ಗೋಕಾಕ :
ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಾಯ- ಸಹಕಾರ ನೀಡುವುದಾಗಿ ಕೆಎಂಎಫ್ ನಿರ್ದೇಶಕರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಶುಕ್ರವಾರದಂದು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ
ಮಂಡಳಿಯ ಸದಸ್ಯರು ನೀಡಿರುವ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದ ಅವರು, ರೈತರ ಅಭ್ಯುದಯಕ್ಕಾಗಿ ಸರಕಾರ ಜಾರಿಗೆ ಮಾಡಿರುವ ಎಲ್ಲ ಯೋಜನೆಗಳನ್ನು ಮುಟ್ಟಿಸುವ ಪ್ರಾಮಾಣಿಕ ಜವಾಬ್ದಾರಿಯು ನಿಮ್ಮ ಹೆಗಲ ಮೇಲಿದೆ ಎಂದು ನೂತನ ಸದಸ್ಯರಿಗೆ ಕಿವಿ ಮಾತು ಹೇಳಿದರು.
ಗೋಕಾಕ ಮತ್ತು ಮೂಡಲಗಿ ತಾಲೂಕಿನ ಸಮಸ್ತ ರೈತರು ಹಾಗೂ ಸಂಘದ ಶೇಅರ್ ಸದಸ್ಯರ ಸಹಕಾರದಿಂದ ಈ ಅವಧಿಗೂ ಅವಿರೋಧವಾಗಿ ಆಯ್ಕೆ ನಡೆದಿದೆ. ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘವು ರೈತರಿಗೆ ಸೇರಿದ್ದು. ಇಲ್ಲಿ ಪಕ್ಷ ಮುಖ್ಯವಾಗಿರುವದಿಲ್ಲ. ಸಹಕಾರಿ ತತ್ವದಡಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಘದ ಶ್ರೇಯೋಭಿವೃದ್ದಿಗೆ ಶ್ರಮಿಸುವ ಮೂಲಕ ರೈತರು ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಂಡು ಹೋಗುವುದಾಗಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಅವಿರೋಧವಾಗಿ ಆಯ್ಕೆಯಾಗಲು ನೇತೃತ್ವ ವಹಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಆಡಳಿತ ಮಂಡಳಿಯ ಸದಸ್ಯರು ಸತ್ಕರಿಸಿದರು.
ಸಂಘದ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಯಾಗಿರುವ ಅಶೋಕ ನಾಯಿಕ, ವಿಠ್ಠಲ ಪಾಟೀಲ, ಸುಭಾಸ ಢವಳೇಶ್ವರ, ಬಸಗೌಡ ಪಾಟೀಲ ಮೆಳವಂಕಿ,
ಬಸಪ್ಪ ಕುರಿಬಾಗಿ, ಮಹಾಂತೇಶ ಅವರಗೋಳ, ಮುತ್ತೆಪ್ಪ ಜಲ್ಲಿ, ಸಿದ್ದಪ್ಪ ಹಮ್ಮನವರ, ಗಂಗವ್ವ ಸಾತಪ್ಪ ಜೈನ, ಲುಬನಾ ದೇಸಾಯಿ, ಎಸ್.ಎಸ್.ಪಾಟೀಲ, ಪಾಟೀಲ, ಪ್ರಭಾಕರ ಬಂಗೆನ್ನವರ, ಸುರೇಶ ಗುಡ್ಡಾಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.