ಬೆಳಗಾವಿ :
ಬೆಳಗಾವಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ರಾಜ್ಯದ ಪ್ರಭಾವಿ ಸಚಿವ ಸತೀಶ ಜಾರಕಿಹೊಳಿ ಮನಸಾರೆ ಹೊಗಳಿದರು.

ಗಡ್ಕರಿ ಅವರು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಂತರ ಹೆದ್ದಾರಿಗಳ ಅಭಿವೃದ್ಧಿ ಪರ್ವ ಆರಂಭವಾಗಿದೆ. ಪಕ್ಷಾತೀತವಾಗಿ ಅವರು ಕೆಲಸ ಮಾಡುತ್ತಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಸರ್ಕಾರಗಳು ಇವೆ ಎಂಬ ಭಾವನೆ ಬರದು. ಆ ರೀತಿಯಲ್ಲಿ ಗಡ್ಕರಿಯವರು ಕೆಲಸ ಮಾಡುತ್ತಾರೆ. ಕೇಂದ್ರದಲ್ಲಿರುವುದು ಸಹ ನಮ್ಮದೇ ಸರಕಾರ ಎಂಬಷ್ಟು ಪ್ರೋತ್ಸಾಹವನ್ನು ಅವರು ನಮಗೆ ನೀಡಿದ್ದಾರೆ ಎಂದು ಸತೀಶ ಜಾರಕಿಹೊಳಿ ಅವರು ಹೊಗಳಿದರು.

6,975 ಕೋಟಿ ರೂ. ಮೌಲ್ಯದ 400 ಕಿ.ಮೀ. ರಸ್ತೆ ಕಾಮಗಾರಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯ ವಿವಿಧ ಯೋಜನೆಗಳಿಗೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರನ್ನು ನೋಡಿದರೆ ಹೆಮ್ಮೆ ಆಗುತ್ತದೆ. ನಿತಿನ್ ಗಡ್ಕರಿ ಅಂದರೆ ಸಡಕ್ ಕೆ ಭಾಷಾ ಎಂದು ಹೊಗಳಿದ್ದಾರೆ.

ಪಕ್ಷಕ್ಕಿಂತ ರಸ್ತೆ ಅಭಿವೃದ್ಧಿ ಕಾರ್ಯ ಮುಖ್ಯ.
ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುತ್ತಾರೆ. ಕಳೆದ 9 ತಿಂಗಳಲ್ಲಿ 5 ಬಾರಿ ಗಡ್ಕರಿ ಅವರನ್ನು ಭೇಟಿ ಮಾಡಿರುವೆ. ರಾಜ್ಯದಲ್ಲಿ ನನೆಗುದ್ದಿಗೆ ಬಿದ್ದಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸೂಚಿಸಿದ್ದಾರೆ. ಅದರಲ್ಲಿ ಕೆಲವೊಂದಿಷ್ಟು ಕಾಮಗಾರಿ ಆರಂಭ ಮಾಡಿದ್ದೇವೆ ಎಂದು ತಿಳಿಸಿದರು.

ಕೇಂದ್ರ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರ ಇದ್ದಾಗ ದ್ವೇಷದ ಭಾವನೆ ಇರುತ್ತದೆ. ಆದರೆ ನಿತಿನ್ ಗಡ್ಕರಿ ಅವರ ಸಚಿವಾಲಯದಲ್ಲಿ ಹಾಗಾಗಿಲ್ಲ. ಅದು ನಮಗೆ ನಮ್ಮದೇ ಸರ್ಕಾರ ಎನ್ನುವ ಭಾವನೆ ಬರುತ್ತದೆ. ಪಕ್ಷಕ್ಕಿಂತ ರಸ್ತೆ ಅಭಿವೃದ್ಧಿ ಕಾರ್ಯ ಮುಖ್ಯ. ಇದೇ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಬಿಜೆಪಿ, ಕಾಂಗ್ರೆಸ್ ಶಾಸಕರಿಗೆ ಸಮಾನ ಅನುದಾನ ನೀಡಿದ್ದೇವೆ.
ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಗೋಕಾಕ ಫಾಲ್ಸ್, ಬೆಳಗಾವಿ ನಗರದ ಅಭಿವೃದ್ಧಿಗೆ ಸಹ ಕೊಡುತ್ತೇವೆ. ಕೇಂದ್ರ ಸಾರಿಗೆ ಸಚಿವಾಲಯದಿಂದ ರಾಜ್ಯದ ರಸ್ತೆಗಳು ಸುಧಾರಣೆ ಆಗಬೇಕು. ಈ ರಸ್ತೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಆಗಬೇಕು. ಇದರಿಂದ ಅನೇಕ ಉದ್ಯಮಿಗಳು ಬರಬೇಕೆಂದು ಕೇಂದ್ರ ಸರ್ಕಾರ ಕನಸಿದೆ ಎಂದರು.