇಕ ನಡೆದಿದ್ದು,ಇದೀಗ 12ವರ್ಷಗಳ ತರುವಾಯ ಮತ್ತೆ ಮಹಾ ಮಸ್ತಕಾಭಿಷೇಕದ ಸಂಭ್ರಮ.